ಇಂದು ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಸಂಚಾರ: ಉದ್ಘಾಟನಾ ಸಿದ್ಧತೆ ಪರಿಶೀಲಿಸಿದ ಸಂಸದ ನಳಿನ್‌ ಕುಮಾರ್‌

KannadaprabhaNewsNetwork |  
Published : Dec 30, 2023, 01:15 AM IST
ಸಂಟ್ರಲ್‌ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಉದ್ಘಾಟನಾ ಸಿದ್ಧತೆ ಪರಿಶೀಲಿಸುತ್ತಿರುವ ಸಂಸದ ನಳಿನ್‌ ಕುಮಾರ್‌  | Kannada Prabha

ಸಾರಾಂಶ

ಬೆಳಗ್ಗೆ 10 ಗಂಟೆಗೆ ಸೆಂಟ್ರಲ್‌ ರೈಲು ನಿಲ್ದಾಣದ ಒಂದೇ ಫ್ಲ್ಯಾಟ್‌ಫಾರಂನಲ್ಲಿ ಔಪಚಾರಿಕ ಸಮಾರಂಭ ನಡೆಯಲಿದೆ. 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಂದೇ ಭಾರತ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವರು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳು ಹಾಜರಿರುವರು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಶುಕ್ರವಾರ ಮಂಗಳೂರು ರೈಲು ನಿಲ್ದಾಣದಲ್ಲಿ ಸಿದ್ಧತೆ ಪರಿಶೀಲನೆ ಬಳಿಕ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು-ಮಡ್ಗಾಂವ್‌(ಗೋವಾ) ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಹಿನ್ನೆಲೆಯಲ್ಲಿ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಶುಕ್ರವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸಿದ್ಧತಾ ಪರಿಶೀಲನೆ ನಡೆಸಿದರು. ಬೆಳಗ್ಗೆ 10 ಗಂಟೆಗೆ ಸೆಂಟ್ರಲ್‌ ರೈಲು ನಿಲ್ದಾಣದ ಒಂದೇ ಫ್ಲ್ಯಾಟ್‌ಫಾರಂನಲ್ಲಿ ಔಪಚಾರಿಕ ಸಮಾರಂಭ ನಡೆಯಲಿದೆ. 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಂದೇ ಭಾರತ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವರು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳು ಹಾಜರಿರುವರು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಈ ಉದ್ಘಾಟನಾ ರೈಲು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 12.25 ಉಡುಪಿ, ಅಲ್ಲಿಂದ 12.27ಕ್ಕೆ ಹೊರಟು 2.52 ಕಾರವಾರ, ಅಲ್ಲಿಂದ 2.54ಕ್ಕೆ ಹೊರಟು ಸಂಜೆ 4.40ಕ್ಕೆ ಮಡ್ಗಾಂವ್‌ ತಲುಪಲಿದೆ. ಮಡ್ಗಾಂವ್‌ನಿಂದ ಸಂಜೆ 5.10ಕ್ಕೆ ಹೊರಟು 5.50ಕ್ಕೆ ಕಾರವಾರ, ರಾತ್ರಿ 8.10 ಉಡುಪಿ, 10.15 ಮಂಗಳೂರು ಸೆಂಟ್ರಲ್ ತಲುಪಲಿದೆ.

