ಮಂಗಳೂರು ರೈಲ್ವೆ ವ್ಯಾಪ್ತಿ ನೈರುತ್ಯ ರೈಲ್ವೆಗೆ ಹಸ್ತಾಂತರ

KannadaprabhaNewsNetwork |  
Published : Aug 22, 2026, 02:15 AM IST
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ | Kannada Prabha

ಸಾರಾಂಶ

ಕರಾವಳಿ ಭಾಗದ ರೈಲು ಪ್ರಯಾಣಿಕರ ಎರಡು ದಶಕಗಳ ಕಾಲದ ಕನಸು ಮತ್ತು ಬೇಡಿಕೆ ಕೊನೆಗೂ ಈಡೇರಿದೆ. ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ರೈಲ್ವೆ ಮಂಡಳಿ ಐತಿಹಾಸಿಕ ಆದೇಶ ಹೊರಡಿಸಿದೆ.

ಮಂಗಳೂರು: ಕರಾವಳಿ ಭಾಗದ ರೈಲು ಪ್ರಯಾಣಿಕರ ಎರಡು ದಶಕಗಳ ಕಾಲದ ಕನಸು ಮತ್ತು ಬೇಡಿಕೆ ಕೊನೆಗೂ ಈಡೇರಿದೆ. ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ರೈಲ್ವೆ ಮಂಡಳಿ ಐತಿಹಾಸಿಕ ಆದೇಶ ಹೊರಡಿಸಿದೆ.

ಈ ಕುರಿತಂತೆ ರೈಲ್ವೆ ಮಂಡಳಿಯ ನೈರುತ್ಯ, ದಕ್ಷಿಣ ಹಾಗೂ ಕೊಂಕಣ ರೈಲ್ವೆ ವಿಭಾಗಗಳ ಉನ್ನತಾಧಿಕಾರಿಗಳಿಗೆ ಶುಕ್ರವಾರ ಅಧಿಕೃತ ಸುತ್ತೋಲೆ ಕಳುಹಿಸಲಾಗಿದೆ. ಇದರೊಂದಿಗೆ ಕಳೆದ 23 ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತಾರ್ಕಿಕ ಅಂತ್ಯಕ್ಕೆ ಬಂದಂತಾಗಿದೆ.

ಕೊಂಕಣ ವ್ಯಾಪ್ತಿಯಲ್ಲೇ ತೊಕೂರು ರೈಲು ನಿಲ್ದಾಣ: ರೈಲ್ವೆ ಮಂಡಳಿಯ ಈ ಹೊಸ ನಿರ್ಧಾರದ ಪ್ರಕಾರ, ಉಳ್ಳಾಲ ವರೆಗಿನ (ಉಳ್ಳಾಲ ಸೇರಿದಂತೆ) ಮಂಗಳೂರು ರೈಲ್ವೆ ವ್ಯಾಪ್ತಿಯು ಮೈಸೂರು ವಿಭಾಗದ ಸುಪರ್ದಿಗೆ ಬರಲಿದೆ. ಇದರೊಂದಿಗೆ ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆಯ ಇಂಟರ್‌ಚೇಂಜ್ (ಬದಲಾವಣೆ) ಪಾಯಿಂಟ್ ಇದುವರೆಗೆ ಪಡೀಲ್‌ನಲ್ಲಿದ್ದುದು, ಇನ್ನು ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ಇನ್ನು ತೊಕೂರು ರೈಲ್ವೆ ನಿಲ್ದಾಣ ಪ್ರಸ್ತುತ ಇರುವಂತೆ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ಹಾಗೂ ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.

