ಶಾರದೆ ಜಲಸ್ತಂಭನದೊಂದಿಗೆ ಮಂಗಳೂರು ದಸರಾ ಸಂಪನ್ನ

KannadaprabhaNewsNetwork |  
Published : Oct 26, 2023, 01:01 AM IST
ಶ್ರೀ ಶಾರದಾ ದೇವಿಯ ಜಲಸ್ತಂಭನದ ದೃಶ್ಯ. | Kannada Prabha

ಸಾರಾಂಶ

ಪುಷ್ಕರಿಣಿಯಲ್ಲಿ ಎರಡು ದೋಣಿಗಳ ನಡುವೆ ದೇವಿಯರ ಮೂರ್ತಿಗಳನ್ನು ಒಂದೊಂದಾಗಿ ಇರಿಸಿ ಅಷ್ಟೇ ನಾಜೂಕಾಗಿ ನೀರಿಗಿಳಿಸಿ ಜಲಸ್ತಂಭನಗೊಳಿಸಿದರು. ಶಾರದೆಯ ವಿಸರ್ಜನೆ ವೇಳೆ ಭಕ್ತವೃಂದದ ಜೈಕಾರ ಮುಗಿಲು ಮುಟ್ಟಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ನವದಿನಗಳ ಕಾಲ ಪೂಜಿಸಲ್ಪಟ್ಟ ನವದುರ್ಗೆಯರು ಹಾಗೂ ಶ್ರೀ ಶಾರದಾ ದೇವಿಯನ್ನು ಬುಧವಾರ ಬೆಳಗ್ಗೆ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಸಂಪ್ರದಾಯಬದ್ಧವಾಗಿ ವಿಸರ್ಜಿಸುವುದರೊಂದಿಗೆ ಈ ಬಾರಿಯ ವೈಭವದ ‘ಮಂಗಳೂರು ದಸರಾ’ ಸಂಪನ್ನಗೊಂಡಿತು. ಶ್ರೀ ಶಾರದೆ, ನವದುರ್ಗೆಯರು, ಆದಿಶಕ್ತಿ, ಗಣಪತಿ, ನಾರಾಯಣ ಗುರುಗಳ ವೈಭವದ ಶೋಭಾಯಾತ್ರೆ ಮಂಗಳೂರಿನ ರಾಜ ಬೀದಿಗಳಲ್ಲಿ ಮಂಗಳವಾರ ರಾತ್ರಿಯುದ್ದಕ್ಕೂ ನಡೆದು ಬುಧವಾರ ಮುಂಜಾನೆ ಹೊತ್ತಿಗೆ ಮರಳಿ ಶ್ರೀ ಕ್ಷೇತ್ರಕ್ಕೆ ಕರೆತರಲಾಯಿತು. ಅಲ್ಲಿ ಮತ್ತೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಪುಷ್ಕರಿಣಿಯಲ್ಲಿ ಜಲಸ್ತಂಭನಗೊಳಿಸಲಾಯಿತು. ನೂರಾರು ಮಂದಿ ಭಕ್ತರು ಈ ದೃಶ್ಯಗಳನ್ನು ಕಣ್ತುಂಬಿಕೊಂಡರು. ಪುಷ್ಕರಿಣಿಯಲ್ಲಿ ಎರಡು ದೋಣಿಗಳ ನಡುವೆ ದೇವಿಯರ ಮೂರ್ತಿಗಳನ್ನು ಒಂದೊಂದಾಗಿ ಇರಿಸಿ ಅಷ್ಟೇ ನಾಜೂಕಾಗಿ ನೀರಿಗಿಳಿಸಿ ಜಲಸ್ತಂಭನಗೊಳಿಸಿದರು. ಶಾರದೆಯ ವಿಸರ್ಜನೆ ವೇಳೆ ಭಕ್ತವೃಂದದ ಜೈಕಾರ ಮುಗಿಲು ಮುಟ್ಟಿತ್ತು. ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬಾರಿಯೂ ಮಂಗಳೂರು ದಸರಾ ಸಾಂಗವಾಗಿ ನೆರವೇರಿತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ ಕ್ಷೇತ್ರಕ್ಕೆ ಆಗಮಿಸಿ ದಸರಾ ಸುಸೂತ್ರವಾಗಿ ನೆರವೇರಲು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಮಂಗಳವಾರ ಸಂಜೆ ಆರಂಭಗೊಂಡ ವೈಭವದ ಶೋಭಾಯಾತ್ರೆಯನ್ನು ತಡರಾತ್ರಿವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದರು. ಚೆಂಡೆ, ಕೊಂಬು ಕಹಳೆ, ಭಜನಾ ತಂಡಗಳು, ಅನ್ಯ ಜಿಲ್ಲೆಗಳಿಂದ ಬಂದಿರುವ ವಿವಿಧ ಕಲಾ ಪ್ರಕಾರಗಳು, ವಿವಿಧ ಹುಲಿ ವೇಷಧಾರಿಗಳ ತಂಡಗಳು, ಐತಿಹಾಸಿಕ ಪುರಾಣ ಕಥೆಗಳನ್ನು ಬಿಂಬಿಸುವ ಟ್ಯಾಬ್ಲೋಗಳು ಮೈಮನ ಸೂರೆಗೊಳಿಸುವುದರೊಂದಿಗೆ ಮಂಗಳೂರು ದಸರಾಕ್ಕೆ ಅದ್ಧೂರಿ ತೆರೆಬಿದ್ದಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