ದಯಾನಂದ ಕಲ್ನಾರ್
ದ.ಕ. ಜಿಲ್ಲೆಯಲ್ಲಿ 2025ರ ಜೂ.1ರಿಂದ ಜೂ.19ರ ವರೆಗೆ 998.8 ಮಿಲಿ ಮೀಟರ್ ಮಳೆಯಾಗಿದ್ದರೆ, 2026ರ ಜೂ.1ರಿಂದ ಜೂ.19ರ ವರೆಗೆ ಕೇವಲ 229.1 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ. ಈ ವರ್ಷ 502 ಮಿ.ಮೀ. ಸಾಮಾನ್ಯ ಮಳೆಯೂ ಆಗಿಲ್ಲ.
ತಾಲೂಕುವಾರು ಕಡಿಮೆ ಮಳೆ:2025ರ ಜೂ.1ರಿಂದ 19ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ 1121.1 ಮಿ.ಮೀ., ಬಂಟ್ವಾಳದಲ್ಲಿ 1034.9 ಮಿ.ಮೀ., ಮಂಗಳೂರಿನಲ್ಲಿ 880.4 ಮಿ.ಮೀ., ಪುತ್ತೂರಿನಲ್ಲಿ 881.2 ಮಿ.ಮೀ., ಸುಳ್ಯದಲ್ಲಿ 869.5 ಮಿ.ಮೀ., ಮೂಡುಬಿದಿರೆಯಲ್ಲಿ 1144.4 ಮಿ.ಮೀ., ಕಡಬದಲ್ಲಿ 981.2 ಮಿ.ಮೀ., ಮೂಲ್ಕಿಯಲ್ಲಿ 930.5 ಮಿ.ಮೀ., ಉಳ್ಳಾಲದಲ್ಲಿ 799.9 ಮಿ.ಮೀ.ಮಳೆಯಾಗಿತ್ತು. ಆದರೆ ಈ ವರ್ಷ ಬೆಳ್ತಂಗಡಿಯಲ್ಲಿ 210.5 ಮಿ.ಮೀ., ಬಂಟ್ವಾಳದಲ್ಲಿ 218 ಮಿ.ಮೀ., ಮಂಗಳೂರಿನಲ್ಲಿ 307.2 ಮಿ.ಮೀ., ಪುತ್ತೂರಿನಲ್ಲಿ 168.9 ಮಿ.ಮೀ., ಸುಳ್ಯದಲ್ಲಿ 203 ಮಿ.ಮೀ., ಮೂಡುಬಿದಿರೆಯಲ್ಲಿ 227.2 ಮಿ.ಮೀ., ಕಡಬದಲ್ಲಿ 264.8 ಮಿ.ಮೀ., ಮೂಲ್ಕಿಯಲ್ಲಿ 288.4 ಮಿ.ಮೀ., ಉಳ್ಳಾಲದಲ್ಲಿ 327.9 ಮಿ.ಮೀ.ಮಾತ್ರವೇ ಮಳೆಯಾಗಿದೆ. ಕಳೆದ ವರ್ಷವೂ ಮಂಗಳೂರು (ಶೇ.-14), ಪುತ್ತೂರು (ಶೇ.-9), ಮುಲ್ಕಿ (ಶೇ.-14), ಉಳ್ಳಾಲ (ಶೇ.-22) ತಾಲೂಕುಗಳಲ್ಲೂ ಸಾಮಾನ್ಯ ಮಳೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.
ಜೂನ್ ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ನದಿಗೆ ನಿರ್ಮಿಸಲಾದ ಡ್ಯಾಂಗಳ ಗೇಟ್ ತೆರೆಯಲಾಗಿದೆ. ಅದರಂತೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಡ್ಯಾಂ ಗೇಟ್ ತೆರವು ಮಾಡಲಾಗಿತ್ತು. ಸಮೃದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಡ್ಯಾಂ ಗೇಟ್ ತೆರವು ಬಳಿಕ ನೀರಿಲ್ಲದೇ ಬರಿದಾದಂತೆ ಕಾಣುತ್ತಿದೆ.
ಜೂನ್ ಆರಂಭದಲ್ಲಿ ಮಳೆಯಾಗಿದ್ದರಿಂದ ಸಣ್ಣ-ಪುಟ್ಟ ತೋಡು, ಹಳ್ಳಗಳಲ್ಲಿ ನೀರಿನ ಒರತೆ ಉಂಟಾಗಿ ನೀರು ಹರಿವು ಆರಂಭಗೊಂಡಿತ್ತು. ಇದೀಗ ಮಳೆಯಿಲ್ಲದೇ ಮತ್ತೆ ತೋಡು, ಹಳ್ಳಗಳು ನೀರಿಲ್ಲದೇ ಬತ್ತುತ್ತಿದೆ.
ಈ ಬಾರಿ ಮಳೆ ಇಲ್ಲದೇ ಗದ್ದೆ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗದ್ದೆ ಬೇಸಾಯ ಕೃಷಿಕರು ನೇಜಿ ಹಾಕಿ ನಾಟಿ ಮಾಡಲು ಮಳೆ ಇಲ್ಲದೇ ಅಡ್ಡಿಯಾಗಿದ್ದು, ಎರಡು, ಮೂರನೇ ಹಂತದ ನೇಜಿ ನಾಟಿಗೆ ಮಳೆ ಕೊರತೆ ಅಡ್ಡಿಯಾಗಲಿದೆ. ಈ ಬಾರಿ ಒಂದೇ ಹಂತದ ನೇಜಿ ಮಾಡಲು ಮಾತ್ರವೇ ಸಾಧ್ಯವಾಗುವ ಪರಿಸ್ಥಿತಿ ಕೃಷಿಕರಲ್ಲಿದೆ.ಮಳೆ ದೂರವಾಗಿರುವುದರಿಂದ ಅಡಕೆ ಕೃಷಿಕರಿಗೆ ಕೊಳರೋಗ ಭೀತಿ ಕೊಂಚ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತೋಟಕ್ಕೆ ಔಷಧಿ ಸಿಂಪಡಿಸಲು ಅನುಕೂಲಕರವಾಗಿದೆ.
ಬತ್ತಿದ ಸ್ಥಿತಿಯಲ್ಲಿ ನೇತ್ರಾವತಿ
-ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಂಗಳೂರು