ಮಂಗಳೂರು ಮಹಾನಗರ ಪಾಲಿಕೆ: 180.70 ಕೋಟಿ ರು.ಗಳ ಉಳಿಕೆ ಬಜೆಟ್‌

KannadaprabhaNewsNetwork |  
Published : Feb 26, 2025, 01:04 AM IST
ಮಹಾನಗರ ಪಾಲಿಕೆ ವಿಶೇಷ ಸಭೆಯಲ್ಲಿ ಬಜೆಟ್‌ ಮಂಡಿಸಿದ ಕದ್ರಿ ಮನೋಹರ ಶೆಟ್ಟಿ  | Kannada Prabha

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್‌ ಮನೋಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್‌ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಆರಂಭಿಕ ಶಿಲ್ಕು 325.78 ಕೋಟಿ ರು. ಆಗಿದೆ. ಮುಂದಿನ ಸಾಲಿನಲ್ಲಿ 741.25 ಕೋಟಿ ರು. ಆದಾಯ ಹಾಗೂ 886.33 ಕೋಟಿ ರು. ವೆಚ್ಚ ನಿರೀಕ್ಷಿಸಲಾಗಿದ್ದು, 180.70 ಕೋಟಿ ರು.ಗಳ ಉಳಿಕೆ ಕಾಣಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್‌ ಮನೋಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್‌ ಮಂಡಿಸಿದರು.

ಜನಸ್ನೇಹಿ ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ, ಆದಾಯ ಮೂಲಗಳನ್ನು ಗುರುತಿಸಿ ರಾಜಸ್ವ ಕ್ರೋಢೀಕರಣಕ್ಕೆ ಒಳಪಡಿಸುವುದು, ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು, ಪ್ರಗತಿಯಲ್ಲಿರುವ ಕಾಮಗಾರಿಗಳ ಪೂರ್ಣಗೊಳಿಸಲು ಆದ್ಯತೆ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಆದ್ಯತೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ, ನಾಗರಿಕರ ಅಭಿವೃದ್ಧಿಗೆ ವಿಶೇಷ ಕಲ್ಯಾಣ ಕಾರ್ಯಕ್ರಮಗಳ ದೃಷ್ಟಿಕೋನವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಸ್ಮಾರ್ಟ್‌ಸಿಟಿ ಬಾಕಿ ಅನುದಾನ:

ಸ್ಮಾರ್ಟ್‌ಸಿಟಿ ಯೋಜನೆಯಡಿ 930 ಕೋಟಿ ರು.ಗಳಲ್ಲಿ ಒಟ್ಟು 57 ಕಾಮಗಾರಿ ಮತ್ತು 4 ಪಿಪಿಪಿ ಯೋಜನೆ ಅನುಮೋದಿಸಲಾಗಿದೆ. ಇದರಲ್ಲಿ 39 ಯೋಜನೆ ಪೂರ್ಣಗೊಂಡಿದೆ. 8 ಕಾಮಗಾರಿ ಪ್ರಗತಿಯಲ್ಲಿದೆ. 10 ಯೋಜನೆಗಳಿಗೆ ಇಲಾಖೆ ಅನುದಾನ ಬಿಡುಗಡೆಗೊಳಿಸಿದೆ. ಈವರೆಗೆ 916 ಕೋಟಿ ರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ. ಉಳಿದ 73.50 ಕೋಟಿ ರು.ಗೆ ಅನುಮೋದನೆ ಸಿಕ್ಕಿದ್ದು, ಸ್ಮಾರ್ಟ್‌ಸಿಟಿ ಕಂಪನಿಗೆ ಪಾವತಿಯಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.

ಆಡಳಿತ ಸುಧಾರಣಾ ಕ್ರಮ:

ಪಾಲಿಕೆಯ ಕಾಯಂ ನೌಕರರಿಗೆ ಜೆಪ್ಪುವಿನಲ್ಲಿ ನೂತನ ವಸತಿ ನಿರ್ಮಿಸಲಾಗಿದ್ದು, ಸಿಬ್ಬಂದಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಜಿ4 ಕೆಟಗರಿಗೆ ಮಂಜೂರಾತಿ ಸಿಕ್ಕಿದ್ದು, ಈ ಸಾಲಿನಲ್ಲಿ ಕಾರ್ಯಗತಗೊಳ್ಳಲಿದೆ. ಕಳೆದ ಸಾಲಿನಲ್ಲಿ ಸಿಬ್ಬಂದಿ ಆರೋಗ್ಯ ಸಿರಿ ಯೋಜನೆಯ ಸಿಬ್ಬಂದಿ ಕುಟುಂಬ ಮಿತ್ರ ಯೋಜನೆಯನ್ನು ಈ ಸಾಲಿನಲ್ಲೂ ವಿಸ್ತರಿಸಲಾಗಿದೆ.

ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಳವಡಿಸಲು ತಂಡ ರಚಿಸಿ ಮನೆ ಮನೆಗೆ ಭೇಟಿ ನೀಡಿ ಸರ್ವೆ ನಡೆಸಲು ಉದ್ದೇಶಿಸಲಾಗಿದೆ. ಆಯ್ದ ರಸ್ತೆ ಜಂಕ್ಷನ್‌ಗಳಲ್ಲಿ ಪಿಂಕ್‌ ಮಾದರಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

ಆದಾಯ, ಅನುದಾನ:

ಈ ಸಾಲಿನಲ್ಲಿ ನೀರಿನ ತೆರಿಗೆಯಿಂದ 5,500 ಲಕ್ಷ ರು., ಆಸ್ತಿ ತೆರಿಗೆ 9,591.45 ಲಕ್ಷ ರು., ಉದ್ದಿಮೆ ಪರವಾನಿಗೆ 460.43 ಲಕ್ಷ ರು., ಎಸ್‌ ಡಬ್ಲ್ಯೂಎಂ ಕರ 2,500 ಲಕ್ಷ ರು., ರಸ್ತೆ ಕಡಿತ ಮತ್ತು ಪುನರ್‌ ನಿರ್ಮಾಣ ಶುಲ್ಕ 875 ಲಕ್ಷ ರು., ಒಳಚರಂಡಿ ಶುಲ್ಕ 440 ಲಕ್ಷ ರು., ಮಾರುಕಟ್ಟೆ, ಸ್ಟಾಲ್‌ ಹಾಗೂ ಇತರ ಬಾಡಿಗೆ 539 ಲಕ್ಷ ರು., ಖಾತಾ ವರ್ಗಾವಣೆ ಶುಲ್ಕ 402 ಲಕ್ಷ ರು., ಕಟ್ಟಡ ಪರವಾನಿಗೆ ಮತ್ತು ಪ್ರೀಮಿಯಂ ಎಫ್‌ಎಆರ್‌ 2,481.85 ಲಕ್ಷ ರು., ಅಧಿಭಾರ ಶುಲ್ಕ 1,007 ಲಕ್ಷ ರು. ಹಾಗೂ ಜಾಹಿರಾತು ತೆರಿಗೆ 370 ಲಕ್ಷ ರು. ಮೊತ್ತ ಸಂಗ್ರಹ ನಿರೀಕ್ಷಿಸಲಾಗಿದೆ.

ಇದಲ್ಲದೆ ಎಸ್‌ಸಿ ಎಸ್‌ಟಿ ಪಂಗಡಕ್ಕೆ ಅಪಘಾತ ವಿಮೆಯಾಗಿ 1 ಕೋಟಿ ರು., ಜನರ ಆರೋಗ್ಯ ರಕ್ಷಣೆಗೆ 44 ಲಕ್ಷ ರು., ಪ್ರತಿ ವಾರ್ಡಿಗೆ 3 ಸಿಸಿ ಟಿವಿ ಅಳವಡಿಸಲು 90 ಲಕ್ಷ ರು., ಸ್ವಚ್ಛತೆಯ ಕಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಿಸಲು 20 ಲಕ್ಷ ರು., ಬೀದಿ ನಾಯಿಗಳ ನಿಯಂತ್ರಣಕ್ಕೆ 56 ಲಕ್ಷ ರು., ಪ್ರಧಾನ ಮಂತ್ರಿ ಸೂರ್ಯ ಘರ್‌ ಯೋಜನೆಯಡಿ ಸೋಲಾರ್‌ ಪ್ಯಾನರ್‌ ಬೋರ್ಡ್‌ ಅಳವಡಿಕೆಗೆ 10 ಕೋಟಿ ರು., ಸರ್ಕಾರಿ ಶಾಲೆ -ನಮ್ಮ ಹೊಣೆಯಡಿ ದುರಸ್ತಿಗೆ 35 ಲಕ್ಷ ರು., ಬ್ರಹ್ಮಶ್ರೀ ನಾರಾಯಣಗುರು ಮತ್ತು ಭಗವಾನ್‌ ಶ್ರೀನಿತ್ಯಾನಂದ ಸ್ವಾಮಿಗಳ ಜಯಂತಿ ಆಚರಣೆಗೆ 20 ಲಕ್ಷ ರು., ವೀರ ಯೋಧರ ಕಲ್ಯಾಣ ನಮ್ಮ ಕರ್ತವ್ಯ ನಮ್ಮ ಯೋದ ಕಾರ್ಯಕ್ರಮದಡಿ ವೀರ ಯೋಧರ ಕುಟುಂಬಕ್ಕೆ ನೆರವಾಗಲು 10 ಲಕ್ಷ ರು., ತುಳು ಭಾಷೆ ಅಭಿವೃದ್ಧಿ ಬಲೆ ತುಳುಒರಿಪಾಲೆಗಾಗಿ 10 ಲಕ್ಷ ರು., ಜನಸಾಮಾನ್ಯರಿಂದ ವಿಜ್ಞಾನ-ವಿಜ್ಞಾನಿ, ಸುಜ್ಞಾನಿ ಯೋಜನೆಯಡಿ 5 ಲಕ್ಷ ರು., ನಗರ ಹಸುರೀಕರಣಕ್ಕೆ 45 ಲಕ್ಷ ರು., ಕಂಬಳ ಉತ್ತೇಜನಕ್ಕೆ 6 ಲಕ್ಷ ರು., ಯಕ್ಷಗಾನಕ್ಕೆ 10 ಲಕ್ಷ ರು. ಹಂಚಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ.

