ಪರೀಕ್ಷೆ ಸಮಯದಲ್ಲೇ ರಾಜ್ಯ ಸರ್ಕಾರದ ಆತುರದ ನಿರ್ಧಾರ ಖಂಡನೀಯ: ಶಾಸಕ ಕಾಮತ್

KannadaprabhaNewsNetwork |  
Published : Apr 01, 2026, 02:45 AM IST
ವೇದವ್ಯಾಸ ಕಾಮತ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಏಕಾಏಕಿ ತೃತೀಯ ಭಾಷೆಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು ಗ್ರೇಡ್ ನೀಡುವುದನ್ನು ಆರಂಭಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ‘ಆತುರಗಾರನಿಗೆ ಬುದ್ಧಿ ಮಟ್ಟ’ ಎನ್ನುವಂತಿದ್ದು, ರಾಜಕೀಯ ತೆವಲಿಗಾಗಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಮಂಗಳೂರು: ರಾಜ್ಯದಲ್ಲಿ ಏಕಾಏಕಿ ತೃತೀಯ ಭಾಷೆಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು ಗ್ರೇಡ್ ನೀಡುವುದನ್ನು ಆರಂಭಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ‘ಆತುರಗಾರನಿಗೆ ಬುದ್ಧಿ ಮಟ್ಟ’ ಎನ್ನುವಂತಿದ್ದು, ರಾಜಕೀಯ ತೆವಲಿಗಾಗಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿಕ್ಷಣ ಸಚಿವರು ಇಂತಹ ನಿರ್ಧಾರ ಕೈಗೊಂಡು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಿದ್ದಾರೆ ಎಂಬುದು ಅರಿವಿದೆಯೇ? ಸರ್ಕಾರದ ಈ ನಡೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತವರು ಕಂಗಾಲಾಗಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಸ್ಕೋರಿಂಗ್ ಸಬ್ಜೆಕ್ಟ್ ಕಥೆಯೇನು ಎಂದು ಆತಂಕಕ್ಕೊಳಗಾಗಿದ್ದಾರೆ. ಕೆಲವರು ಈಗಾಗಲೇ ಕೋರ್ಟ್ ಮೊರೆ ಹೋಗಲೂ ತಯಾರಿ ನಡೆಸಿದ್ದು, ತೃತೀಯ ಭಾಷೆ ಬೋಧಿಸುತ್ತಿರುವ ಸುಮಾರು 75 ಸಾವಿರಕ್ಕೂ ಹೆಚ್ಚು ಶಿಕ್ಷಕರು ಎಸೆಸೆಲ್ಸಿ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಆರೋಪಿಸಿದರು.ಈ ನಿರ್ಧಾರದಿಂದ ಹಿಂದಿ ಜತೆಗೆ ಸಂಸ್ಕೃತ, ಕೊಂಕಣಿ, ತುಳು ಭಾಷೆಗೂ ಅನ್ಯಾಯವಾಗಲಿದೆ. ಅಲ್ಲದೆ, ಮಕ್ಕಳ ಒಂದು ವರ್ಷದ ಪ್ರಯತ್ನಕ್ಕೂ ಬೆಲೆ ಇಲ್ಲವಾಗಿದೆ. ವಾಸ್ತವದಲ್ಲಿ ಶೈಕ್ಷಣಿಕ ವರ್ಷದ ಆರಂಭ ಅಥವಾ ಮುಂದಿನ ಶೈಕ್ಷಣಿಕ ವರ್ಷದಿಂದ ಈ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಅಂತಹ ಸೂಕ್ಷ್ಮ ಸಂವೇದನೆ ಇರುವ ಒಬ್ಬೇ ಒಬ್ಬ ಜವಾಬ್ದಾರಿಯುತ ವ್ಯಕ್ತಿಯೂ ಈ ಸರ್ಕಾರದಲ್ಲಿ ಇಲ್ಲವೇ? ಬೆಳೆಯುವ ಮಕ್ಕಳು ಹಲವು ಭಾಷೆಯನ್ನು ಕಲಿತಷ್ಟು ಮುಂದಿನ ಭವಿಷ್ಯಕ್ಕೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಸ್ಯೆ ಎದುರಿಸುವಂತಾಗಬಹುದು ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದು, ಕೂಡಲೆ ಈ ನಿರ್ಧಾರವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಜನ ತೀರ್ಮಾನ
ಎರಡನೇ ದಿನವೂ ಸಿಎಂ ಬಿರುಸಿನ ಪ್ರಚಾರ