ಮಂಗಳೂರು: ಕರಾವಳಿ ಇಲ್ಲದೇ, ಕರ್ನಾಟಕ ಇಲ್ಲ. ಮೈಸೂರು ದಸರಾ ರಾಜ ವೈಭವದ ದೊಡ್ಡ ಪ್ರತೀಕ. ಮಂಗಳೂರು ದಸರಾ ಭಕ್ತ ವೈಭವದ ಪ್ರತೀಕ ಎಂಬುದಕ್ಕೆ ಇಲ್ಲಿನ ಜನಸಾಗರ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರದ ಸಹಕಾರದಲ್ಲಿ ನಡೆಯುವ ಮಂಗಳೂರು ದಸರಾವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು. ದಸರಾ ಕೇವಲ ಆಚರಣೆ ಅಲ್ಲ, ಅದು ಪರಂಪರೆಯ ಹೆಮ್ಮೆ, ಆರ್ಥಿಕ ಚಕ್ರ, ಒಗ್ಗಟ್ಟಿನ, ಮಾನವೀಯತೆಯ ಮೂಲ. ಸಂಸ್ಕೃತಿ ಜೊತೆ ಪ್ರಗತಿ ಕಾಣುವುದು. ನಾನು ನೆಮ್ಮಿದಿಗಾಗಿ ಇಲ್ಲಿನ ದೇವಸ್ಥಾನಗಳಿಗೆ ಬರುತ್ತೇನೆ. ಅದರಂತೆ ದಸರಾ ಉದ್ಘಾಟನೆ ಜೊತೆಗೆ ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ನಾರಾಯಣ ಗುರುಗಳ ತತ್ವದ ಈ ಕ್ಷೇತ್ರದಲ್ಲಿ ಗುರುಗಳ ಆಶೀರ್ವಾದ ಕೇಳಿದ್ದೇನೆ. ನನ್ನದೂ ಗುರುಗಳ ತತ್ವ ಎಂದರು.
ಕರಾವಳಿಗೆ ಹೊಸ ರೂಪ ಕೊಡಲು ನಾನು, ನಮ್ಮ ಸರ್ಕಾರ ಇದೆ. ನಮ್ಮ ಸರ್ಕಾರ ಕರಾವಳಿಯ ಅಭಿವೃದ್ಧಿ ಸಂಕಲ್ಪ ಮಾಡಿದೆ. ಹಿರಿಯರು ಕರಾವಳಿಗೆ ಮೆರುಗು ಕೊಟ್ಟಿದ್ದಾರೆ. ನಾವು ಇಲ್ಲಿರುವ ಸಂಸ್ಕೃತಿ, ಸಂಸ್ಕಾರ, ಪ್ರಕೃತಿಯನ್ನು ಕಾಪಾಡಿಕೊಂಡು ಇಲ್ಲಿನ ಅಭಿವೃದ್ಧಿಗೆ ನ್ಯಾಯ ಕೊಡಲಿದ್ದೇವೆ. ನಿಮ್ಮ ಜೊತೆಗೆ ಹೆಜ್ಜೆ ಹಾಕಲಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂಬ ಹೆಸರು ಮರುನಾಮಕರಣ ಬಗ್ಗೆ ಚರ್ಚೆಯಲ್ಲಿದೆ. ತುಳು ಭಾಷೆಗೆ ಗೌರವ ಕೊಡುವ ಕೆಲಸ ಮಾಡುವ ಮೂಲಕ ಐತಿಹಾಸಿಕ ಕೆಲಸವನ್ನು ಇಲ್ಲೇ ಮಾಡಿದ್ದೇನೆ ಎಂಬ ಸಮಾಧಾನ ಮನಸ್ಸಿಗೆ ಇದೆ ಎಂದರು.
ದಸರಾಗೆ ಅನುದಾನದ ಬಗ್ಗೆ ಚರ್ಚೆ:ಕ್ಷೇತ್ರದ ಶಿಕ್ಷಣ ಸಂಸ್ಥೆಗೆ 15 ಎಕ್ರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡುವಂತೆ, ಮಂಗಳೂರು ದಸರಾಗೆ ಬಜೆಟ್ನಲ್ಲಿ ಶಾಶ್ವತ ಅನುದಾನ ಮೀಸಲಿಡುವಂತೆ, ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲೂ ನಾರಾಯಣ ಗುರು ಜಯಂತಿ ಆಚರಿಸಲು ಅಧಿಕೃತ ನಿರ್ದೇಶನ ನೀಡುವಂತೆ ಸಭೆಯಲ್ಲಿ ಮನವಿ ಮಾಡಲಾಡಯಿತು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಲ್ಲಿನ ಬೇಡಿಕೆ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಬಳಿಕ ಶ್ರೀ ಗೋಕರ್ಣನಾಥ ದೇವರಿಗೆ, ಕ್ಷೇತ್ರದ ಭವ್ಯ ದರ್ಬಾರ್ ಹಾಲ್ನಲ್ಲಿ ಶ್ರೀಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಗೆ ಮುಖ್ಯಮಂತ್ರಿ ಸಹಿತ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು.
ತುಳು ಭಗವದ್ಗೀತೆ ಲೋಕಾರ್ಪಣೆ: ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ ಅವರಿಗೆ ಧ್ವಜ ನೀಡಿ ದಸರಾಗೆ ಚಾಲನೆ ನೀಡಿದರು. ಇದೇ ಮೊದಲಬಾರಿಗೆ ಶ್ರೀಗುರುಗಳ ಧ್ವಜದ ಜತೆಗೆ ಸೂರ್ಯ ಚಂದ್ರರಿರುವ ತುಳು ಧ್ವಜವನ್ನೂ ನೀಡುವ ಪರಿಪಾಠಕ್ಕೆ ಚಾಲನೆ ನೀಡಲಾಯಿತು. ಜತೆಗೆ ತುಳುವಿಗೆ ಮಾನ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಕೆ ಇಸ್ಕಾನ್ ವಿರಚಿತ ತುಳು ಭಗವದ್ಗೀತೆಯನ್ನು ಸಿಎಂ ಲೋಕಾರ್ಪಣೆಗೊಳಿಸಿದರು.