ದ.ಕ.: ಮೊದಲ ಹಂತದ ಜನಗಣತಿ ಮುಂದಿನ ವಾರ ಪೂರ್ಣ: ಮೇ 15ರ ಗಡುವಿನೊಳಗೆ ಪೂರ್ತಿ, ಶೇ.52 ದಾಟಿದ ಗಣತಿ

KannadaprabhaNewsNetwork |  
Published : May 03, 2026, 02:30 AM IST
ಗಣತಿಯ ಕಿಟ್‌ ಜೊತೆ ಗಣತಿದಾರರು  | Kannada Prabha

ಸಾರಾಂಶ

2027 ಮಹಾಜನಗಣತಿಯ ಮೊದಲ ಹಂತದ ಗಣತಿ ಗಡುವಿಗೂ ಮೊದಲೇ ದ.ಕ. ಜಿಲ್ಲೆಯಲ್ಲಿ ಪೂರ್ಣಗೊಳ್ಳಲಿದೆ. ಮೇ 15ರೊಳಗೆ ಗಣತಿ ಮನೆಗಳ ಪಟ್ಟಿಯನ್ನು ಗಣತಿದಾರರು ಅಂತಿಮಗೊಳಿಸಬೇಕಾಗಿದೆ. ಈ ಕಾರ್ಯ ಶನಿವಾರ ವೇಳೆಗೆ ಶೇ.52 ದಾಟಿದ್ದು, ಮುಂದಿನ ವಾರದೊಳಗೆ ಶೇ.ನೂರರಷ್ಟು ಪೂರ್ಣಗೊಳ್ಳುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

2027 ಮಹಾಜನಗಣತಿಯ ಮೊದಲ ಹಂತದ ಗಣತಿ ಗಡುವಿಗೂ ಮೊದಲೇ ದ.ಕ. ಜಿಲ್ಲೆಯಲ್ಲಿ ಪೂರ್ಣಗೊಳ್ಳಲಿದೆ. ಮೇ 15ರೊಳಗೆ ಗಣತಿ ಮನೆಗಳ ಪಟ್ಟಿಯನ್ನು ಗಣತಿದಾರರು ಅಂತಿಮಗೊಳಿಸಬೇಕಾಗಿದೆ. ಈ ಕಾರ್ಯ ಶನಿವಾರ ವೇಳೆಗೆ ಶೇ.52 ದಾಟಿದ್ದು, ಮುಂದಿನ ವಾರದೊಳಗೆ ಶೇ.ನೂರರಷ್ಟು ಪೂರ್ಣಗೊಳ್ಳುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.

ಮನೆಗಳ ಪಟ್ಟಿ ಗಣತಿಯಲ್ಲಿ ಮೂಲ್ಕಿ ತಾಲೂಕು ಶೇಕಡ ನೂರು ಸಾಧನೆ ಹೊರತುಪಡಿಸಿದರೆ ಬೇರೆ ತಾಲೂಕುಗಳಲ್ಲಿ ಇಂತಹ ಸಾಧನೆ ಆಗಿಲ್ಲ. ಸೋಮೇಶ್ವರ ಪಟ್ಟಣ, ವಿಟ್ಲ ನಗರ, ಸುಳ್ಯ ಗ್ರಾಮೀಣ, ಬೆಳ್ತಂಗಡಿ ತಾಲೂಕುಗಳಲ್ಲಿ ಶೇ.94ರಿಂದ ಶೇ.98ರ ವರೆಗೆ ಸಾಧನೆಯ ಹೊಸ್ತಿಲಲ್ಲಿವೆ. ಇಂತಹ 23 ಕಡೆಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೂಡ ಸೇರಿದೆ. ಅತೀ ಕನಿಷ್ಟ ಮನೆ ಪಟ್ಟಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಶೇ. 6.41ರಷ್ಟು ಗಣತಿ ನಡೆದಿದೆ. ಇದನ್ನು ಹೊರತುಪಡಿಸಿದರೆ ಪುತ್ತೂರು ಗ್ರಾಮೀಣವೂ ಗಣತಿ ಕಾರ್ಯದಲ್ಲಿ(ಶೇ.32.76) ಹಿಂದುಳಿದಿದೆ.