ಸಿಬ್ಬಂದಿಗೆ ಆಯ್ಕೆ ಅವಕಾಶ: ವ್ಯಾಪ್ತಿ ಬದಲಾವಣೆಯ ಹಿನ್ನೆಲೆಯಲ್ಲಿ ಸಿಬ್ಬಂದಿ ವರ್ಗಾವಣೆಗೂ ನಿಯಮ ರೂಪಿಸಲಾಗಿದೆ. ಗೆಜೆಟೆಡ್ ಅಧಿಕಾರಿಗಳ ವಲಯ ಬದಲಾವಣೆಗೆ ಸಂಬಂಧಿಸಿದಂತೆ ಹುದ್ದೆಗಳೊಂದಿಗೆ ವರ್ಗಾವಣೆ ಆದೇಶಗಳನ್ನು ಮುಂದಿನ ಹಂತದಲ್ಲಿ ಹೊರಡಿಸಲಾಗುವುದು. ಗ್ರೂಪ್-ಬಿ ಅಧಿಕಾರಿಗಳ ವಿಚಾರದಲ್ಲಿ ಚಾಲ್ತಿಯಲ್ಲಿರುವ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುತ್ತದೆ.ಗೆಜೆಟೆಡ್ ಅಲ್ಲದ ಸಿಬ್ಬಂದಿ ಮತ್ತು ಹುದ್ದೆಗಳನ್ನು ‘ಯಥಾಸ್ಥಿತಿ’ ಆಧಾರದ ಮೇಲೆ ವರ್ಗಾಯಿಸಲಾಗುವುದು. ಆದರೆ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯುವ ಅಥವಾ ನೈರುತ್ಯ ರೈಲ್ವೆಗೆ ವರ್ಗಾವಣೆಯಾಗುವ ಆಯ್ಕೆ ನೀಡಲಾಗಿದೆ. ನೈರುತ್ಯ ರೈಲ್ವೆಯನ್ನು ಆಯ್ಕೆ ಮಾಡುವ ಸಿಬ್ಬಂದಿಯನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ವರ್ಗಾಯಿಸಲಾಗುವುದು. ಅವರ ಹಿರಿತನವನ್ನು ಪ್ರಸ್ತುತ ದರ್ಜೆಯಲ್ಲಿ ಸಲ್ಲಿಸಿರುವ ಸೇವಾವಧಿಯ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.

ಅಕ್ಟೋಬರ್ 1ರ ಜಾರಿಗೆ ಮುನ್ನ ಹುದ್ದೆಗಳ ವರ್ಗಾವಣೆ, ಸಿಬ್ಬಂದಿಯಿಂದ ಆಯ್ಕೆ ಪಡೆಯುವುದು ಹಾಗೂ ನಿಯಂತ್ರಣ ಫಲಕಗಳ ವರ್ಗಾವಣೆ ಸೇರಿದಂತೆ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ರೈಲ್ವೆ ಮಂಡಳಿ ಸುತ್ತೋಲೆಯಲ್ಲಿ ಸೂಚಿಸಿದೆ.ಮಂಗಳೂರು ರೈಲ್ವೆ ಪ್ರದೇಶವನ್ನು ಫಾಲ್ಘಾಟ್‌ ರೈಲ್ವೆ ವಿಭಾಗದಿಂದ ಪ್ರತ್ಯೇಕಿಸುವ ಬಗ್ಗೆ ಹಿಂದಿನ ಸಂಸದ ನಳಿನ್‌ ಕುಮಾರ್ ಕಟೀಲ್‌ ಹಾಗೂ ಈಗಿನ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಇದಕ್ಕೆ ಪೂರಕವಾಗಿ ಕರಾವಳಿಯ ರೈಲ್ವೆ ಸಂಘಟನೆಗಳು ಹೋರಾಟ ನಡೆಸಿದ್ದವು. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸಂತಸ: ಪ್ರಸ್ತುತ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗ ಮತ್ತು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ ನಡುವೆ ಹಂಚಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲ ಇದೀಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳುವುದರ ಮೂಲಕ ಕರಾವಳಿ ಜನರ ಬಹು ಬೇಡಿಕೆಯ ಹಾಗೂ ದೀರ್ಘಕಾಲದ ಕನಸು ನನಸಾಗುತ್ತಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸಂತಸ ವ್ಯಕ್ತಪಡಿಸಿದ್ದಾರೆ.

