ಮಂಗಳೂರು, ಉಡುಪಿ: ನಾಲ್ಕು ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇಮೇಲ್‌!

KannadaprabhaNewsNetwork |  
Published : Jan 28, 2025, 12:49 AM IST
ಉಡುಪಿ ನಗರದ ಶಾರದಾ ರೆಸಿಡೆನ್ಸಿಯಲ್‌ ಶಾಲೆಯಲ್ಲಿ ತಪಾಸಣೆ | Kannada Prabha

ಸಾರಾಂಶ

ಮಂಗಳೂರು ನಗರದ ಮೂರು ಹಾಗೂ ಉಡುಪಿಯ ಒಂದು ಶಾಲೆಗೆ ಸೋಮವಾರ ಹುಸಿ ಬಾಂಬ್‌ ಬೆದರಿಕೆ ಬಂದು ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂರು ಶಾಲೆಗಳಿಗೆ ಸೋಮವಾರ ಹುಸಿ ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿದ್ದು, ಪೊಲೀಸರ ಪರಿಶೀಲನೆ ಬಳಿಕ ಇದು ಹುಸಿ ಬೆದರಿಕೆ ಎಂಬುದು ಖಚಿತವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ

ಮಂಗಳೂರು ನಗರದ ಮೂರು ಹಾಗೂ ಉಡುಪಿಯ ಒಂದು ಶಾಲೆಗೆ ಸೋಮವಾರ ಹುಸಿ ಬಾಂಬ್‌ ಬೆದರಿಕೆ ಬಂದು ಕೆಲಕಾಲ ಗೊಂದಲ ಸೃಷ್ಟಿಯಾಯಿತು.

ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂರು ಶಾಲೆಗಳಿಗೆ ಸೋಮವಾರ ಹುಸಿ ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿದ್ದು, ಪೊಲೀಸರ ಪರಿಶೀಲನೆ ಬಳಿಕ ಇದು ಹುಸಿ ಬೆದರಿಕೆ ಎಂಬುದು ಖಚಿತವಾಗಿದೆ.

ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ ವ್ಯಾಪ್ತಿಯ ಅತ್ತಾವರದ ಮಣಿಪಾಲ್ ಶಾಲೆ, ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಪ್ರೆಸಿಡೆನ್ಸಿ ಸ್ಕೂಲ್‌ ಮತ್ತು ನೀರುಮಾರ್ಗ ಬಳಿಯ ಕೇಂಬ್ರಿಡ್ಜ್ ಶಾಲೆಗಳಿಗೆ ಇಮೇಲ್‌ ಬಂದಿದ್ದು, ಶಾಲಾ ಆವರಣದಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಮಗ್ರಿ) ಇರಿಸಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.

ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸ್ ತಂಡಗಳು, ನಗರದ ಎಎಸ್‌ಸಿ ತಪಾಸಣಾ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಮೂರೂ ಶಾಲೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿವೆ. ಅಷ್ಟೂ ಹೊತ್ತು ಶಾಲಾ ಆವರಣದಲ್ಲಿ ಬಿಗುವಿನ ವಾತಾವರಣವಿತ್ತು.

ಪರಿಶೀಲನೆ ಬಳಿಕ ಯಾವುದೇ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ, ಇದೊಂದು ಹುಸಿ ಬೆದರಿಕೆ ಎಂದು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಸ್ಪಷ್ಟಪಡಿಸಿದ್ದಾರೆ. ಸುರಕ್ಷತಾ ಕ್ರಮವಾಗಿ ಶಾಲೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಬೆದರಿಕೆ ಇಮೇಲ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, ಇಮೇಲ್‌ಗಳ ಮೂಲದ ಬಗ್ಗೆ ಸಮಗ್ರ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ಉಡುಪಿ ವರದಿ: ಉಡುಪಿ ನಗರದ ಶಾರದಾ ರೆಸಿಡೆನ್ಸಿಯಲ್‌ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬೆದರಿಕೆ ಬಂದಿದ್ದು, ಸೋಮವಾರ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಕೆಲಕಾಲ ಆತಂಕಕ್ಕೊಳಗಾಗದರು.

