ಶ್ರಮದಿಂದ ಗಳಿಸಿದ ಆದಾಯದ ಒಂದಂಶವನ್ನು ಸಮಾಜಕ್ಕೆ ಅರ್ಪಿಸಿ ಸಂತೃಪ್ತಿ ಪಡುವ ಮಿತ್ರಂಪಾಡಿ ಜಯರಾಮ ರೈ

KannadaprabhaNewsNetwork |  
Published : Apr 01, 2026, 02:45 AM IST
ಫೋಟೋ: ಜಯರಾಮ ರೈ ೧,೨ | Kannada Prabha

ಸಾರಾಂಶ

ವಿದೇಶದಲ್ಲಿ ಉದ್ಯೋಗಿಯಾಗಿರುವ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಮಿತ್ರಂಪಾಡಿ ನಿವಾಸಿ ಜಯರಾಮ ರೈ ಅವರು ಕಳೆದ ಸುಮಾರು ೨೭ ವರ್ಷಗಳಿಂದ ಅಬುದಾಬಿಯಲ್ಲಿ ಸಂಸ್ಥೆಯೊಂದರಲ್ಲಿ ಉನ್ನತ ಮಟ್ಟದ ಉದ್ಯೋಗದಲ್ಲಿದ್ದಾರೆ. ಜೊತೆಗೆ ಹುಟ್ಟಿದೂರಿನಲ್ಲಿ ಕೃಷಿಯನ್ನೂ ಹೊಂದಿದ್ದಾರೆ.

ಸಂಶುದ್ಧೀನ್ ಸಂಪ್ಯ

ಕನ್ನಡಪ್ರಭ ವಾರ್ತೆ ಪುತ್ತೂರು

ವಿದೇಶದಲ್ಲಿ ಉದ್ಯೋಗಿಯಾಗಿರುವ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಮಿತ್ರಂಪಾಡಿ ನಿವಾಸಿ ಜಯರಾಮ ರೈ ಅವರು ಕಳೆದ ಸುಮಾರು ೨೭ ವರ್ಷಗಳಿಂದ ಅಬುದಾಬಿಯಲ್ಲಿ ಸಂಸ್ಥೆಯೊಂದರಲ್ಲಿ ಉನ್ನತ ಮಟ್ಟದ ಉದ್ಯೋಗದಲ್ಲಿದ್ದಾರೆ. ಜೊತೆಗೆ ಹುಟ್ಟಿದೂರಿನಲ್ಲಿ ಕೃಷಿಯನ್ನೂ ಹೊಂದಿದ್ದಾರೆ. ಇವೆಲ್ಲದರಿಂದ ತನಗೆ ಬರುವ ಆದಾಯದಲ್ಲಿ ಶೇ. ೧೫ರಿಂ ೨೦ರಷ್ಟು ಬಡವರಿಗೆ ಮತ್ತು ಅಶಕ್ತರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಚಾರದಲ್ಲಿ ಇವರ ಸಹಾಯ ಹಸ್ತ ಉಲ್ಲೇಖನೀಯವಾಗಿದೆ. ಪುತ್ತೂರಿಗೆ ಆಗಮಿಸಿದ್ದ ಜಯರಾಮ ರೈ ಅವರು ಕನ್ನಡಪ್ರಭದೊಂದಿಗೆ ಚಿಟ್‌ ಚಾಟ್‌ ಸಂದರ್ಶನದಲ್ಲಿ ತಮ್ಮ ಅನಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದು ಹೀಗೆ...