ಜೂನ್ 2024ರಲ್ಲಿ ನಾನು ಸಂಸದನಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ವಿಚಾರವನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗಿತ್ತು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಗಮನಕ್ಕೆ ತಂದು, ಲಭ್ಯವಿದ್ದ ಎಲ್ಲ ಸಂಸದೀಯ ಮತ್ತು ಸಾಂಸ್ಥಿಕ ವೇದಿಕೆಗಳಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗಿತ್ತು. ಜೊತೆಗೆ ಅಂದಿನಿಂದಲೂ ಈ ವಿಷಯದ ಕುರಿತಾಗಿ ಬೆಂಬಿಡದೆ ಶ್ರಮಿಸಿದ್ದೇವೆ . ಇದೀಗ ಈ ಪ್ರಮುಖ ಬೇಡಿಕೆ ಈಡೇರುತ್ತಿರುವುದು ನನಗೆ ಅತ್ಯಂತ ತೃಪ್ತಿ ತಂದಿದೆ.ರೈಲ್ವೆ ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿ ತ್ವರಿತವಾಗಿ ಮತ್ತು ಸಕಾರಾತ್ಮಕ ಕ್ರಮ ಕೈಗೊಂಡ ನಿಲುವಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ. ನಮ್ಮ ರೈಲ್ವೆ ಸಂಬಂಧಿತ ಸಮಸ್ಯೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಗೆಹರಿಸಲು ಹಾಗೂ ಮಂಗಳೂರಿನ ರೈಲ್ವೆ ಸೇವೆಯನ್ನು ವಿಕಾಸದ ಹಾದಿಯಲ್ಲಿ ವೇಗವಾಗಿ ಮುನ್ನಡೆಸಲು ಇದು ನೆರವಾಗಲಿದೆ. ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸಚಿವ ಸೋಮಣ್ಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಜನತೆಯ ಹಲವು ದಶಕಗಳ ಬೇಡಿಕೆಯಾದ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈರುತ್ಯ ರೈಲ್ವೆಗೆ ಹಸ್ತಾಂತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಡೇರಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೂ ಆದಾಯ ಬರಲಿದೆ. ನಾನು ರೈಲ್ವೆ ರಾಜ್ಯ ಸಚಿವನಾದ ಎರಡೇ ವರ್ಷದಲ್ಲಿ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಮರು ಸೇರ್ಪಡೆಗೊ‍ಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೆ. ಅನೇಕ ಕಠಿಣ ಸವಾಲುಗಳ ನಡುವೆಯೂ ಅಲ್ಲಿನ ಜನತೆಯ ಬೇಡಿಕೆಯನ್ನು ಕೊನೆಗೂ ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಯಶಸ್ವಿಯಾಗಿದ್ದಾರೆ.-ವಿ. ಸೋಮಣ್ಣ, ರೈಲ್ವೆ ರಾಜ್ಯ ಸಚಿವರು

ಬಹು ದಶಕಗಳ ಕರಾವಳಿಗರ ಬೇಡಿಕೆಯಾದ ಮಂಗಳೂರು ರೈಲ್ವೆ ಪ್ರದೇಶವನ್ನು ನೈರುತ್ಯ ರೈಲ್ವೆ ವಿಭಾಗಕ್ಕೆ ಸೇರ್ಪಡೆಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಮತ್ತು ವಿ. ಸೋಮಣ್ಣರಿಗೆ ಮತ್ತು ಸಂಸದ ಕ್ಯಾ.ಬ್ರಿಜೇಶ್‌ ಚೌಟರನ್ನು ಅಭಿನಂದಿಸುತ್ತೇನೆ. ಈ ನಿರ್ಧಾರದಿಂದಾಗಿ ಕರಾವಳಿಯಲ್ಲಿ ರೈಲು ಹಳಿಗಳ ವಿಸ್ತರಣೆ, ಹೆಚ್ಚು ರೈಲುಗಳ ಸಂಚಾರಕ್ಕೆ ಇನ್ನಷ್ಟು ಅನುಕೂಲವಾಗಲಿದೆ. -ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಂಸದರು, ದ.ಕ. ಕರಾವಳಿಯ ರೈಲ್ವೆ ವಿಚಾರಗಳಿಗೆ ಇಲ್ಲಿವರೆಗೆ ಕೇರಳದ ಪಾಲಕ್ಕಾಡ್‌ ವಿಭಾಗ ಮಲತಾಯಿ ಧೋರಣೆ ಮಾಡುತ್ತಿತ್ತು. ಕನ್ನಡಿಗರು ಅವರಲ್ಲಿ ರೈಲ್ವೆ ಅಭಿವೃದ್ಧಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಇತ್ತು. ಈಗ ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಿದ ಕಾರಣ ಇನ್ನು ಸ್ಥಗಿತಗೊಂಡ ರೈಲುಗಳ ಹಾಗೂ ಹೊಸ ರೈಲುಗಳ ಆರಂಭಕ್ಕೆ ಸುಲಭವಾಗಲಿದೆ. ಆಡಳಿತಕ್ಕೆ ವೇಗವೂ ಸಿಗಲಿದೆ. ದೇಶದ ಬೇರೆ ಬೇರೆ ರಾಜ್ಯಗಳಿಗೂ ಮಂಗಳೂರಿನಿಂದ ರೈಲು ಸಂಚಾರ ಏರ್ಪಡಲು ಅನುಕೂಲವಾಗಲಿದೆ. -ಹನುಮಂತ ಕಾಮತ್‌, ಸಂಚಾಲಕರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಸೇವಾ ಕೇಂದ್ರದಲ್ಲಿ ಘರ್ಷಣೆ: ಇತ್ತಂಡ ದೂರು
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೇಕು: ಹರಿಶಂಕರ್