ಕನ್ನಡಪ್ರಭ ವಾರ್ತೆ ಮಂಗಳೂರು
ಅದ್ಯಪಾಡಿಯಲ್ಲಿ ಏರ್‌ಪೋರ್ಟ್‌ನಿಂದ ಹೊರಬಿಟ್ಟ ನೀರಿನೊಂದಿಗೆ ಭಾರೀ ಮಣ್ಣು ಕೊಚ್ಚಿ ರಸ್ತೆ ಮೇಲೆ ಬಿದ್ದಿದ್ದು, ಮಂಗಳವಾರ ಮಧ್ಯಾಹ್ನದವರೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಕೋಪ ತೋರಿದ ಫೆಂಗಲ್ ಚಂಡಮಾರುತ ಮಂಗಳವಾರ ಮಧ್ಯಾಹ್ನ ಬಳಿಕ ಶಾಂತವಾಗಿದ್ದು, ಜಿಲ್ಲೆಯ ಜನಜೀವನ ಯಥಾಸ್ಥಿತಿಗೆ ಮರಳಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲೆಯ ಅಂಗನವಾಡಿ, ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬುಧವಾರ (ಡಿ.4ರಂದು) ಸಾಧಾರಣ ಮಳೆಯಾಗುವ ಹಳದಿ ಅಲರ್ಟ್ ಘೋಷಿಸಲಾಗಿದೆ.
ಅದ್ಯಪಾಡಿ ರಸ್ತೆ ಸಂಪರ್ಕ ಕಡಿತ:ಭಾರೀ ಮಳೆಯ ಕಾರಣ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ತುಂಬಿದ ಭಾರೀ ನೀರನ್ನು ಏಕಾಏಕಿ ಹೊರಬಿಡಲಾಗಿತ್ತು. ಈ ನೀರಿನೊಂದಿಗೆ ಗುಡ್ಡದ ಭಾರೀ ಮಣ್ಣು ಕೊಚ್ಚಿಕೊಂಡು ಸೋಮವಾರ ತಡರಾತ್ರಿಯಿಂದ ಆದ್ಯಪಾಡಿ ರಸ್ತೆ ಮೇಲೆ ಮಣ್ಣು ತುಂಬಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೀರು- ಮಣ್ಣಿನ ರಭಸಕ್ಕೆ ಹಲವು ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದವು. ಸೋಮವಾರ ಬೆಳಗ್ಗೆ ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮಣ್ಣು ತೆರವುಗೊಳಿಸಿದರು. ಮಧ್ಯಾಹ್ನದ ವೇಳೆಗೆ ಸಂಚಾರ ಯಥಾಸ್ಥಿತಿಗೆ ಮರಳಿತ್ತು. ವಿದ್ಯುತ್ ಸಂಪರ್ಕವನ್ನೂ ಪುನರ್‌ಸ್ಥಾಪನೆ ಮಾಡಲಾಗಿದೆ.
ವರದಿ ನೀಡಲು ಸೂಚನೆ:
ವಿವಿಧೆಡೆ ಹಾನಿ:
ನಗರದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ನವನಗರದಲ್ಲಿ ಕಾಲುವೆ ಬದಿಗೆ ಕಟ್ಟಿದ್ದ ತಡೆಗೋಡೆ ಕುಸಿದು ರಸ್ತೆ ಅಪಾಯಕ್ಕೆ ಸಿಲುಕಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಸವಾಲಾಗಿದ್ದು, ನೂತನ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹೆದ್ದಾರಿ ಬದಿ ಕುಸಿತ:
ನಗರದ ಫಳ್ನೀರ್ ಬಳಿ ಮನೆಯಂಗಳಕ್ಕೆ ನೀರು ನುಗ್ಗಿತ್ತು. ಕೊಡಿಯಾಲ್‌ಗುತ್ತು ಎಂಪೈರ್ ಮಾಲ್ ಹಿಂದುಗಡೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿದ್ದವು. ಬಿಜೈ ನಿವಾಸಿ ಕೆ.ಉಮೇಶ್ ಶೇಟ್ ಎಂಬವರ ಮನೆ ಪಕ್ಕದ ತೋಡಿನ ತಡೆಗೋಡೆ ಕುಸಿದು ಹಾನಿಯಾಗಿದೆ. ಬಿಜೈನ ಗೀನ್ ಎಕರ್ಸ್ ಲೇಔಟ್ ನಿವಾಸಿ ಹಿಲ್ಡಾ ಬಾಯಮ್ಮ ಎಂಬವರ ಮನೆಯೊಳಗೆ ಚರಂಡಿ ನೀರು ಹರಿದು ಹಾನಿ ಸಂಭವಿಸಿದೆ.
ಸೋಮವಾರ ಸಂಜೆಯಿಂದ ಆರಂಭಗೊಂಡ ಮಳೆ ಜಿಲ್ಲೆಯ ಅನೇಕ ಕಡೆಗಳಲ್ಲಿ ರಾತ್ರಿಯಿಡಿ ಬಿಟ್ಟೂ ಬಿಟ್ಟು ಸುರಿದಿತ್ತು. ಮಂಗಳವಾರ ಮುಂಜಾನೆ ಕೆಲಕಾಲ ಧಾರಾಕಾರ ಗಾಳಿ- ಮಳೆ ಸುರಿಯಿತು. ಬಳಿಕ ಇಳಿಮುಖಗೊಂಡಿತ್ತು. ಮಧ್ಯಾಹ್ನ ಬಳಿಕ ಬಿಸಿಲು ಮೂಡಿದ್ದು, ಜತೆಗೆ ಮೋಡ ಕವಿದ ವಾತಾವರಣವೂ ಇತ್ತು. ಮಳೆ ಇಳಿಮುಖವಾದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಡಿ.6ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಪುತ್ತೂರು: ಸಿಡಿಲು ಬಡಿದು ವ್ಯಕ್ತಿ ಸಾವುಪುತ್ತೂರು: ವಿದ್ಯುತ್ ಬಲ್ಬ್ ಹಾಕುತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಮೃತಪಟ್ಟಿರುವ ಘಟನೆ ತಾಲೂಕಿನ ಕೆಯ್ಯೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.ಕೆಯ್ಯೂರು ಪಲ್ಲತ್ತಡ್ಕ ನಿವಾಸಿ ನಾರಾಯಣ (45) ಮೃತರು. ಮನೆ ಮುಂಭಾಗದಲ್ಲಿ ಹಾಕಲಾಗಿದ್ದ ಶೀಟ್‌ನಲ್ಲಿ ಬಲ್ಬ್ ಹೊತ್ತುತ್ತಿಲ್ಲವೆಂದು ಅದನ್ನು ತೆಗೆದು ಹಾಕುತ್ತಿದ್ದಾಗ ಸಿಡಿಲು ಆಘಾತ ಉಂಟಾಗಿ ನೆಲಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.