ಶುಶ್ರೂಷಾ ವೃತ್ತಿ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ಯು.ಟಿ.ಖಾದರ್‌

KannadaprabhaNewsNetwork |  
Published : Nov 26, 2026, 03:00 AM IST
ನರ್ಸಿಂಗ್ ವೃತ್ತಿಪರರಿಗೆ ಕೆಎಸ್‌ಎನ್‌ಸಿ ಆನ್‌ಲೈನ್ ಸೇವೆಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು (ಕೆಎಸ್‌ಎನ್‌ಸಿ) ಬೆಂಗಳೂರು ವತಿಯಿಂದ ಮಂಗಳೂರು ವಿಭಾಗದ ಶುಶ್ರೂಷಾ ವೃತ್ತಿಪರರಿಗಾಗಿ ಆನ್‌ಲೈನ್ ಸೇವೆಗಳು ಹಾಗೂ ಇತರ ವೃತ್ತಿಪರ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ

ಮಂಗಳೂರು: ಶುಶ್ರೂಷಾ ವೃತ್ತಿ ಅತ್ಯಂತ ಪವಿತ್ರ ಹಾಗೂ ಸಮಾಜಮುಖಿ ಸೇವೆಯಾಗಿದ್ದು, ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದರು.

ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು (ಕೆಎಸ್‌ಎನ್‌ಸಿ) ಬೆಂಗಳೂರು ವತಿಯಿಂದ ಮಂಗಳೂರು ವಿಭಾಗದ ಶುಶ್ರೂಷಾ ವೃತ್ತಿಪರರಿಗಾಗಿ ಆನ್‌ಲೈನ್ ಸೇವೆಗಳು ಹಾಗೂ ಇತರ ವೃತ್ತಿಪರ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಗರದ ಕೊಂಚಾಡಿಯ ಪಾಲೆಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಶುಶ್ರೂಷಾ ವೃತ್ತಿಪರರಿಗೆ ಅಗತ್ಯ ಸೇವೆಗಳನ್ನು ಸುಲಭವಾಗಿ ತಲುಪಿಸಲು ಆನ್‌ಲೈನ್ ವ್ಯವಸ್ಥೆಗಳನ್ನು ಸರಳಗೊಳಿಸುವುದು ಹಾಗೂ ವಿಭಾಗೀಯ ಮಟ್ಟದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಶುಶ್ರೂಷಾ ವೃತ್ತಿಪರರು, ಉದ್ಯೋಗಾಕಾಂಕ್ಷಿಗಳು, ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ಕೆಎಸ್‌ಎನ್‌ಸಿಯ ವಿವಿಧ ಡಿಜಿಟಲ್ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು. ಆನ್‌ಲೈನ್ ನೋಂದಣಿ ಮತ್ತು ನವೀಕರಣ, ನಿರಾಕ್ಷೇಪಣಾ ಪತ್ರ (ಎನ್‌ಒಸಿ), ಗುಡ್ ಸ್ಟ್ಯಾಂಡಿಂಗ್ ಸರ್ಟಿಫಿಕೇಟ್, ಪರಸ್ಪರ ನೋಂದಣಿ, ಶಿಕ್ಷಣ ಸಂಸ್ಥೆಗಳ ನವೀಕರಣ ಮತ್ತು ಮಾನ್ಯತೆ ಹಾಗೂ ನಿರಂತರ ಶುಶ್ರೂಷಾ ಶಿಕ್ಷಣ (ಸಿಎನ್‌ಇ) ಕುರಿತು ವಿವರಿಸಲಾಯಿತು. ನರ್ಸ್ ನೋಂದಣಿ ಟ್ರ್ಯಾಕಿಂಗ್ ವ್ಯವಸ್ಥೆ (ಎನ್‌ಆರ್‌ಟಿಎಸ್), ವಿದೇಶಿ ಭಾಷಾ ತರಬೇತಿ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್‌ಡಿಸಿ) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದ ಮೂಲಕ ಲಭ್ಯವಿರುವ ವಿದೇಶಿ ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.

ಕೆಎಸ್‌ಎನ್‌ಸಿ ಉಪಾಧ್ಯಕ್ಷ ಡಾ. ವೆಂಕಟಗಿರಿ, ಡಾ. ಎಂ.ಬಿ. ತಡಲಗಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಕಾಶ್ ಡಿ.ಎಸ್., ಕೌಶಲ್ಯ ತರಬೇತಿ ಅಧಿಕಾರಿ ಪ್ರದೀಪ್ ಡಿ’ಸೋಜಾ ಹಾಗೂ ಡಾ. ಲಾರಿಸ್ಸಾ ಮಾರ್ಥಾ ಸ್ಯಾಮ್ಸ್ ಇದ್ದರು.ಕೆಎಸ್‌ಎನ್‌ಸಿ ಕುಲಸಚಿವ ಡಾ.ಶ್ರೀಕಾಂತ್ ಫುಲಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪವಿತ್ರಾ ವಂದಿಸಿದರು. ಡಾ.ಜೋಸ್ಮಿತಾ ಮಾರಿಯಾ ಡಿಸೋಜಾ ಮತ್ತು ಸುನಿತಾ ಮೆರ್ಲಿನ್ ಫರ್ನಾಂಡಿಸ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 1,500 ಮಂದಿ ಶುಶ್ರೂಷಾ ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ಸಂಬಂಧಿತ ಕ್ಷೇತ್ರದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5394 ಕೋಟೀಲಿ 2875 ಕಿಮೀ ರಸ್ತೆ ಅಭಿವೃದ್ಧಿ: ಕೃಷ್ಣ
ಭದ್ರಾ ಡ್ಯಾಂ ಬಲ, ಎಡದಂಡೆ ನಾಲೆಗಳಿಗೆ ನೀರು ಹರಿಸಿ