ಸಮಾಜ ಸೇವೆಯ ಚಿಂತನೆಗೆ ಪ್ರೇರಣೆ ಯಾರು?ನನ್ನಲ್ಲಿ ಸಮಾಜ ಸೇವೆಯ ಚಿಂತನೆಗೆ ನನಗೆ ಮೊದಲ ಪ್ರೇರಣೆ ನನ್ನ ತಂದೆ ಮತ್ತು ತಾಯಿ. ಹುಟ್ಟೂರಾದ ತಿಂಗಳಾಡಿಯಲ್ಲಿ ೬೦ ವರ್ಷಗಳ ಹಿಂದೆ ಯಾವುದೇ ಅಭಿವೃದ್ಧಿಗಳಿರಲಿಲ್ಲ. ೧೯೫೯ರಲ್ಲಿ ನನ್ನ ತಂದೆ ಊರಿನವರ ಸಹಕಾರವನ್ನು ಪಡೆದುಕೊಂಡು ಶಾಲೆಯನ್ನು ಕಟ್ಟಿಸಿದ್ದರು. ಬಳಿಕ ಅಲ್ಲಿಗೆ ಪಂಚಾಯಿತಿ, ಸೊಸೈಟಿ ಎಲ್ಲ ಬರುವಂತೆ ಮಾಡುವಲ್ಲಿ ತಂದೆಯ ಪ್ರಯತ್ನವಿತ್ತು. ಇದನ್ನು ನಾನು ಸಣ್ಣ ಪ್ರಾಯದಲ್ಲಿಯೇ ಗಮನಿಸುತ್ತಿದ್ದೆ. ನನ್ನ ಅಮ್ಮ ಎಲ್ಲರ ಹಸಿವನ್ನು ಬಲ್ಲವರಾಗಿದ್ದರು. ಹಿಂದೂ, ಮುಸ್ಲಿಂ ಎಂಬ ಬೇಧವಿಲ್ಲದೆ ಹಸಿದವರಿಗೆ ಮನೆಯಲ್ಲಿ ಊಟ ನೀಡುತ್ತಿದ್ದರು. ಬಿಸುವಿನಂತಹ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ೫೦೦ರಿಂದ ೬೦೦ ಮಂದಿಗೆ ಊಟ ನೀಡುತ್ತಿದ್ದರು. ಅದನ್ನು ಬಾಲ್ಯದಿಂದಲೇ ನೋಡಿಕೊಂಡೇ ಬೆಳೆದಿರುವ ನನಗೆ ಯಾರೂ ಬಡತನ, ಹಸಿವಿನಿಂದ ಬಳಲಬಾರದು ಎಂಬ ಹಂಬಲ ಬೆಳೆದುಕೊಂಡಿತ್ತು. ಅದೇ ನನಗೆ ಮೊದಲ ಪ್ರೇರಣೆಯಾಗಿತ್ತು. ಬೆಳೆದಂತೆ ಡಾ. ಮೋಹನ ಆಳ್ವ, ಡಾ. ಸುಧಾಮೂರ್ತಿ, ಅಜೀಂ ಪ್ರೇಮ್‌ಜೀ, ರತನ್ ಟಾಟಾ ಅವರೆಲ್ಲರ ಸೇವಾ ಕಾರ್ಯಗಳು ಆದರ್ಶವಾಗುತ್ತಾ ಹೋಯಿತು. ಸಮಾಜ ಸೇವೆ ಆರಂಭ ಎಂದಿನಿಂದ?

ಉದ್ಯೋಗದ ಹಿನ್ನೆಲೆಯಲ್ಲಿ ಅಬುಧಾಬಿಗೆ ತೆರಳಿ ೨೮ ವರ್ಷಗಳಾಯಿತು. ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೆ. ಆಗಲೇ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದೆ. ಬೆಂಗಳೂರು ಬಂಟರ ಸಂಘ, ಬೆಂಗಳೂರು ತುಳು ಕೂಟ ಇನ್ನಿತರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದೆ. ಅಂದಿನಿಂದಲೇ ನನ್ನ ಆದಾಯದಿಂದ ಒಂದು ಪಾಲನ್ನು ಸಮಾಜಕ್ಕಾಗಿ ಮೀಸಲು ಇರಿಸಿಕೊಂಡು ಬಂದಿದ್ದೇನೆ. ಜಾತಿ, ಧರ್ಮಗಳನ್ನು ನೋಡದೆ ನೋವು ಸಂಕಷ್ಟದಲ್ಲಿರುವವರಿಗೆ ಸ್ಪಂದನೆ ನೀಡುತ್ತಿದ್ದೇನೆ. ಹ್ಯುಮ್ಯಾನಿಟಿ (ಮಾನವೀಯತೆ) ಮೊದಲು ಕಮ್ಯುನಿಟಿ (ಸಮುದಾಯ) ನಂತರ ಎಂಬುದು ನನ್ನ ಧ್ಯೇಯ. ನಾನು ನೀಡಿದ ಸಹಾಯ ನಿರ್ದಿಷ್ಟ ಉದ್ಧೇಶಕ್ಕೆ ಬಳಕೆಯಾಗಬೇಕು ಎಂಬುದು ಆಕಾಂಕ್ಷೆ. ಅದನ್ನು ಗಮನಿಸುತ್ತೇನೆ. ಬೆಂಗಳೂರಿನಿಂದ ಆರಂಭಗೊಂಡ ಸಮಾಜ ಸೇವೆ ಈ ತನಕ ಮುಂದುವರಿಸಿಕೊಂಡು ಬಂದಿದ್ದೇನೆ.