ಬೆಳಗ್ಗೆ ಪ್ರಾಂಶುಪಾಲರು ತಮ್ಮ ಇಮೇಲ್‌ ನೋಡುವಾಗ, ಮುಂಜಾನೆ 4.43ಕ್ಕೆ ಬಂದಿದ್ದ ಶಾಲೆಯಲ್ಲಿ ಬಾಂಬ್‌ ಇಡಲಾಗಿದೆ ಎಂಬ ಅನಾಮಧೇಯ ಇಮೇಲ್‌ ನೋಡಿ ಗಾಬರಿಗೊಂಡು ನಗರಠಾಣೆಗೆ ಮಾಹಿತಿ ನೀಡಿದರು.

ಪೊಲೀಸರು ತಕ್ಷಣ ಶಾಲೆಗೆ ಧಾವಿಸಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಶಾಲೆಯ ಕಟ್ಟಡದಿಂದ ಹೊರಗೆ ಕಳಹಿಸಿದರು. ನಂತರ ಶ್ವಾನದಳ ಮತ್ತು ಬಾಂಬ್‌ ಪತ್ತೆ ತಂಡ ಕರೆಸಲಾಯಿತು.

ಮಾಹಿತಿ ಪಡೆದ ವಿದ್ಯಾರ್ಥಿಗಳ ಹೆತ್ತವರು ಶಾಲೆಗೆ ಧಾವಿಸಿ ಬಂದರು. ಅವರನ್ನು ಶಾಲೆಯ ಹೊರಗೆ ತಡೆದು ನಿಲ್ಲಿಸಲಾಯಿತು. ಶೋಧನೆ ಬಳಿಕ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಕೊನೆಗೆ ಬಾಂಬ್‌ ಇಲ್ಲ, ಇದು ಹುಸಿ ಬೆದರಿಕೆ ಎಂದು ಘೋಷಿಸಿದ ಮೇಲೆ ಶಿಕ್ಷಕರ ಮತ್ತು ಹೆತ್ತವರು ನಿಟ್ಟುಸಿರು ಬಿಟ್ಟರು.

ಈ ಶಾಲೆಯಲ್ಲಿ ಹೊರಜಿಲ್ಲೆ ಮಾತ್ರವಲ್ಲದೇ 20 ಹೊರ ರಾಜ್ಯಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಡಿವೈಎಸ್ಪಿ ಪ್ರಭು ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಕುರುಹು ಇಲ್ಲ-ಪ್ರಾಂಶುಪಾಲ: ವಾರಾಂತ್ಯದಲ್ಲಿ ಶಾಲೆಗೆ ಬಾಂಬ್‌ ಇಜಲಾಗಿದೆ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ. ನಮ್ಮ ಶಾಲೆಯ ಸುತ್ತಲೂ ಸಿಸಿಟಿವಿ ಕಣ್ಗಾವಲು ಹಾಗು ಉತ್ತಮ ಭದ್ರತೆ ವ್ಯವಸ್ಥೆ ಇದೆ. ಅವುಗಳಲ್ಲಿ ಯಾವುದೇ ಕುರುಹುಗಳ ಲಭ್ಯವಾಗಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಬೇಕು ಎಂದು ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ಟಾ ಹೇಳಿದ್ದಾರೆ.

...................................ನಾನಾ ಸಂದೇಹಗಳಿಗೆ ಕಾರಣವಾದ ಹುಸಿ ಬಾಂಬ್‌ ಇಮೇಲ್ !ಉಡುಪಿ: ನಗರದ ಶಾರದಾ ರೆಸಿಡೆನ್ಶಿಯಲ್‌ ಶಾಲೆಗೆ ಬಾಂಬ್‌ ಇಟ್ಟಿರುವುದಾಗಿ ಹುಸಿ ಬೆದರಿಕೆ ಒಡ್ಡಿದ ಇಮೇಲ್‌ ಕೂಡ ನಾನಾ ಸಂದೇಹಗಳಿಗೆ ಕಾರಣವಾಗಿದೆ. ಇಮೇಲ್‌ ನಲ್ಲಿ ಬಾಂಬ್‌ ಇಟ್ಟಿರುವ ಬೆದರಿಕೆಯ ಜೊತೆಗೆ ಬಾಂಬ್‌ ಬಗ್ಗೆ ಒಂದಷ್ಟು ತಾಂತ್ರಿಕ ಉಲ್ಲೇಖಗಳೂ ಇವೆ. ಜೊತೆಗೆ ತಮಿಳುನಾಡಿನ ಡಿಎಂಕೆ ಪಕ್ಷದ ಉಲ್ಲೇಖವೂ ಇದೆ.

