ಮಂಗಳಸೂತ್ರ ಹೆಣ್ಮಕ್ಕಳ ಸ್ವಾಭಿಮಾನದ ಸಂಕೇತ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಮರುಹಂಚಿಕೆ ಮಾಡುವ ಜೊತೆಗೆ ಮಂಗಳಸೂತ್ರ, ಚಿನ್ನ ಕಸಿಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರೋದು ತಳಬುಡವೇ ಇಲ್ಲದ ಹೇಳಿಕೆ.

KannadaprabhaNewsNetwork | Published : Apr 26, 2024 7:31 PM IST

ಕನ್ನಡಪ್ರಭ ವಾರ್ತೆ ಕಲಬುರಗಿ

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ನಿಮ್ಮ ಮಂಗಳ ಸೂತ್ರವನ್ನೂ ಬಿಡೋದಿಲ್ಲ ಎಂದು ಹೇಳಿದ್ದರು. ಇದು ಪ್ರಧಾನಿ ಹುದ್ದೆಯಲ್ಲಿದ್ದವರು ನೀಡುವ ಹೇಳಿಕೆಯೆ? ಅವರ ಘನತೆಗೆ ತಕ್ಕುದೆ ಎಂದು ಪ್ರಶ್ನಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಪ್ರಧಾನಿ ಹೇಳಿಕೆ ಬಾಲಿಶವಾಗಿದೆ, ಸಾಮಾನ್ಯ ಸಂಘ ಪರಿವಾರದ ಕಾರ್ಯಕರ್ತನಂತೆ ಮಾತನಾಡುತ್ತಿದ್ದಾರೆ. ಇದು ಅವರ ಮನದಲ್ಲಿನ ಸೋಲಿನ ಹತಾಶೆಯನ್ನು ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.

ಜಿಲ್ಲಾ ಕಾಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಮರುಹಂಚಿಕೆ ಮಾಡುವ ಜೊತೆಗೆ ಮಂಗಳಸೂತ್ರ, ಚಿನ್ನ ಕಸಿಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರೋದು ತಳಬುಡವೇ ಇಲ್ಲದ ಹೇಳಿಕೆ. 10 ವರ್ಷದ ಸುದೀರ್ಘ ಆಡಳಿತ ಮಾಡಿಯೂ ಒಂದೇ ಒಂದು ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಮೋದಿಯವರು, ಅತ್ಯಂತ ನಿರ್ಲಜ್ಜರಾಗಿ ಹಾಗೂ ಸಂವೇದನಾಶೂನ್ಯರಾಗಿ ಮಾತಾಡುತ್ತಿದ್ದಾರೆ. ಪ್ರಧಾನಿ ಹುದ್ದೆಯಲ್ಲಿದ್ದವರಿಗೆ ಇದು ಶೋಭೆಯಲ್ಲ ಎಂದು ಕುಟುಕಿದರು.

ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ. ಯಾವ ವಿಚಾರವನ್ನು ಸಹಿಸಿದರೂ ಮಾಂಗಲ್ಯ ವಿಚಾರವನ್ನು ಯಾವ ಮಹಿಳೆಯೂ ಸಹಿಸಲಾರಳು, ಇದು ಪ್ರಧಾನಿಯವರಿಗೆ ಗೊತ್ತಿರಲಿ ಎಂದರು.

ನಮ್ಮರೈತಾಪಿ ಮಹಿಳೆಯರು ಬರಗಾಲ ಬಿದ್ದಾಗ ಹೊಲ ಬೆಳೆಯದೆ ಸಮಸ್ಯೆ ಶುರುವಾದಾಗ ತಮ್ಮ ಕೊರಳ ತಾಳಿ, ಆಭರಣ ಅಡವಿಟ್ಟು ಮನೆ ನಡೆಸುತ್ತಾರೆ. ಅಂತಹ ಸ್ವಾಭಿಮಾನಿತನ ಅವರಲ್ಲಿ ಇಂದಿಗೂ ಕಾಣುತ್ತೇವೆ. ಪ್ರಧಾನಿ ಹೇಳಿಕೆಗೆ ಮಹಿಳೆಯರೇ ಮಾರುತ್ತರ ನೀಡುತ್ತಾರೆಂದರು.

ಮಂಗಳಸೂತ್ರ ವಿಚಾರದಲ್ಲಿ ರಾಜಕೀಯ ಬೇಡ. ತಾಳಿ ನಮ್ಮ ದೇಶದ ಜನರ ಸಂಸ್ಕೃತಿ, ಸಂಪ್ರದಾಯ, ಭಾವನೆಗಳಲ್ಲಿ ಅಡಕವಾಗಿರುವ ಪವಿತ್ರ ವಸ್ತುವಾಗಿದೆ. ಇಂತಹ ತಾಳಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಹತಾಶವನ್ನು ಸೂಚಿಸುತ್ತದೆ. ಪ್ರಧಾನಿ ಮೋದಿಯವರು ದೇಶದ ಮಹಿಳೆಯರ ಮಾಂಗಲ್ಯವನ್ನು ಕಿತ್ತು ವಿಧವೆಯರನ್ನಾಗಿ ನೋಡಲು ಬಯಸುತ್ತಿದ್ದಾರೆಯೇ ಎಂದು ಅಜಯ್‌ ಸಿಂಗ್‌ ಖಡಕ್ಕಾಗಿ ಪ್ರಶ್ನಿಸಿದರು.

1962ರ ಯುದ್ದದ ವೇಳೆ ಇಂದಿರಾ ಗಾಂಧಿ ಅವರು ತಮ್ಮ ಆಭರಣಗಳನ್ನೇ ದಾನ ಮಾಡಿದ್ದರು. 1962ರಲ್ಲಿ ಭಾರತ - ಚೀನಾ ಯುದ್ಧ ನಡೆದ ವೇಳೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಆಭರಣ ದಾನ ಮಾಡಿದ್ದಾರೆ. ಸೋನಿಯಾ ಗಾಂಧಿ ತಮ್ಮ ಮಾಂಗಲ್ಯ ದೇಶಕ್ಕಾಗಿ ಬಲಿ ಕೊಟ್ಟಿದ್ದಾರೆ.

ಇಂತಹ ಮಾಂಗಲ್ಯ ಕಸಿಯುವ ಬಿಜೆಪಿಯಿಂದ ದೇಶದ ಮಹಿಳೆಯರ ಜೀವನಕ್ಕೆ ಭದ್ರತೆ ದೊರೆಯುವುದು ಅಸಾಧ್ಯ. ಇವರಿಗೆ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸುತ್ತಾರೆಂದು ಡಾ. ಅಜಯ್‌ ಸಿಂಗ್‌ ಅಭಿಪ್ರಾಯಪಟ್ಟರು.

Share this article