ಮಂಗಳೂರು: ಮಂಗಳೂರಿನಲ್ಲಿ ಅತಿದೊಡ್ಡ ಟೆಕ್ ಪಾರ್ಕ್‌ನ ಪ್ರಸ್ತಾವನೆಯು ಅನುಮೋದನೆಗಾಗಿ ರಾಜ್ಯ ಸಚಿವ ಸಂಪುಟದ ಮುಂದೆ ಬರಲಿದೆ. ಇನ್ನೊಂದು ವಾರದೊಳಗೆ ಇದಕ್ಕೆ ಅನುಮೋದನೆ ನೀಡುವ ಕೆಲಸ ಆಗಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಬುಧವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ 5ನೇ ಆವೃತ್ತಿಯ ಟೆಕ್ನೋವಾಂಝಾ-2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಿಯೋನಿಕ್ಸ್ ಅಧೀನದಲ್ಲಿ ಈಗಾಗಲೇ ಗುರುತಿಸಲಾಗಿರುವ 3.25 ಎಕರೆ ಜಾಗದಲ್ಲಿ ಟೆಕ್ ಪಾರ್ಕ್ ಮಾಡಲು ಯೋಜಿಸಲಾಗಿದೆ. ಇದರಲ್ಲಿ 3,500ರಷ್ಟು ಉದ್ಯೋಗ ಕಲ್ಪಿಸಲು ಸಾಧ್ಯವಾಗಲಿದೆ. ಈ ಕ್ಯಾಬಿನೆಟ್ ಅಥವಾ ಮುಂದಿನ ಕ್ಯಾಬಿನೆಟ್ ಒಳಗೆ ಟೆಕ್ ಪಾರ್ಕ್‌ಗೆ ಅನುಮೋದನೆ ನೀಡಲಾಗುವುದು ಎಂದರು.ಆರ್ಥಿಕ ನೀತಿ: ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿಯು ಮಹತ್ವಾಕಾಂಕ್ಷೆಯಿಂದ ಕೂಡಿದ್ದು, 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಈ ಮೂಲಕ 3.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಮುಂದಿನ ತಿಂಗಳೊಳಗೆ ಸರ್ಕಾರವು ಈ ಕುರಿತ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.ಮಂಗಳೂರು ಕ್ಲಸ್ಟರ್ ಅಭಿವೃದ್ಧಿ: ಮಣಿಪಾಲ, ಉಡುಪಿ ಮತ್ತು ಮಂಗಳೂರು ಪ್ರದೇಶಗಳನ್ನೊಳಗೊಂಡ ಕ್ಲಸ್ಟರ್‌ನ ಆರ್ಥಿಕ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಈ ಪ್ರದೇಶದಲ್ಲಿ 310,000ಕ್ಕೂ ಅಧಿಕ ಪ್ರತಿಭಾನ್ವಿತ ಮಾನವ ಸಂಪನ್ಮೂಲವಿದೆ. ಪ್ರಸ್ತುತ ಜಿಡಿಪಿಯಲ್ಲಿ ಶೇ.40ರ ಪಾಲಿನೊಂದಿಗೆ ಬೆಂಗಳೂರು ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದ್ದರೆ, ಶೇ.5 ಜಿಡಿಪಿ ಪಾಲಿನೊಂದಿಗೆ ಮಂಗಳೂರು 2ನೇ ಸ್ಥಾನದಲ್ಲಿದೆ. ಬೆಂಗಳೂರು ಹೊರತಾದ ನಗರಗಳಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಪೂರಕ ಯೋಜನೆ ರೂಪಿಸಲಾಗಿದೆ. ಮಂಗಳೂರನ್ನು ಮುಂದಿನ ಬೆಂಗಳೂರನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಕಂಪೆನಿಗಳನ್ನು ಬೆಳೆಸಿ ಇಲ್ಲಿನ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಬೇಕಾದ ಪೂರಕ ವ್ಯವಸ್ಥೆಗಳಿವೆ. ಇಲ್ಲಿ ಹೂಡಿಕೆ ಮಾಡಲು ಉದ್ಯಮ ಸಂಸ್ಥೆಗಳು ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಹೆಚ್ಚಿನ ಡೇಟಾ ವಿಶ್ಲೇಷಣೆ ಮಾಡಬೇಕಾಗಿರುವುದರಿಂದ ಎಐ ಉದ್ಯೋಗ ನಷ್ಟಕ್ಕೆ ಕಾರಣವಾಗುವುದಿಲ್ಲ. ಮಂಗಳೂರನ್ನು ಎಐ ಕಾರಿಡಾರ್ ಮತ್ತು ಫಿನ್‌ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾಡುವ ಸಾಧ್ಯತೆಯ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಮೂರು ಕಂಪೆನಿಗಳು ಮಂಗಳೂರಿನಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿವೆ ಎಂದರು.ಶಾಸಕರಾದ ವೇದವ್ಯಾಸ ಕಾಮತ್, ಡಾ. ಮಂಜುನಾಥ ಭಂಡಾರಿ, ಬೆಂಗಳೂರಿನ ಎಸ್‌ಟಿಪಿಐ ಸಂಸ್ಥೆಯ ಸಂಜಯ್ ತ್ಯಾಗಿ, ಹಿರಿಯ ಅಧಿಕಾರಿ ಎಲ್.ಕೆ. ಅತೀಕ್, ಇಜಿ ಎ/ಎಸ್‌ನ ಗ್ಲೋಬಲ್ ಸಿಇಒ ಮಿಕ್ಕೆಲ್, ಬೆಂಗಳೂರಿನಲ್ಲಿರುವ ಕೌನ್ಸಿಲ್ ಜನರಲ್ ಆಫ್ ಡೆನ್ಮಾರ್ಕ್ ಪೀಟರ್ ವಿಂಥರ್ ಮತ್ತಿತರರು ಇದ್ದರು.