ಕನ್ನಡಪ್ರಭ ವಾರ್ತೆ ಮಂಗಳೂರು
ಫೆಬ್ರವರಿ ಅಂತ್ಯಕ್ಕೆ ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲೇ ಪಾಲಿಕೆ ಆಯುಕ್ತರು ಆಡಳಿತಾಧಿಕಾರಿ ನೇಮಕ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಈಗ ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಂಡು ದಿನಗಳೇ ಕಳೆದಿದೆ. ಆದರೂ ಆಡಳಿತಾಧಿಕಾರಿ ನೇಮಕದ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಮಹಾನಗರ ಪಾಲಿಕೆಗಳಿಗೆ ಈ ಹಿಂದೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಕ ಮಾಡಲಾಗುತ್ತಿತ್ತು. ಕಳೆದ ಅವಧಿಯಿಂದ ಆಯಾ ವಿಭಾಗಗಳ ಆಯುಕ್ತರೇ ಆಡಳಿತಾಧಿಕಾರಿಗಳಾಗಿರುತ್ತಾರೆ. ಹಾಗಾಗಿ ಮಂಗಳೂರು ಪಾಲಿಕೆಗೆ ಮೈಸೂರು ವಿಭಾಗದ ಆಯುಕ್ತರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿದೆ.ಆಡಳಿತಾಧಿಕಾರವೋ\ ಚುನಾವಣೆಯೋ?:
ಇದುವರೆಗೂ ಆಡಳಿತಾಧಿಕಾರಿ ನೇಮಕಗೊಳಿಸದ ಕಾರಣ ಸರ್ಕಾರ ಬಾಕಿ ಇರುವ ಪಾಲಿಕೆ ಜೊತೆಗೆ ಮಂಗಳೂರು ಪಾಲಿಕೆಗೂ ಚುನಾವಣೆ ನಡೆಸುತ್ತದೆಯೇ ಎಂಬ ಅನುಮಾನವೂ ರಾಜಕೀಯ ಪಕ್ಷಗಳಿಗೆ ಕಾಡತೊಡಗಿದೆ. ಈ ಕುರಿತಂತೆ ಸರ್ಕಾರ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ.
ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಂಡ ಬಳಿಕ ಸಹಜವಾಗಿಯೇ ಆಡಳಿತಾಧಿಕಾರಿಗಳ ಆಡಳಿತ ಎಂಬುದು ಜನಜನಿತ. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುವಲ್ಲಿ ವಿಳಂಬವಾದರೂ ಕಾರುಭಾರು ಪೂರ್ತಿ ಅಧಿಕಾರಿಗಳದ್ದೇ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಮಾಜಿ ಹಿರಿಯ ಸದಸ್ಯರು.