ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ಚಾಂಪಿಯನ್‌

KannadaprabhaNewsNetwork | Published : Jul 29, 2024 12:53 AM

ಸಾರಾಂಶ

ಪುರುಷ ಮತ್ತು ಮಹಿಳಾ ತಂಡ ಚಾಂಪಿಯನ್‌ಶಿಪ್‌ ಆಗಿಯೂ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ಮೊದಲ ಸ್ಥಾನ ಪಡೆದರೆ, ಪುರುಷ ಚಾಂಪಿಯನ್‌ ಶಿಪ್‌ ಶಿವಮೊಗ್ಗದ ಸಿಆರ್‌ಬಿ ನ್ಯಾಶನಲ್‌ ಕಾನೂನು ಕಾಲೇಜು ದ್ವಿತೀಯ ಹಾಗೂ ನವನಗರದ ಕೆಎಸ್‌ಎಲ್‌ಯು ಕಾನೂನು ಶಾಲೆ ತೃತೀಯ ಸ್ಥಾನ ಪಡೆಯಿತು.

ಧಾರವಾಡ:

ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆಯಲ್ಲೂ ಉತ್ಸಾಹದಿಂದ ನಡೆದ ಕಾನೂನು ವಿಶ್ವವಿದ್ಯಾಲಯದ 8ನೇ ಅಂತರ್‌ ಕಾಲೇಜುಗಳ ಅಥ್ಲೆಟಿಕ್ಸ್‌ನಲ್ಲಿ ಅತೀ ಹೆಚ್ಚು (93) ಅಂಕ ಪಡೆಯುವ ಮೂಲಕ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜ್‌ ಚಾಂಪಿಯನ್‌ ಶಿಪ್‌ ಗಿಟ್ಟಿಸಿಕೊಂಡಿತು.

ಕಾನೂನು ವಿವಿ ವ್ಯಾಪ್ತಿಯ ಮಂಗಳೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಮೈಸೂರು, ಹುಬ್ಬಳ್ಳಿ, ಕಲಬುರ್ಗಿ ವಿಭಾಗಗಳ 116 ಕಾಲೇಜುಗಳಿಂದ 260ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ಆಗಮಿಸಿದ್ದರು. ಈ ಪೈಕಿ ಎರಡೂ ದಿನಗಳಲ್ಲಿ ಬಹುತೇಕ ಆಟಗಳಲ್ಲಿ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ಪುರುಷ ಹಾಗೂ ಮಹಿಳೆಯರು ಮೊದಲ ಸ್ಥಾನ ಪಡೆದರು. ಹೀಗಾಗಿ ಪುರುಷರಿಗೆ 40 ಅಂಕ ಹಾಗೂ ಮಹಿಳೆಯರು 53 ಸೇರಿ ಒಟ್ಟಾರೆ 93 ಅಂಕ ಪಡೆದು ಒಟ್ಟಾರೆ ಚಾಂಪಿಯನ್‌ ಶಿಪ್‌ ಪಡೆದರು. 40 ಅಂಕ ಪಡೆದು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜು ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗದ ಸಿಆರ್‌ಬಿ ನ್ಯಾಶನಲ್‌ ಕಾನೂನು ಕಾಲೇಜು 37 ಅಂಕ ಪಡೆದು ತೃತೀಯ ಸ್ಥಾನ ಪಡೆಯಿತು.

ಅದೇ ರೀತಿ ಪುರುಷ ಮತ್ತು ಮಹಿಳಾ ತಂಡ ಚಾಂಪಿಯನ್‌ಶಿಪ್‌ ಆಗಿಯೂ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ಮೊದಲ ಸ್ಥಾನ ಪಡೆದರೆ, ಪುರುಷ ಚಾಂಪಿಯನ್‌ ಶಿಪ್‌ ಶಿವಮೊಗ್ಗದ ಸಿಆರ್‌ಬಿ ನ್ಯಾಶನಲ್‌ ಕಾನೂನು ಕಾಲೇಜು ದ್ವಿತೀಯ ಹಾಗೂ ನವನಗರದ ಕೆಎಸ್‌ಎಲ್‌ಯು ಕಾನೂನು ಶಾಲೆ ತೃತೀಯ ಸ್ಥಾನ ಪಡೆಯಿತು. ಮಹಿಳಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಕ್ರಿಸ್ತ ಜಯಂತಿ ಕಾನೂನು ಕಾಲೇಜು ದ್ವೀತೀಯ, ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜು ತೃತೀಯ ಸ್ಥಾನ ಪಡೆಯಿತು. ಅದೇ ರೀತಿ ಲಾಂಗ್‌ ಜಂಪ್‌ ಮತ್ತು ತ್ರಿಪಲ್‌ ಜಂಪ್‌ನಲ್ಲಿ ಮೊದಲ ಸ್ಥಾನ ಪಡೆದ ಶಿವಮೊಗ್ಗದ ಸಿಆರ್‌ಬಿ ನ್ಯಾಶನಲ್‌ ಕಾನೂನು ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ ಮುಜ್ಜಾಮಿಲ್‌ ಅತ್ಯುತ್ತಮ ಪುರುಷ ಆಟಗಾರ ಎಂದು ಬಿರುದು ಹಾಗೂ ₹ 5 ಸಾವಿರ ನಗದು ಬಹುಮಾನ ಪಡೆದರು. ಎತ್ತರ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಮೊದಲ ಸ್ಥಾನ ಪಡೆದ ಮಂಗಳೂರು ಎಸ್‌ಡಿಎಂ ಕಾಲೇಜಿನ ಪ್ಲರವಿಶಾ ಮ್ಯಾಂಟೇರಿಯೋ ಅತ್ಯುತ್ತಮ ಆಟಗಾರ್ತಿ ಎಂಬ ಬಿರುದಿನ ಜೊತೆಗೆ ₹ 5 ಸಾವಿರ ನಗದು ಬಹುಮಾನ ಪಡೆದರು.

ಬಹುಮಾನವನ್ನು ಅಥ್ಲೆಟಿಕ್ಸ್‌ ಓಲಂಪಿಯನ್‌ ಪ್ರಮಿಳಾ ಅಯ್ಯಪ್ಪ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಟು ದೊಡ್ಡ ನರಸಿಂಗ್‌ ಗಣೇಶ ಪ್ರದಾನ ಮಾಡಿದರು. ಕುಲಪತಿ ಡಾ. ಸಿ. ಬಸವರಾಜು, ಕುಲಸಚಿವರಾದ ಅನುರಾಧಾ ವಸ್ತ್ರದ, ಡಾ. ರತ್ನಾ ಭರಮಗೌಡರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಲೀದ ಖಾನ್‌ ಇದ್ದರು.

Share this article