ಶಿವಾನಂದ ಗೊಂಬಿ
ಸ್ಮಾರ್ಟ್‌ಸಿಟಿ ಯೋಜನೆಗಳ ಕಾಮಗಾರಿಗಳ ಹಸ್ತಾಂತರ ಸಲೀಸಾಗಲಿ ಎಂಬ ಉದ್ದೇಶದಿಂದ ಪಾಲಿಕೆ ಆಯುಕ್ತರ ಜಾಗೆಗೆ ಸ್ಮಾರ್ಟ್‌ಸಿಟಿ ಎಂಡಿ ಅವರನ್ನು ತರಲಾಗಿದೆಯೇ? ಇಂಥದೊಂದು ಪ್ರಶ್ನೆ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಬಲು ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.
ಪಾಲಿಕೆ ಆಯುಕ್ತರಾಗಿದ್ದ ಈಶ್ವರ ಉಳ್ಳಾಗಡ್ಡಿ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಆಯುಕ್ತರನ್ನಾಗಿ ವರ್ಗ ಮಾಡಲಾಗಿದೆ. ಆ ಜಾಗೆಗೆ ಸ್ಮಾರ್ಟ್‌ಸಿಟಿ ಎಂಡಿ ಆಗಿರುವ ರುದ್ರೇಶ ಗಾಳಿ ಅವರನ್ನು ತರಲಾಗಿದೆ. ಐಎಎಸ್, ಕೆಎಎಸ್ ಅಧಿಕಾರಿಗಳ ವರ್ಗಾವಣೆ ಎಲ್ಲವೂ ಸಹಜ. ಇದು ಕೂಡ ಹಾಗೆ ಆಗಿರಬಹುದು ಎಂದು ಮೇಲ್ನೋಟಕ್ಕೆ ಅನಿಸಿದರೂ ಒಳಹೊಡೆತ ಮಾತ್ರ ಬೇರೆನೇ ಇದೆ ಎಂಬ ಗುಲ್ಲು ಮಾತ್ರ ಹಬ್ಬಿರುವುದು ಸತ್ಯ.ಏನದು ಗುಸು ಗುಸು?:
ಪ್ರತಿಸಲದ ಸಾಮಾನ್ಯಸಭೆಯಲ್ಲೂ ಸ್ಮಾರ್ಟ್‌ಸಿಟಿ ಯೋಜನೆಗಳ ಬಗ್ಗೆ ಕಾವೇರಿದ ಚರ್ಚೆಯೂ ಆಗುತ್ತದೆ. ಪ್ರತಿಯೊಬ್ಬ ಸದಸ್ಯನೂ ಸ್ಮಾರ್ಟ್‌ಸಿಟಿ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ್ದೇ ಜಾಸ್ತಿ. ಈರೇಶ ಅಂಚಟಗೇರಿ ಮೇಯರ್ ಆಗಿದ್ದ ವೇಳೆಯಂತೂ ಸ್ಮಾರ್ಟ್‌ಸಿಟಿ ಬಗ್ಗೆ ಬಹಿರಂಗವಾಗಿಯೇ ಪತ್ರ ಬರೆದಿದ್ದರು. ಕಾಮಗಾರಿ ಹಸ್ತಾಂತರಿಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಕೆಲವೊಂದಿಷ್ಟು ಕಾಮಗಾರಿಗಳನ್ನು ಹಸ್ತಾಂತರಿಸಿಕೊಂಡಿದ್ದರೂ, ಎಂಟ್ಹತ್ತು ಕಾಮಗಾರಿಗಳನ್ನು ಪಾಲಿಕೆ ಹಸ್ತಾಂತರಿಸಿಕೊಂಡಿಲ್ಲ. ಇವು ಸರಿಯಾಗಿಲ್ಲ, ಹೀಗಾಗಿ ಹಸ್ತಾಂತರಿಸಿಕೊಂಡಿಲ್ಲ. ಈ ಬಗ್ಗೆ ಸ್ಪಷ್ಟನೆ ಕೇಳುತ್ತೇವೆ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಎರಡು ದಿನದ ಹಿಂದೆಯಷ್ಟೇ ತಿಳಿಸಿದ್ದರು.
ಸ್ಮಾರ್ಟ್‌ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳ ಉಸ್ತುವಾರಿಯೂ ರುದ್ರೇಶ ಗಾಳಿ ಅವರದ್ದೇ ಆಗಿದೆ. ಇದೀಗ ಮಾರ್ಚ್‌ನೊಳಗೆ ಹಸ್ತಾಂತರಿಸಿಕೊಳ್ಳಬೇಕು. ತಮ್ಮ ಉಸ್ತುವಾರಿಯಲ್ಲೇ ಆಗಿರುವ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳಲು ಸಲೀಸಾಗಲೆಂದು ಈ ವರ್ಗಾವಣೆ ಮಾಡಲಾಗಿದೆಯೇ? ಇದರಲ್ಲಿ ಏನಾದರೂ ರಾಜಕಾರಣ ಅಡಗಿದೆಯಾ? ಇಷ್ಟು ದಿನ ಯಾವೊಂದು ಕಾಮಗಾರಿಯೂ ಸಮರ್ಪಕವಾಗಿಲ್ಲ. ಯಾವುದೇ ಕಾರಣಕ್ಖೂ ಹಸ್ತಾಂತರಿಸಿಕೊಳ್ಳಬಾರದು ಎಂದು ಒತ್ತಾಯಿಸುತ್ತಿದ್ದ ಪಾಲಿಕೆ ಸದಸ್ಯರು ಈಗೇನು ಮಾಡುತ್ತಾರೆ? ರುದ್ರೇಶ ಗಾಳಿ, ತಾವು ಮಾಡಿರುವ ಕಾಮಗಾರಿಗಳು ಅಸಮರ್ಪಕವಾಗಿವೆ ಎಂದು ಆರೋಪಿಸುವ ಪಾಲಿಕೆ ಸದಸ್ಯರು, ಮೇಯರ್, ಆಡಳಿತ ಮಂಡಳಿಯನ್ನೇ ಅದ್ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬೆಲ್ಲ ಪ್ರಶ್ನೆಗಳು ಇದೀಗ ಎದ್ದಿವೆ.