ನೆನಪಿನಲ್ಲಿ ಉಳಿಯುವ ಸೇವಾ ಕಾರ್ಯ ಯಾವುದು?ಕೊರೊನಾ ಪ್ರಥಮ ಸಂದರ್ಭದಲ್ಲಿ ೧೨೦೦ ಕುಟುಂಬಗಳಿಗೆ ಆಹಾರದ ಕಿಟ್ ನೀಡಿದ್ದೇನೆ. ಕೊರೊನಾ ದ್ವಿತೀಯ ಸಂದರ್ಭದಲ್ಲಿ ಪುತ್ತೂರು ಜಾತ್ರೆ ಆರಂಭಗೊಂಡಿತ್ತು. ಜಾತ್ರೆಯಲ್ಲಿ ಜಾಯಿಂಟ್ ವೀಲ್ ಅಳವಡಿಸಿದ ೯ ಕುಟುಂಬಗಳ ಸುಮಾರು ೬೫ ಮಂದಿ ಇದ್ದರು. ದಿಡೀರ್ ಲಾಕ್‌ಡೌನ್ ಆದ ಕಾರಣ ಈ ಕುಟುಂಬವು ಸಂಕಷ್ಟಕ್ಕೆ ಒಳಗಾಗಿತ್ತು. ಈ ಕುಟುಂಬದ ಸಂಕಷ್ಟದ ಬಗ್ಗೆ ಸ್ಥಳೀಯ ಚಾನೆಲ್ ವರದಿ ಮಾಡಿತ್ತು. ಇದನ್ನು ನಾನು ಅಬುದಾಬಿಯಲ್ಲಿ ಗಮನಿಸಿದೆ. ಬಹಳ ನೋವಾಯಿತು. ನಮ್ಮ ಊರಿಗೆ ಬಂದು ಊಟವಿಲ್ಲದೆ ಆ ಕುಟುಂಬಗಳು ಬಳಲ ಬಾರದು ಎಂದು ನಿರ್ಧರಿಸಿದೆ. ಮಾರನೇ ಈ ಬಗ್ಗೆ ಕ್ರಮ ಕೈಗೊಂಡು ಆ ಕುಂಟುಂಬಗಳಿಗ ಒಂದು ತಿಂಗಳಿಗೆ ಬೇಕಾದಷ್ಟು ಆಹಾರ, ತರಕಾರಿ, ಔಷಧ ಇನ್ನಿತರ ವಸ್ತುಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಿದೆ. ಈ ಸಂದರ್ಭದಲ್ಲಿ ಸ್ಥಳೀಯ ಚಾನೆಲ್ ಮಾಲಕರು, ನಗರಸಭೆ, ದೇವಳದ ಆಡಳಿತ ಮಂಡಳಿ, ನಮ್ಮ ಕುಟುಂಬಸ್ಥರು ಎಲ್ಲರೂ ಕಿಟ್ ವಿತರಣೆಗೆ ಸಹಕರಿಸಿದರು. ಬಳಿಕ ನಗರಸಭೆ, ಪೊಲೀಸ್ ಇಲಾಖೆ ಇನ್ನಿತರರು ಸುಮಾರು ೪ ತಿಂಗಳ ತನಕ ಅವರಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಇದನ್ನು ನೆನಸಿದರೆ ಮನಸ್ಸಿಗೆ ತುಂಬಾ ತೃಪ್ತಿ ಆಗುತ್ತದೆ. ನಾವು ಒಳ್ಳೆಯ ಕೆಲಸ ಮಾಡಿದಾಗ ಅದರಿಂದ ಸಿಗುವ ತೃಪ್ತಿಯನ್ನು ಹೇಳಲು ಸಾಧ್ಯವಿಲ್ಲ. ಶಿಕ್ಷಣಕ್ಕೆ ಸಹಕಾರ ನೀಡಿದ್ದೀರಂತೆ? ನಾವು ಮಕ್ಕಳಿಗೆ ಮಾಡುವ ಆಸ್ತಿ ಸೆಕಂಡರಿ, ಅವರಿಗೆ ಶಿಕ್ಷಣ ನೀಡುವುದು ಪ್ರಥಮ ಆದ್ಯತೆಯಾಗಬೇಕು. ಶಿಕ್ಷಣವಂತ ಸಮಾಜದಿಂದ ದೇಶದ ಉನ್ನತಿ ಇದೆ. ಈ ನಿಟ್ಟಿನಲ್ಲಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನನ್ನ ಆಶಯ. ಅದಕ್ಕಾಗಿ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದ ಮಕ್ಕಳಿಗೆ ಸಹಾಯ ಒದಗಿಸುತ್ತಾ ಬಂದಿದ್ದೇನೆ. ಕೇವಲ ಜಿಲ್ಲೆಯ ರಾಜ್ಯದ ಮಕ್ಕಳಿಗೆ ಮಾತ್ರವಲ್ಲದೆ ನೆರೆಯ ಕೇರಳ, ಆಂದ್ರಪ್ರದೇಶ, ತಮಿಳುನಾಡಿದ ಬಡ ಮಕ್ಕಳಿಗೂ ಶಿಕ್ಷಣದ ನೆರವು ನೀಡಿದ್ದೇನೆ. ಈ ಬಗ್ಗೆ ಸಂಘ ಸಂಸ್ಥೆಗಳಿಂದ ಮಾಹಿತಿ ಪಡೆದುಕೊಂಡು ನೆರವು ನೀಡುತ್ತಿದ್ದೇನೆ. ಇದರ ಜೊತೆಗೆ ಬಡ ಹೆಣ್ಣು ಮಕ್ಕಳ ಮದುವೆಗೂ ಆರ್ಥಿಕ ಸಹಾಯ ನೀಡಿದ್ದೇನೆ.