ಉಪ ಮೇಯರ್‌ ಭಾನುಮತಿ, ಆಯುಕ್ತ ರವಿಚಂದ್ರ ನಾಯಕ್‌ ಇದ್ದರು. ...............

ಜನಪರ ಕಲ್ಯಾಣ ಕಾರ್ಯಕ್ರಮಗಳು

ನೀರು ಸರಬರಾಜು ನಿರ್ವಹಣೆಗೆ 23.17 ಕೋಟಿ ರು. ಹಾಗೂ ತುಂಬೆ ಡ್ಯಾಂ ನವೀಕರಣಕ್ಕೆ 1 ಕೋಟಿ ರು. ಕಾದಿರಿಸಲಾಗಿದೆ. ರಾಜಾ ಕಾಲುವೆಗಳ ಸಮಗ್ರ ನಿರ್ವಹಣೆ ಮೂಲಕ ಕೃತಕ ನೆರೆ ಮುಕ್ತ ಮಂಗಳೂರು ಮಾರ್ಪಡಿಸಲು ನಿರ್ದಿಷ್ಟ ಕ್ರಿಯಾ ಯೋಜನೆಗೆ 9.25 ಕೋಟಿ ರು. ಮೀಸಲಿರಿಸಲಾಗಿದೆ.

ಮಾರುಕಟ್ಟೆ ಆದಾಯ:

ಕದ್ರಿ ಮಾರುಕಟ್ಟೆ ನೆಲ ಮತ್ತು ಮೊದಲ ಮಹಡಿಯನ್ನು ಗುತ್ತಿಗೆ ವಹಿಸಲಾಗಿದ್ದು, ವಾರ್ಷಿಕ 1.20 ಕೋಟಿ ರು. ಆದಾಯ ನಿರೀಕ್ಷೆ, ಉಳಿದ 2 ಮತ್ತು 3ನೇ ಮಹಡಿಯ ಸ್ಟಾಲ್‌ ಹರಾಜಿಗೆ ನಿರ್ಧಾರ. ಕಂಕನಾಡಿ ಮಾರುಕಟ್ಟೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದೆ ಹರಾಜಿಗೆ ಕ್ರಮ, ವಾರ್ಷಿಕ 3 ಕೋಟಿ ರು. ಆದಾಯ ಗುರಿ, ಕೇಂದ್ರ ಮಾರುಕಟ್ಟೆ ಪಿಪಿಪಿ ಮಾದರಿಯಲ್ಲಿ ಪೂರ್ಣಗೊಂಡ ಬಳಿಕ 3.07 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಏಳು ವಿಶೇಷ ಕಾರ್ಯಕ್ರಮಗಳು

ಈ ಬಾರಿಯ ಬಜೆಟ್‌ನಲ್ಲಿ ಏಳು ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.

-ಸಶಕ್ತ ಮಹಿಳೆ- ಆರೋಗ್ಯ ಸಂರಕ್ಷಣೆ ಕಾರ್ಯಕ್ರಮದಲ್ಲಿ ಗರ್ಭ ಕಂಠದ ಕ್ಯಾನ್ಸರ್‌ ಹತೋಟಿಗೆ 3 ಲಕ್ಷ ರು. ಆದಾಯ ಮಿತಿಯಲ್ಲಿರುವ 11ರಿಂದ 14 ವರ್ಷದೊಳಗಿನ ಹೆಣ್ಮಕ್ಕಳಿಗೆ ಎಚ್‌ಪಿವಿ ಲಸಿಕೆ ಸಲುವಾಗಿ 25 ಲಕ್ಷ ರು. ಕಾದಿರಿಕೆ.

