ನವದೆಹಲಿ: ‘ನಮಗೆ ಯುವಜನಾಂಗದ ಮೇಲೆ ವಿಶ್ವಾಸ ಇದೆ. ಈ ದೇಶಕ್ಕೆ ನಿಮ್ಮ ಅಗತ್ಯವಿದೆ. ಮುಂದಿನ ಮೂರ್ನಾಲ್ಕು ದಶಕಗಳಲ್ಲಿ ನೀವು (ಯುವಜನತೆ) ತೆಗೆದುಕೊಳ್ಳುವ ನಿರ್ಧಾರಗಳು ವಿಕಸಿತ ಭಾರತದ ಕಡೆಗಿನ ದೇಶದ ಪಯಣದ ಮೇಲೆ ಪ್ರಭಾವ ಬೀರಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಐಐಟಿ ದೆಹಲಿಯ 57ನೇ ಘಟಿಕೋತ್ಸವದಲ್ಲಿ ಶನಿವಾರ ಪಾಲ್ಗೊಂಡಿದ್ದ ಅವರು, ಜೆನ್‌ಝೀ (ಯುವಕರ) ಹೋರಾಟ ಅಂತ್ಯದ ಬಳಿಕ, ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದರು.
‘ಪ್ರತಿ ತಲೆಮಾರುಗಳೂ ಅವರ ಕಾಲಘಟ್ಟದ ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತವೆ. ಇದರ ಜತೆಗೆ ಆ ತಲೆಮಾರುಗಳಿಗೆ ಅವರದ್ದೇ ಆದ ರಾಷ್ಟ್ರೀಯ ಜವಾಬ್ದಾರಿಗಳೂ ಇವೆ. ದೇಶದ ಸರ್ವತೋಮುಖ ಅಭಿವೃದ್ಧಿಯೂ ಯುವಜನರ ಗುರಿಗಳಲ್ಲಿ ಒಂದಾಗಿರಬೇಕು’ ಎಂದರು.
‘ಮುಂದಿನ 30ರಿಂದ 35 ವರ್ಷಕಾಲ ನೀವು ನಿಮ್ಮ ಜೀವನದಲ್ಲಿ ಏನು ಮಾಡುತ್ತೀರೋ ಅದು ‘ವಿಕಸಿತ ಭಾರತ’ದ ಕಡೆಗಿನ ದೇಶದ ಪ್ರಯಾಣದ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರ ಕೂಡ ದೇಶಕ್ಕೆ ಹೇಗೆ ನೆರವಾಗಲಿದೆ? ಮತ್ತು ದೇಶದ ಯಾವ ಅಗತ್ಯವನ್ನು ಪೂರೈಸಲಿದೆ ಎಂಬುದನ್ನು ಆಧರಿಸಿರಬೇಕು’ ಎಂದರು.
‘ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಕರಗತ ಮಾಡಿಕೊಳ್ಳಬೇಕು ಎಂದ ಅವರು, ಪ್ರಶ್ನೆ ಕೇಳುವುದಷ್ಟೇ ಅಲ್ಲ, ಅದರ ಜತೆಗೆ ಅದಕ್ಕೆ ಪರಿಹಾರ ಕಂಡುಹಿಡಿಯುವ ಧೈರ್ಯವನ್ನೂ ಬೆಳೆಸಿಕೊಳ್ಳಬೇಕು. ಹಲವು ಐಐಟಿ ಪದವೀಧರರ ಯಶಸ್ಸಿನ ಗುಟ್ಟು ಸರಿಯಾದ ಉತ್ತರ ಕಂಡುಹಿಡಿದದ್ದರಲ್ಲಿ ಇಲ್ಲ, ಬದಲಾಗಿ ಜಗತ್ತು ಕೇಳಲು ಮರೆತ ಪ್ರಶ್ನೆಗಳನ್ನು ಗುರುತಿಸಿದ್ದರಲ್ಲಿ ಅಡಗಿದೆ’ ಎಂದು ಅಭಿಪ್ರಾಯಪಟ್ಟರು.
