ರಾಜ್ಯವ್ಯಾಪಿ ಆಹಾರ ಮಳಿಗೆಗಳ ಮೇಲೆ ದಾಳಿ ಮುಂದುವರಿಕೆ: ಖಾದರ್

KannadaprabhaNewsNetwork |  
Published : Aug 18, 2026, 03:00 AM IST
ಸಚಿವ ಯು.ಟಿ.ಖಾದರ್‌  | Kannada Prabha

ಸಾರಾಂಶ

ಮಂಗಳೂರಿನ ಕೆಎಫ್‌ಸಿ ಫುಡ್‌ ಔಟ್‌ಲೆಟ್‌ನಲ್ಲಿ ಕೊಳೆತ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಮಳಿಗೆಗಳ ಫ್ರ್ಯಾಂಚೈಸಿಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಮಂಗಳೂರಿನ ಕೆಎಫ್‌ಸಿ ಫುಡ್‌ ಔಟ್‌ಲೆಟ್‌ನಲ್ಲಿ ಕೊಳೆತ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಮಳಿಗೆಗಳ ಫ್ರ್ಯಾಂಚೈಸಿಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಲ್ಲಿ ಭಾನುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಆಹಾರ ಮಳಿಗೆಗಳ ಮೇಲೆ ತಪಾಸಣೆ ಹಾಗೂ ದಾಳಿ ಮುಂದುವರಿಯಲಿದೆ. ಕಿಚನ್ ಮತ್ತು ಸ್ಟೋರ್‌ಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾತ್ರ ಸಂಗ್ರಹಿಸಬೇಕು ಹಾಗೂ ನೈರ್ಮಲ್ಯ ಕಾಪಾಡಬೇಕು ಎಂದರು.

ಯಾವುದೇ ಸಂದರ್ಭದಲ್ಲೂ ಅಧಿಕಾರಿಗಳು ದಾಳಿ ನಡೆಸಬಹುದು. ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ, ಸಣ್ಣವರಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಜನರ ಆರೋಗ್ಯವೇ ಸರ್ಕಾರದ ಮುಖ್ಯ ಕಾಳಜಿ ಎಂದು ಸಚಿವ ಖಾದರ್ ಹೇಳಿದರು.

ದಾಳಿ ನಡೆಸುವುದು ಕೋಪದಿಂದ ಅಥವಾ ಶಿಕ್ಷೆ ನೀಡುವ ಉದ್ದೇಶದಿಂದಲ್ಲ. ಆಹಾರ ಸುರಕ್ಷತೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಗುರುತಿಸಿ, ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಅಧಿಕಾರಿಗಳು ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಮುಂದೆಯೂ ಇಂತಹ ತಪಾಸಣೆಗಳು ನಡೆಯಲಿವೆ ಎಂದರು.

ಪಿಜಿ, ಹಾಸ್ಟೆಲ್‌ಗಳೂ ತಪಾಸಣೆ: ಪಿಜಿ, ಹಾಸ್ಟೆಲ್, ಕೇಟರಿಂಗ್ ಹಾಗೂ ಪೇಯಿಂಗ್ ಗೆಸ್ಟ್‌ ಸೆಂಟರ್‌ಗಳ ಮಾಲೀಕರಿಗೂ ಸಚಿವರು ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರು ಮನೆ ಬಿಟ್ಟು ಪಿಜಿ, ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಾರೆ. ಅವರ ಆಹಾರ ಮತ್ತು ಆರೋಗ್ಯದ ಬಗ್ಗೆ ಮಾಲೀಕರು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಬೇಕು. ಉತ್ತಮ ಗುಣಮಟ್ಟದ ಆಹಾರ ಹಾಗೂ ಸ್ವಚ್ಛತೆಯ ವ್ಯವಸ್ಥೆ ಇರುವವರು ಮಾತ್ರ ಪಿಜಿ ನಡೆಸಬೇಕು ಎಂದರು.

ಮುಂದಿನ ದಿನಗಳಲ್ಲಿ ಪಿಜಿ ಮತ್ತು ಹಾಸ್ಟೆಲ್‌ಗಳ ಮೇಲೂ ತಪಾಸಣೆ ನಡೆಸಲಾಗುವುದು. ಆಹಾರ ಮತ್ತು ನೈರ್ಮಲ್ಯದ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಪಿಜಿ ನಡೆಸಲು ಅನುಮತಿ ನೀಡದಿರುವ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಜಂಟಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.

ಗುಟ್ಕಾ ಕಂಪನಿ ಮಾಲೀಕರಿಗೆ ಮಾತ್ರ ತೊಂದರೆ: ರಾಜ್ಯದಲ್ಲಿ ಪಾನ್‌ಮಸಾಲಾ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆದಿಲ್ಲ, ಹಿಂಪಡೆಯುವುದೂ ಇಲ್ಲ ಎಂದು ಪುನರುಚ್ಚರಿಸಿದ ಸಚಿವ ಖಾದರ್‌, ಈ ನಿಯಮದಿಂದ ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ತೊಂದರೆಯಾಗುವುದಿದ್ದರೆ ಅದು ಗುಟ್ಕಾ ಕಂಪನಿಗಳ ಮಾಲೀಕರಿಗೆ ಮಾತ್ರ ಎಂದು ಹೇಳಿದರು.

ನಿಕೋಟಿನ್ ಹಾಗೂ ಗುಟ್ಕಾ ಮಿಶ್ರಣವಿರುವ ವಸ್ತುಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಪಾನ್‌ಮಸಾಲಾದಲ್ಲಿ ನಿಕೋಟಿನ್ ಮತ್ತು ಗುಟ್ಕಾ ಮಿಶ್ರಣವಾಗಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಬಿ.ನಾಗೇಂದ್ರ ವಜಾಕ್ಕೆ ಆಗ್ರಹ
ರೋಗ ನಿರೋಧಕ ಶಕ್ತಿ ವೃದ್ಧಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್‌ ಬಳಸಿ