ಪುತ್ತೂರು: ಪುತ್ತೂರಿನಲ್ಲಿ ಆವಶ್ಯಕತೆಗೆ ತಕ್ಕಷ್ಟು ಕೆಎಸ್ಸಾರ್ಟಿಸಿ ಬಸ್ಸುಗಳು ಓಡಾಟ ನಡೆಸುತ್ತಿದೆ. ಇಲ್ಲಿ ಬಸ್ಸಿನ ಕೊರತೆಯಿಲ್ಲ. ಹೊಸ ಬಸ್ಸು ರೂಟ್‌ಗಳ ಬೇಡಿಕೆಗಳಿದ್ದಲ್ಲಿ ಅದನ್ನು ಪರಿಹರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.ಪುತ್ತೂರಿನಿಂದ ಜಾವೆಗಲ್ ಮೂಲಕ ಅರಸಿಕರೆಗೆ ಮತ್ತು ಪುತ್ತೂರಿನಿಂದ ಮೈಸೂರು ಮೂಲಕ ಬೆಂಗಳೂರಿಗೆ ಎಸಿ ಸುಪರ್ ಡಿಲಕ್ಸ್ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪುತ್ತೂರಿನಿಂದ ಬೆಂಗಳೂರಿಗೆ ಎಸಿ ಬಸ್ ಸೇವೆ ಆರಂಭಿಸಲಾಗುತ್ತಿದೆ. ಮೈಸೂರು ಮಾರ್ಗವಾಗಿ ಬಸ್‌ಗಳನ್ನೂ ಹಂತ ಹಂತವಾಗಿ ಪರಿಚಯಿಸುವ ಯೋಜನೆ ಇದೆ. ಪುತ್ತೂರು, ಮಂಗಳೂರು ಘಟಕಕ್ಕೆ ಎಲೆಕ್ಟ್ರಿಕ್ ಬಸ್ ಗಳನ್ನು ತರುವ ಪ್ರಯತ್ನ ನಡೆದಿದೆ. ಪುತ್ತೂರು-ಮಂಗಳೂರು ನಡುವೆ ಈಗಾಗಲೇ ಎಕ್ಸ್‌ಪ್ರೆಸ್ ಬಸ್ ಸೇವೆ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಮುಂಬೈ ಸಂಪರ್ಕವನ್ನೂ ವಿಸ್ತರಿಸಲಾಗುವುದು ಎಂದರು.
ಸಿಟಿ ಬಸ್ ವ್ಯವಸ್ಥೆ ಕುರಿತು ರಿಕ್ಷಾ ಚಾಲಕರ ಜೊತೆ ಚರ್ಚೆ ನಡೆಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರಸ್ತುತ ೧೦ ಬಸ್‌ಗಳ ಕೊರತೆ ಇದ್ದು, ಮುಂದಿನ ೧೫ ದಿನಗಳಲ್ಲಿ ಸುಮಾರು ೨೦ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಏ.೧ರಿಂದ ಪ್ರತಿದಿನ ಬೆಳಗ್ಗೆ ೮ ಗಂಟೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಬಸ್ ಹೊರಡಲಿದೆ. ಉಪ್ಪಿನಂಗಡಿ-ಗುಂಡ್ಯ-ಸಕಲೇಶಪುರ-ಬೇಳೂರು-ಹಳೆಬೀಡು ಮಾರ್ಗವಾಗಿ ಮಧ್ಯಾಹ್ನ ೧೨.೩೦ಕ್ಕೆ ಜಾವೆಗಲ್ ತಲುಪಲಿದ್ದು, ಮುಂದುವರಿದು ೧.೩೦ಕ್ಕೆ ಅರಸಿಕರೆಗೆ ತಲುಪುತ್ತದೆ. ಅಲ್ಲಿಂದ ೧.೪೫ಕ್ಕೆ ಹೊರಟು ಸಂಜೆ ೭.೧೫ಕ್ಕೆ ಪುತ್ತೂರಿಗೆ ವಾಪಸ್ಸಾಗಲಿದೆ. ರಾತ್ರಿ ೯.೧೫ಕ್ಕೆ ಪುತ್ತೂರಿನಿಂದ ಬೆಂಗಳೂರಿಗೆ ಎಸಿ ಬಸ್ ಹೊರಡಲಿದ್ದು, ಬೆಂಗಳೂರಿನಿಂದ ರಾತ್ರಿ ೯.೫೨ಕ್ಕೆ ಪುತ್ತೂರಿಗೆ ಪ್ರಯಾಣ ಆರಂಭಿಸಲಿದೆ ಎಂದು ತಿಳಿಸಿದರು. ಪುತ್ತೂರು ತಾಲೂಕು ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಮಾಜಿ ಅಧ್ಯಕ್ಷ ಶುಕೂರ್ ಹಾಜಿ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್. ಮಹಮ್ಮದ್ ಆಲಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮತ್ತಿತರರಿದ್ದರು. ಡಿಪೋ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿದರು. ಸಂಚಾರ ನಿಯಂತ್ರಣಾಧಿಕಾರಿ ವೆಂಕಟರಮಣ ಭಟ್ ವಂದಿಸಿದರು.