ಮಂಗಳೂರು: ಮಂಗಳೂರು ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕವಾಗಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿರುವಂತೆಯೇ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲೂ ದೂರುಗಳ ಸರಮಾಲೆಯೇ ವ್ಯಕ್ತವಾಗಿದೆ. ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರು ಚರಂಡಿಯಲ್ಲಿ ಮಳೆ ನೀರು, ಫ್ಲ್ಯಾಟ್, ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು (ಒಳಚರಂಡಿ) ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿದೆ. ಸುರತ್ಕಲ್ ಮುಕ್ಕದ ವಾರ್ಡ್ ನಂ. 1ರ ಚರ್ಚ್ ಮುಂಭಾಗದ ತೆರೆದ ನೀರಿನ ಚರಂಡಿಯಲ್ಲಿ ಸಮೀಪದ ಫ್ಲ್ಯಾಟ್‌ಗಳ ಕೊಳಚೆ ನೀರು ಬಿಡಲಾಗುತ್ತಿದೆ. ಈ ಬಗ್ಗೆ ಎರಡು ಮೂರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಆಗಿಲ್ಲ. ಈ ಚರಂಡಿ ಸಮೀಪವೇ ಬಸ್ ನಿಲ್ದಾಣವಿದೆ. ಸಾವಿರಾರು ಮಕ್ಕಳು, ನಾಗರಿಕರು ಈ ಬಸ್ ನಿಲ್ದಾಣಕ್ಕೆ ಬರುವಾಗ ಈ ಕೊಳಚೆ ನೀರಿನ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಫಾ. ಸ್ಟ್ಯಾನ್ಲಿ ಪಿಂಟೋ ಎಂಬವರು ದೂರಿದರು.ಯೆಯ್ಯಾಡಿಯ ಸುಭಾಶಿನಿ ಭಟ್ ಮಾತನಾಡಿ, ಕದ್ರಿ ಪದವು ಬಳಿ 40 ಮನೆಗಳಿದ್ದು, ಪಾಲಿಕೆಯಿಂದ ಒಳಚರಂಡಿ ವ್ಯವಸ್ಥೆ ಮಾಡಲಾಗಿಲ್ಲ. 20 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಪ್ಪಿನಮೊಗರುವಿನಲ್ಲಿ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಉಳ್ಳಾಲ ಹೊಯಿಗೆಯನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ನಿರ್ಮಿಸುವ ಪ್ರಸ್ತಾವನೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ)ಯು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅನುಮತಿಗಾಗಿ ಪರಿವೇಶ್ ಪೋರ್ಟಲ್ ಮೂಲಕ ವರದಿ ಸಲ್ಲಿಸಿದೆ ಎಂದು ಪಾಲಿಕೆ ಆಡಳಿತಾಧಿಕಾರಿ ದರ್ಶನ್ ಅವರು ಡಾಲ್ಫಿ ವೇಗಸ್ ಪ್ರಶ್ನೆಗೆ ಉತ್ತರಿಸಿದರು.
ಸೇತುವೆ ಕಾಮಗಾರಿ ಯೋಜನೆಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಸಮಿತಿಯಿಂದ ಅನುಮೋದನೆ ಕಡ್ಡಾಯವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಕೆಸಿಎಸ್‌ಎಂಸಿ ಸಭೆ ನಡೆಯುವ ಸಾಧ್ಯತೆಯಿದೆ. ಸಿಆರ್‌ಝಡ್ ಅನುಮೋದನೆ ಪಡೆದ ನಂತರ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಂದಾಯ ಅಧಿಕಾರಿ ಅಕ್ಷತಾ ಮತ್ತಿತರರಿದ್ದರು. ಬಾಕ್ಸ್---
ನೀರಿನ ಸಮಸ್ಯೆ ಬಗ್ಗೆ ಜ.29ರಂದು ಅಧಿಕಾರಿಗಳ ಸಭೆನಗರದ ಸೈಮನ್ ಲೇನ್‌ನಿಂದ ಕರೆ ಮಾಡಿದ ನಿತ್ಯಾ ಎಂಬವರು ಹಲವು ಮನೆಗಳಿಗೆ ಕಳೆದ ಎರಡು ತಿಂಗಳಿನಿಂದ ನೀರು ಬರುತ್ತಿಲ್ಲ. ನೀರಿಗಾಗಿ ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುವಂತಗಿದೆ ಎಂದು ದೂರಿದರು.
ಅಧಿಕಾರಿಗಳಿಂದ ಉತ್ತರ ಪಡೆದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಲಸಿರಿ ಯೋಜನೆಯಡಿಯಲ್ಲಿ ಹಾಕಲಾದ ನೀರು ಸರಬರಾಜು ಜಾಲಕ್ಕೆ ಸಂಪರ್ಕ ಕಲ್ಪಿಸಿ ಮೂರು ದಿನಗೊಳಗೆ ನೀರು ಪೂರೈಕೆ ಆರಂಭಿಸಲಾಗುವುದು ಎಂದರು. ಚೊಕ್ಕಬೆಟ್ಟುವಿನ ಹಮೀದ್ ಎಂಬವರು ಕೂಡಾ ಜಲಸಿರಿಯಡಿಯಲ್ಲಿ 24X7 ನೀರು ಸರಬರಾಜು ಇದೆ ಎಂದು ಹೇಳಿಕೊಂಡರೂ, ಈ ಪ್ರದೇಶಕ್ಕೆ ಪ್ರತಿ ಮೂರು ದಿನಗಳಿಗೊಮ್ಮೆ ಮಾತ್ರ ನೀರು ಕೆಲವು ಗಂಟೆ ಮಾತ್ರವೇ ಬರುತ್ತಿದೆ ಎಂದು ದೂರಿದರು.ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಜನಸಂಖ್ಯೆಯ ಬೆಳವಣಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ಹೆಚ್ಚಳದಿಂದಾಗಿ ನೀರು ಸರಬರಾಜು ಯಾವಾಗಲೂ ಸವಾಲಾಗಿದೆ. ಈಗ, ನೀರು ಸರಬರಾಜಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು. ಜಿಲ್ಲೆಯಾದ್ಯಂತ ನೀರಿನ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಸಭೆ ಗುರುವಾರ ನಡೆಯಲಿದೆ ಎಂದು ಅವರು ಹೇಳಿದರು.
----