ಯುವ ಸಮುದಾಯಕ್ಕೆ ನಿಮ್ಮ ಕಿವಿಮಾತು ಏನು? ಈ ದೇಶದಲ್ಲಿ ಜನ್ಮ ಪಡೆದಿರುವ ನಾವು ಭಾಗ್ಯವಂತರು. ಇಷ್ಟೊಂದು ಜನಸಂಖ್ಯೆ ಇದ್ದರೂ ನಮ್ಮೊಳಗಿನ ಹೊಂದಾಣಿಕೆ ಪ್ರಪಂಚಕ್ಕೆ ಮಾದರಿಯಾಗಿದೆ. ಯುವ ಸಮುದಾಯ ತಾವು ಗಳಿಸಿದ ಆದಾಯದಲ್ಲಿ ಒಂದಂಶವನ್ನು ದೇಶದ ಒಳಿತಿಗಾಗಿ ಮೀಸಲಿಡಬೇಕು. ಹಿರಿಯರನ್ನು ಕಡೆಗಣಿಸಬಾರದು. ಹೆತ್ತವರ ಆಶೀರ್ವಾದ ಯಾವಾಗಲೂ ನಮಗಿರಬೇಕು. ಹೆತ್ತವರು, ಕುಟುಂಬ, ಸಮಾಜ, ದೇಶ, ನಾವು ಕಲಿತ ಶಾಲೆ, ಕಲಿಸಿದ ಗುರುಗಳು ಇವರನ್ನು ಯಾವತ್ತೂ ಮರೆಯಬಾರದು. ಮುಂದಿನ ಗುರಿ:ಈಗಾಗಲೇ ನನಗೆ ೬೦+ ಆಯಿತು. ವಿದೇಶದಲ್ಲಿದ್ದರೂ ವರ್ಷಕ್ಕೆ ಐದಾರು ಬಾರಿ ಊರಿಗೆ ಬರುತ್ತಿದ್ದೇನೆ. ದೇವರು ಶಕ್ತಿ ನೀಡಿದಷ್ಟು ಸಮಾಜ ಸೇವೆಯನ್ನು ಮುಂದುವರಿಸುವ ಗುರಿ ಹೊಂದಿದ್ದೇನೆ. --------------------------ಮಿತ್ರಂಪಾಡಿ ಜಯರಾಮ ರೈ ಅವರು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ದಿ. ಚೆನ್ನಪ್ಪ ರೈ ಮತ್ತು ಡಿಂಬ್ರಿಗುತ್ತು ಸರಸ್ವತಿ ರೈ ಪುತ್ರ. ಪ್ರಸ್ತುತ ಅರಬ್ ಸಂಯುಕ್ತ ಸಂಸ್ಥಾನದ ಅಬುದಾಬಿಯಲ್ಲಿ ‘ಬಿನ್ ಫರ್ದನ್’ ಸಂಸ್ಥೆಯ ಸಿಎಫ್ ಒ ಆಗಿದ್ದಾರೆ. ಅವರ ಸಮಾಜ ಸೇವೆಗಾಗಿ ೨೦೨೪ರಲ್ಲಿ ಆರ್ಯಭಟ ಇಂಟರ್‌ನ್ಯಾಷನಲ್ ಅವಾರ್ಡ್ ಮತ್ತು ಬಂಟರತ್ನ ಪ್ರಶಸ್ತಿ, ೨೦೨೨ರಲ್ಲಿ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೨೦೨೩ರಲ್ಲಿ ಗಡಿನಾಡ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಜನ ತೀರ್ಮಾನ
ಎರಡನೇ ದಿನವೂ ಸಿಎಂ ಬಿರುಸಿನ ಪ್ರಚಾರ