ರೇಷ್ಮೆ ಕೃಷಿಯಲ್ಲಿ ದ.ಕ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ: ಸಚಿವ ವೆಂಕಟೇಶ್‌

KannadaprabhaNewsNetwork |  
Published : May 22, 2026, 03:00 AM IST
ವಿಟ್ಲದಲ್ಲಿ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಉದ್ಘಾಟಿಸುತ್ತಿರುವ ರೇಷ್ಮೆ ಖಾತೆ ಸಚಿವ ವೆಂಕಟೇಶ್‌  | Kannada Prabha

ಸಾರಾಂಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯನ್ನು ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯನ್ನು ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.ಅವರು ಬುಧವಾರ ರೇಷ್ಮೆ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಟ್ಲದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು. 30 ವರ್ಷಗಳ ಹಿಂದಿನವರೆಗೂ ಕರಾವಳಿ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಪ್ರಸ್ತುತ ಈ ಭಾಗದಲ್ಲಿ ಅಡಕೆ ಬೆಳೆ ಕಡಿಮೆಯಾಗುತ್ತಿರುವುದರಿಂದ ಪರ್ಯಾಯವಾಗಿ ರೇಷ್ಮೆ ಬೆಳೆಗೆ ಒತ್ತು ನೀಡಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು. ಈ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು. ಉಚಿತ ಸಸಿ ವಿತರಣೆ, ಸಲಕರಣೆ, ಗೊಬ್ಬರ ಹಾಗೂ ಸಬ್ಸಿಡಿ ನೆರವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ರೇಷ್ಮೆ ಇಲಾಖೆಯಿಂದ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಹಿಂದಿನ ರೇಷ್ಮೆ ಕೃಷಿ ಪದ್ಧತಿಗೂ ಈಗಿನ ರೇಷ್ಮೆ ಕೃಷಿ ಪದ್ಧತಿಗೂ ಬಹಳ ವ್ಯತ್ಯಾಸವಿದೆ. ಪ್ರಸ್ತುತ ರೇಷ್ಮೆ ಕೃಷಿ ತಾಂತ್ರಿಕ ನೆರವಿನಿಂದ ಸರಳವಾಗಿ ಮಾಡಬಹುದಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡಲು ಮುಂದೆ ಬರುವವರಿಗೆ ತಾಂತ್ರಿಕ ನೆರವು ಕೂಡ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಕರ್ನಾಟಕದಲ್ಲಿ ರೇಷ್ಮೆಯು ಪ್ರಮುಖ ಬೆಳೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿದೆ. ಅಗತ್ಯ ಇರುವ ಕಡೆಗೆ ರೇಷ್ಮೆ ಖರೀದಿ ಕೇಂದ್ರ ಮತ್ತು ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು. ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ ಖರೀದಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೈತರಿಗೆ ರೇಷ್ಮೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಗಾಣಿಕೆ ವೆಚ್ಚ 1 ಕೆಜಿಗೆ 30 ರು.ನಂತೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳನ್ನು ಮತ್ತು ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.ಹಿಂದೆ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿತ್ತು. ಈಗ ಭಾರತ ಮೊದಲ ಸ್ಥಾನಕ್ಕೇರಿದೆ. ಮೈಸೂರು ಸಿಲ್ಕ್ ಸೀರೆಗೆ ವಿಶ್ವದಲ್ಲಿ ಅತ್ಯುತ್ತಮ ಬೇಡಿಕೆ ಇದ್ದು, ಬೇಡಿಕೆಯಷ್ಟು ಸೀರೆ ಪೂರೈಸಲಾಗದ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ 600 ರು.ನಿಂದ 700 ರು. ವರೆಗೆ ದರವಿದ್ದು, ಬೆಳೆಗಾರರು ಕೆ.ಜಿ ಗೆ 300 ರು.ನಂತೆ ಲಾಭ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ರೇಷ್ಮೆ ಕೃಷಿಯತ್ತ ಗಮನಹರಿಸಬೇಕು ಎಂದು ಸಚಿವರು ತಿಳಿಸಿದರು. ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ ಬಿ. ಆರ್. ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 50 ಎಕರೆಯಷ್ಟು ರೇಷ್ಮೆ ಕೃಷಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರೇಷ್ಮೆ ಶೆಡ್ ನಿರ್ಮಿಸಲು ಗರಿಷ್ಠ 1 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ಇದಲ್ಲದೆ ಅಗತ್ಯ ಸಲಕರಣೆ ಮತ್ತು ಯಂತ್ರಗಳನ್ನು ಸಬ್ಸಿಡಿಯಲ್ಲಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಾ.ಯು.ಪಿ. ಶಿವಾನಂದ, ಜಿಲ್ಲಾ ರೈತರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಶೆಟ್ಟಿ, ಪಶುಸಂಗೋಪನೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರೀತಮ್ ಸಿಕ್ವೇರಾ ಮತ್ತಿತರರು ಇದ್ದರು.ಹಿರಿಯ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸಲಾಯಿತು. ಬೆಳೆಗಾರರಿಗೆ ಸಬ್ಸಿಡಿ ಮತ್ತು ಸಲಕರಣೆಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತ
ಈರಣ್ಣ ಮೆಳ್ಳಿಗೇರಿ ತಂಡಕ್ಕೆ ಪ್ರಿಮಿಯರ್ ಲೀಗ್, ನಗದು ₹೨ ಲಕ್ಷ ಬಹುಮಾನ