-ಅಟಲ್ ವಿದ್ಯಾನಿಧಿ ಯೋಜನೆಯಡಿ 1ರಿಂದ 10ನೇ ತರಗತಿ ವರೆಗೆ ಶಾಲಾ ಶುಲ್ಕ ಸೂಕ್ತ ಸಮಯದಲ್ಲಿ ಪಾವತಿಸಲು ಅಸಾಧ್ಯವಾದ ಪೋಷಕರಿಗೆ 2 ವರ್ಷದೊಳಗೆ ಮರು ಪಾವತಿಸುವ ಷರತ್ತಿನಲ್ಲಿ ಬಡ್ಡಿ ರಹಿತ ಸಾಲ ಯೋಜನೆ. 5 ಲಕ್ಷ ರು. ವಾರ್ಷಿಕ ಆದಾಯದ ಮಿತಿಯ ವಿದ್ಯಾರ್ಥಿಗಳಿಗಾಗಿ 5 ಕೋಟಿ ರು. ನಿಗದಿ. ಈ ಯೋಜನೆಯನ್ನು ಗರಿಷ್ಠ ಸಂಖ್ಯೆ ವಿದ್ಯಾರ್ಥಿಗಳಿಗೆ ದೊರಕಿಸಲು ಎನ್‌ಜಿಒ ಹಾಗೂ ವಿವಿಧ ಕಂಪನಿಗಳ ಸಿಎಸ್ಆರ್‌ ನಿಧಿಯಡಿ ಅನುದಾನಕ್ಕೂ ಕ್ರಮ.

-ಸ್ಟೀಲ್‌ ಬ್ಯಾಂಕ್‌ ಯೋಜನೆಯಡಿ ಪ್ಲಾಸ್ಟಿಕ್‌ ಮುಕ್ತ ಮಾಡಿ ಸ್ಟೀಲ್‌ ಪಾತ್ರೆ ಒದಗಿಸಲು 20 ಲಕ್ಷ ರು. ಪಾಲಿಕೆಯಿಂದ ಬಾಡಿಗೆ ರಹಿತವಾಗಿ ಮರುಪಾವತಿ ಠೇವಣಿ ನೀಡಿ ಈ ಯೋಜನೆಯ ಸದುಪಯೋಗ ಪಡೆಯಬಹುದು.

-ಪಾಲಿಕೆ ಸದಸ್ಯರಿಗೆ ಆರೋಗ್ಯ ಮಿತ್ರ ಯೋಜನೆಯಡಿ ಎಲ್ಲ 60 ಸದಸ್ಯರಿಗೆ ವಿಮಾ ಸೌಲಭ್ಯ ಒದಗಿಸಲು 10 ಲಕ್ಷ ರು. ಕಾದಿರಿಸಲಾಗಿದೆ.

-ಕೃಷಿ ಮಿತ್ರ ಯೋಜನೆಯಲ್ಲಿ ಕೃಷಿ ಬಗ್ಗೆ ಉಚಿತ ತರಬೇತಿಯನ್ನು ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ನೀಡುವ ಬಗ್ಗೆ ಎನ್‌ಜಿಒಗಳಿಗೆ ಪ್ರೋತ್ಸಾಹಿಸಲು 3 ಲಕ್ಷ ರು. ನಿಗದಿಪಡಿಸಲಾಗಿದೆ.

-ಕದ್ರಿಯಲ್ಲಿ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ನಿರ್ಮಾಣವಾಗಲಿದ್ದು, ಪಿಪಿ ಅಥವಾ ಸರ್ಕಾರದ ವಿಶೇಷ 10 ಕೋಟಿ ರು. ಅನುದಾನದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

-ಮಂಗಳೂರು ಪಾಲಿಕೆ ಜುಲೈ 3, 1980ರಂದು ಅಸ್ತಿತ್ವಕ್ಕೆ ಬಂದ ನೆನಪಲ್ಲಿ ಪಾಲಿಕೆಡ್‌ ಒಂಜಿ ದಿನ ಕಾರ್ಯಕ್ರಮಕ್ಕೆ 20 ಲಕ್ಷ ರು. ಕಾದಿರಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''