ಒಂದೆಡೆ ಇದು ನಕ್ಸಲ್‌ ಎಡಪಂಥಿಯರ ಕೃತ್ಯ ಎಂಬಂತೆ, ಇನ್ನೊಂದೆಡೆ ಅಲಾ ಯು ಅಕ್ಬರ್‌ ಎಂದು ಮತಾಂಧರ ಕೃತ್ಯ ಎಂಬಂತೆಯೂ ಬಿಂಬಿಸಲಾಗಿದೆ.

ಶಾಲಾ ಆವರಣಗಳಲ್ಲಿ ನಕ್ಸಲ್ ನಾಯಕ ಟಿಎನ್‌ಎಲ್‌ಎ (ತಮಿಳುನಾಡು ಲಿಬರೇಶನ್‌ ಆರ್ಮಿ)ಯ ಎಸ್. ಮಾರನ್ ಅವರು ಐಇಡಿ (ಇಂಪ್ರೂವ್‌ಡ್‌ ಎಕ್ಸ್‌ಪ್ಲೋಸಿವ್‌ ಡಿವೈಸ್‌) ಗಳನ್ನು ಇರಿಸಿದ್ದಾರೆ. ಶಾಲೆಯ ಎಲ್ಲಾ ಅಲ್ಪಸಂಖ್ಯಾತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ತಕ್ಷಣ ಸ್ಥಳಾಂತರಿಸಿ ಎಂದು ಇಮೇಲ್‌ ಕಳಹಿಸಿದ ಕಿಡಿಗೇಡಿ ಹೇಳಿದ್ದಾನೆ.

ಈ ಪವಿತ್ರ ದಿನದಂದು, ನಿಮ್ಮ ಶಾಲೆಯು ಟ್ವಿನ್‌ಡ್‌ ಪೈಪ್ ಐಇಡಿ ಸ್ಫೋಟಕ್ಕೆ ಬಲಿಯಾಗಲಿದೆ. ಇದು ಅಫ್ಜಲ್ ಗುರುವನ್ನು ಅನ್ಯಾಯವಾಗಿ ನೇಣು ಹಾಕಿದ್ದಕ್ಕೆ ಮತ್ತು ನಮ್ಮದೇ ಆದ ಅಣ್ಣಾ ವಿಶ್ವವಿದ್ಯಾಲಯದ ಪ್ರೊ. ಚಿತ್ರಕಲಾ ಗೋಪಾಲನ್ ಘಟನೆಯ ನೆನಪಿಗಾಗಿ ಈ ಕೃತ್ಯ ಎಸಗುತಿದ್ದೇವೆ ಎಂದು ಹೇಳಲಾಗಿದೆ.

ನಮ್ಮ ಸರ್ವಶಕ್ತನ ಹೆಸರಿನಲ್ಲಿ ಈ ಕಾರ್ಯಾಚರಣೆಗೆ ಧೈರ್ಯ ಮಾಡುತ್ತೇವೆ. ಈಗಾಗಲೇ ವಾರಾಂತ್ಯದಲ್ಲಿ ಇಎಫ್‌ಪಿಗಳನ್ನು ಇರಿಸಲಾಗಿದೆ. ಅದರ ಫ್ಯೂಸಿಂಗ್ ವ್ಯವಸ್ಥೆಗಳನ್ನು ಸಿಇಜಿಯ ಮೆಕ್ಯಾನಿಕಲ್ ವಿಭಾಗದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದೆಲ್ಲಾ ಹೇಳಲಾಗಿದೆ.

ತಮಿಳುನಾಡಿನ ವ್ಯಕ್ತಿ ಕಳುಹಿಸಿದಂತಿರುವ ಈ ಇಮೇಲ್‌ ಕಳಹಿಸಿದಾತನಿಗೆ ಬಾಂಬ್‌ ಬಗ್ಗೆ ಒಂದಿಷ್ಟು ತಾಂತ್ರಿಕ ಮಾಹಿತಿಗಳಿರುವುದು ಸ್ಪಷ್ಟವಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