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೀರಸ: ನಗರ ಪಾಲಿಕೆ, ಸ್ಥಳೀಯಾಡಳಿತ, ತಾಲೂಕು ಸೇರಿ ಒಟ್ಟು 23 ಪ್ರದೇಶಗಳಲ್ಲಿ 3,997 ಬ್ಲಾಕ್‌ಗಳನ್ನು ಗಣತಿಗೆ ಗುರುತಿಸಲಾಗಿದೆ. ಇದರಲ್ಲಿ 1,879 ಬ್ಲಾಕ್‌ಗಳಲ್ಲಿ ಗಣತಿ ಪ್ರಗತಿಯಲ್ಲಿದ್ದು, 2,118 ಬ್ಲಾಕ್‌ಗಳಲ್ಲಿ ಗಣತಿ ಪೂರ್ಣಗೊಂಡಿದೆ. ಈ ಪೈಕಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 873 ಬ್ಲಾಕ್‌ಗಳಲ್ಲಿ 817 ಬ್ಲಾಕ್‌ ಬಾಕಿ ಇದ್ದು, ಕೇವಲ 56 ಬ್ಲಾಕ್‌ಗಳಲ್ಲಿ ಮಾತ್ರ ಪೂರ್ತಿಯಾಗಿರುವುದನ್ನು ಜಿಲ್ಲಾ ಗಣತಿ ಅಂಕಿ ಅಂಶಗಳು ತಿಳಿಸುತ್ತವೆ. ಬಿಸಿಲಿಗೆ ಗಣತಿ ಇಲ್ಲ: ಪ್ರಸಕ್ತ ಕರಾವಳಿಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ದಿನ ಗಣತಿಯಿಂದ ಗಣತಿದಾರರಿಗೆ ಜಿಲ್ಲಾಡಳಿತ ವಿನಾಯ್ತಿ ನೀಡಿದೆ. ತೀವ್ರ ಬಿಸಿಲಿನ ಬೇಗೆಯ ಕಾರಣ ಮುಂಜಾನೆ ಮತ್ತು ಸಂಜೆ ವೇಳೆಗೆ ಮಾತ್ರ ಗಣತಿ ಕಾರ್ಯ ನಿರ್ವಹಿಸುವಂತೆ ಗಣತಿದಾರರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಗಣತಿದಾರರ ಆರೋಗ್ಯ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವಂತೆ ಆರೋಗ್ಯ ಇಲಾಖೆಗೂ ಸೂಚನೆ ನೀಡಲಾಗಿದೆ. ಸದ್ಯ ಅಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ಹೇಳುತ್ತಿವೆ. ಶಾಲಾ ಕಾಲೇಜು ಶಿಕ್ಷಕ, ಉಪನ್ಯಾಸಕರಲ್ಲದೆ, ಕಂದಾಯ ಮತ್ತಿತರ ಇಲಾಖಾ ಅಧಿಕಾರಿಗಳನ್ನೂ ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಿಬ್ಬಂದಿ ನಿಯೋಜನೆಯಿಂದ ಇಲಾಖಾ ಕೆಲಸಗಳಿಗೆ ತುಸು ಅಡ್ಡಿ ಉಂಟಾಗಿದೆ. ಸ್ವಯಂ ಗಣತಿಯಲ್ಲಿ ದ.ಕ. ರಾಜ್ಯಕ್ಕೆ ಫಸ್ಟ್‌!

ಈ ಜನಗಣತಿ ಆರಂಭದ ಹಂತದಲ್ಲಿ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ದ.ಕ. ಜಿಲ್ಲಾಡಳಿತ ಮನೆಯಿಂದಲೇ ಮೊಬೈಲ್‌ ಅಥವಾ ಆನ್‌ಲೈನ್‌ ಮೂಲಕ ಸ್ವಯಂ ಆಗಿ ಮಾಹಿತಿಗಳನ್ನು ಭರ್ತಿಗೊಳಿಸಿ ಗಣತಿದಾರರು ಮನೆಗೆ ಆಗಮಿಸುವಾಗ ಸುಲಭವಾಗುವಂತೆ ಸೂಚನೆ ನೀಡಿತ್ತು. ಇದನ್ನು ಅಕ್ಷರಶಃ ದ.ಕ. ಜಿಲ್ಲೆಯ ಜನತೆ ಪಾಲಿಸಿದಂತಿದೆ. ಸುಮಾರು 1 ಲಕ್ಷ ಮಂದಿ ಸ್ವಯಂ ಆಗಿ ತಮ್ಮ ಗಣತಿ ವಿವರವನ್ನು ಆನ್‌ಲೈನ್‌ ಮೂಲಕ ನಮೂದಿಸಿದ್ದಾರೆ. ಇದು ರಾಜ್ಯದ ಮಟ್ಟಿಗೆ ದ.ಕ. ಜಿಲ್ಲೆಯನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗಣತಿ ಕಾರ್ಯ ನಡೆಯುತ್ತಿದ್ದು, ಮುಂದಿನ ವಾರದೊಳಗೆ ಜಿಲ್ಲೆಯಲ್ಲಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಸ್ವಯಂ ಗಣತಿಯಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಗಣತಿದಾರರು ಮನೆಗಳಿಗೆ ಭೇಟಿ ನೀಡುವ ವೇಳೆ ಜನತೆ ಸಹಕಾರ ನೀಡುವ ಮೂಲಕ ಜನಗಣತಿ ಯಶಸ್ಸಿಗೆ ಕೈಜೋಡಿಸಬೇಕು.

-ರಾಜು ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಗಣತಿ ಅಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಯಣದ ಭಕ್ತಿರಸದಲ್ಲಿ ಮಿಂದೆದ್ದ ಗೋಕುಲಂ ಗೋಶಾಲೆ
ದುಬೈನಿಂದ ಪತಿ ಪಾರ್ಸೆಲ್‌ ಕಳುಹಿಸಿದ್ದಾರೆ ಎಂದು ನಂಬಿಸಿ ಮಹಿಳೆಗೆ ವಂಚನೆ