ಹೊಸತನ್ನು ಕಲಿಯುವವರು ಗೆಲ್ತಾರೆ:
ಇಂದು ಜಗತ್ತು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಜಗತ್ತು, ಜಗತ್ತಿನ ಅಧಿಕಾರ ಲೆಕ್ಕಾಚಾರ, ತಂತ್ರಜ್ಞಾನ, ಉದ್ಯಮಗಳು ಮತ್ತು ವೃತ್ತಿಗಳು ತ್ವರಿತಗತಿಯಲ್ಲಿ ಬದಲಾಗುತ್ತಲೇ ಇರುತ್ತವೆ. ಮುಂದಿನ 20-30 ವರ್ಷಗಳಲ್ಲಿ ಏನಾಗಬಹುದು, ಜಗತ್ತು ಹೇಗೆ ಬದಲಾಗಬಹುದು ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಜೀವನದಲ್ಲಿ ನಿಮ್ಮ ಕುತೂಹಲ, ಹೊಸದನ್ನು ಕಲಿಯುವ ತುಡಿತವನ್ನು ಜೀವಂತವಾಗಿರಿಸಿಕೊಳ್ಳಿ. ಯಾರು ಹೊಸತನ್ನು ಕಲಿಯುತ್ತಾರೋ ಅವರು ಗೆಲ್ಲುತ್ತಾರೆ ಎಂಬುದನ್ನು ಯಾವತ್ತೂ ನೆನಪಿಟ್ಟುಕೊಳ್ಳಿ ಎಂದು ಮೋದಿ ತಿಳಿಸಿದರು.
ಹೊಸ ಪರಿಸ್ಥಿತಿಗಳು ಹಾಗೂ ಸವಾಲುಗಳಿಗೆ ಯಾರೆಲ್ಲ ತೆರೆದುಕೊಳ್ಳುತ್ತಾರೋ ಅವರು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತಾರೆ ಎಂದ ಅವರು, ನಿಮ್ಮ ಪಾಲಿಗೆ ಯಾವತ್ತಾದರೂ ಸವಾಲುಗಳು ದೊಡ್ಡದೆನಿಸಿದರೆ ಆತಂಕಪಡಬೇಡಿ, ಅದನ್ನು ಸಣ್ಣ ಸಣ್ಣಭಾಗಗಳಾಗಿ ವಿಂಗಡಿಸಿ ಎಂದು ಸಲಹೆ ನೀಡಿದರು.
ಯುವಕರಿಂದ ರಾಕೆಟ್ ಉಡ್ಡಯನ:
ಇದೇ ವೇಳೆ ಖಾಸಗಿ ಸಂಸ್ಥೆ ಸ್ಕೈರೂಟ್‌ನ ವಿಕ್ರಂ-1 ರಾಕೆಟ್‌ನ ಯಶಸ್ವಿ ಪ್ರಯೋಗವನ್ನು ಪ್ರಸ್ತಾಪಿಸಿದ ಮೋದಿ, ಇಂದು ಯುವಜನರಿಗಾಗಿ ಹೊಸ ಕ್ಷೇತ್ರಗಳು ತೆರೆದುಕೊಳ್ಳುತ್ತಿವೆ. ಸರ್ಕಾರವು ಯುವಜನರಿಗೆ ತಮ್ಮ ಕೊಡುಗೆ ನೀಡಲು ಹಲವು ಮಾರ್ಗಗಳನ್ನು ತೆರೆದಿದೆ. ನನ್ನ ವಂಶದಲ್ಲೇ ರಾಕೆಟ್ ತಯಾರಿಸಿದ ಮೊದಲ ವ್ಯಕ್ತಿ ಎಂದು ಇಂದು ಯುವಕರು ಹೇಳಿಕೊಳ್ಳುತ್ತಿದ್ದಾರೆ, ಇಂದು ನಮ್ಮ ಯುವಕರು ರಾಕೆಟ್ ಉಡ್ಡಯನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜತೆಗೆ ಚಿಪ್‌ನಿಂದ ಹಿಡಿದು ಶಿಪ್ ವರೆಗೆ ಪ್ರತಿಯೊಂದೂ ನಿಮ್ಮ ಕೈಗಳಿಂದ ದೇಶದಲ್ಲೇ ಉತ್ಪಾದನೆಯಾಗಲಿದೆ ಎಂದು ನಾನು ಖಚಿತವಾಗಿ ನಂಬಿದ್ದೇನೆ ಎಂದು ತಿಳಿಸಿದರು.
ಮೋದಿ ಹೇಳಿದ್ದೇನು?
- ಪ್ರಶ್ನೆಗೆ ಸೀಮಿತರಾಗಬೇಡಿ, ಪರಿಹಾರವನ್ನೂ ಹುಡುಕಿ
- ಯಾರು ಹೊಸತನ್ನು ಕಲಿಯುತ್ತಾರೋ ಅವರು ಗೆಲ್ತಾರೆ
- ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಹೊಂದಿರಬೇಕು
- ಐಐಟಿ ದೆಹಲಿ ಘಟಿಕೋತ್ಸವದಲ್ಲಿ ಮೋದಿ ಭಾಷಣ
- ಜೆನ್-ಝೀ ಪ್ರತಿಭಟನೆ ಬಳಿಕ ಯುವಕರ ಜತೆ ಮಾತು