ಡಿ.31ರಿಂದ ಗುರುವಾರ ಹೊರತುಪಡಿಸಿ ಪ್ರತಿನಿತ್ಯ ಮಂಗಳೂರು-ಮಡ್ಗಾಂವ್‌ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ. ಪ್ರವಾಸಿಗರಿಗೆ ಅನುಕೂಲ: ವಂದೇ ಭಾರತ್‌ ರೈಲು ಸಂಚಾರದಿಂದ ಉಡುಪಿ, ಕಾರವಾರ ಹಾಗೂ ಗೋವಾ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದೆ. ಅಲ್ಲಿಂದ ದ.ಕ. ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸುವವರಿಗೂ ಉಪಯುಕ್ತವಾಗಲಿದೆ. ಈ ರೈಲು ಸಂಚಾರ ಧಾರ್ಮಿಕ, ಬೀಚ್‌ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ನೆರವಾಗಲಿದೆ. ಗೋವಾಕ್ಕೆ ಅನ್ಯ ಕೆಲಸದ ನಿಮಿತ್ತ ತೆರಳುವವರು ಒಂದೇ ದಿನದಲ್ಲಿ ಕೆಲಸ ಮುಗಿಸಿ ಬರಬಹುದಾಗಿದೆ ಎಂದರು. ಮಂಗಳೂರು-ಬೆಂಗಳೂರು ನಡುವೆ ಮಾರ್ಚ್‌ ಬಳಿಕ ವಂದೇ ಭಾರತ್‌ ಸಂಚಾರ ಸಾಧ್ಯವಾಗಲಿದೆ. ಪ್ರಸಕ್ತ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಸಕಲೇಶಪುರ ವರೆಗೆ ಕಾಮಗಾರಿ ಮಾರ್ಚ್‌ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದರು. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ 17 ಕೋಟಿ ರು.ಗಳಲ್ಲಿ 4 ಮತ್ತು 5ನೇ ಫ್ಲ್ಯಾಟ್‌ಫಾರಂ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಇಲ್ಲಿ ಎಲ್ಲ ಮೂಲ ಸೌಕರ್ಯ ಅಳವಡಿಕೆ ಕಾಮಗಾರಿ ಜನವರಿ 15ರೊಳಗೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಇದರ ಲೋಕಾರ್ಪಣೆ ಕೂಡ ನೆರವೇರಲಿದೆ ಎಂದರು. ವಿಮಾನ ನಿಲ್ದಾಣ ಮಾದರಿ ಅಭಿವೃದ್ಧಿ:ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸುಮಾರು 350 ಕೋಟಿ ರು.ಗಳ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಕೂಡ ಆರಂಭವಾಗಲಿದೆ. ದ.ಕ.ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದಿಂದ ರೈಲ್ವೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 416.98 ಕೋಟಿ ರು. ಮಂಜೂರಾಗಿದೆ. ಸೆಂಟ್ರಲ್‌ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗೆ 13.29 ಕೋಟಿ ರು., ಸಕಲೇಶಪುರ-ಮಂಗಳೂರು ವರೆಗೆ 7 ಲೆವೆಲ್ ಕ್ರಾಸ್‌ ಮೇಲ್ಸೇತುವೆಯಾಗಿ ಪರಿವರ್ತಿಸಲು 44.13 ಕೋಟಿ ರು., ಸೆಂಟ್ರಲ್ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಆಧುನೀಕರಣಗೊಳಿಸಲು 1.40 ಕೋಟಿ ರು., ಹೊಸ ಫ್ಲ್ಯಾಟ್‌ಫಾರಂಗಳಿಗೆ ಶೆಲ್ಟರ್‌, ಲಿಫ್ಟ್‌ ಅಳವಡಿಕೆಗೆ 2.5 ಕೋಟಿ ರು. ಮಂಜೂರಾಗಿದೆ. ಪ್ರಸಕ್ತ 1,537.65 ಕೋಟಿ ರು.ಗಳ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ಮಂಡಲ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ, ರೈಲ್ವೆ ಪಾಲಕ್ಕಾಡ್‌ ವಿಭಾಗೀಯ ಅಧಿಕಾರಿ ಅರುಣ್‌ ಚತುರ್ವೇದಿ, ಎಡಿಆರ್‌ಎಂ ಜಯಕೃಷ್ಣ ಮತ್ತಿತರರಿದ್ದರು.ಮಡ್ಗಾಂವ್‌ನಿಂದ ಮುಂಬೈ ಸಂಪರ್ಕ

ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ರೈಲಿಗೆ ಮುಂಬೈ-ಮಡ್ಗಾಂವ್‌ ವಂದೇ ಭಾರತ್‌ ರೈಲಿನ ಸಂಪರ್ಕ ಕಲ್ಪಿಸಲಾಗಿದೆ. ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.15 ಗಂಟೆಗೆ ಮಡ್ಗಾಂವ್‌ಗೆ ತಲುಪಲಿದೆ. ಅಲ್ಲಿಂದ ಮುಂಬೈಗೆ ವಂದೇ ಭಾರತ್ ರೈಲು ಸಂಪರ್ಕ ಸಿಗಲಿದೆ. ಹಾಗಾಗಿ ಮುಂಬೈಗೆ ಪ್ರಯಾಣಿಸುವವರು ಮಂಗಳೂರಿನಿಂದ ವಂದೇ ಭಾರತ್‌ ರೈಲಿನ ಮೂಲಕ ಕೇವಲ 10 ಗಂಟೆಯಲ್ಲಿ ತಲುಪಲು ಸಾಧ್ಯವಿದೆ. ಇದರಿಂದಾಗಿ ಮುಂಬೈ ನೇರ ಯಾನಕ್ಕೆ ರೈಲು ಟಿಕೆಟ್‌ಗೆ ಬವಣೆ ಪಡುವವರಿಗೆ ಈ ರೈಲು ಉಪಯುಕ್ತವಾಗಲಿದೆ ಎಂದರು.

ಈ ರೈಲು ನಿಗದಿತ 4.45 ಗಂಟೆ ಅವಧಿಯಲ್ಲಿ ಮಂಗಳೂರಿನಿಂದ ಮಡ್ಗಾಂವ್‌ ತಲುಪಲಿದೆ. ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ 2 ನಿಮಿಷಗಳ ನಿಲುಗಡೆ ಇರುತ್ತದೆ. ಗುರುವಾರ ತಾಂತ್ರಿಕ ನಿರ್ವಹಣೆ ಸಲುವಾಗಿ ವಂದೇ ಭಾರತ್‌ ಸಂಚಾರ ಇರುವುದಿಲ್ಲ. ಈಗಿನ ಪ್ರಕಾರ 1,200 ರು. ದರ ಇರಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