ಮಂಗಳೂರಿಗೆ ದೊರೆಯಲಿದೆ ಬಿಳಿಯೂರು ಡ್ಯಾಂ ನೀರು

KannadaprabhaNewsNetwork |  
Published : May 05, 2026, 03:00 AM IST
ನೇತ್ರಾವತಿ – ಕುಮಾರಧಾರಾ ನದಿಯ ಸಂಗಮ ತಾಣದ ದೃಶ್ಯ .  | Kannada Prabha

ಸಾರಾಂಶ

ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಸಂಗಮಿಸುವ ಉಪ್ಪಿನಂಗಡಿಯಲ್ಲಿ ಬಿಳಿಯೂರು ಅಣೆಕಟ್ಟಿನಲ್ಲಿ ೦.೨ ಟಿ ಎಂಸಿ ನೀರು ಸಂಗ್ರಹಗೊಂಡಿದ್ದು, ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೆ ಈ ನೀರು ಆಧಾರವಾಗಲಿದೆ.

ಉಪ್ಪಿನಂಗಡಿ: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಸಂಗಮಿಸುವ ಉಪ್ಪಿನಂಗಡಿಯಲ್ಲಿ ಬಿಳಿಯೂರು ಅಣೆಕಟ್ಟಿನಲ್ಲಿ ೦.೨ ಟಿ ಎಂಸಿ ನೀರು ಸಂಗ್ರಹಗೊಂಡಿದ್ದು, ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೆ ಈ ನೀರು ಆಧಾರವಾಗಲಿದೆ.

ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಬಾರದೆಂದು ಸಮತೋಲನ ಜಲಾಶಯವಾಗಿ ಬಿಳಿಯೂರು ಎಂಬಲ್ಲಿ ಅಣೆಕಟ್ಟನ್ನು ರಚಿಸಲಾಗಿದೆ. ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ಈ ಅಣೆಕಟ್ಟಿಗೆ ಗೇಟು ಅಳವಡಿಸುತ್ತಿರುವುದರಿಂದ ಸರಿ ಸುಮಾರು ೬ ತಿಂಗಳಾವಧಿ ಹರಿಯುವ ನೀರನ್ನು ತಡೆ ಹಿಡಿದು ನಿಲ್ಲಿಸಲಾಗುತ್ತದೆ. ಅಣೆಕಟ್ಟಿನಲ್ಲಿ ನಾಲ್ಕು ಮೀಟರ್ ಎತ್ತರದ ಗೇಟು ಅಳವಡಿಕೆಯಾಗಿರುವುದರಿಂದ ೬ ಕಿ ಮೀ ಉದ್ದಕ್ಕೂ ಹಿನ್ನೀರು ಸಂಗ್ರಹಗೊಳ್ಳುತ್ತಿದೆ. ಪರಿಣಾಮ ಈ ಭಾಗದುದ್ದಕ್ಕೂ ಅಂತರ್ಜಲ ಸಂಗ್ರಹಣೆಗೊಂಡಿದೆ.

ಕೃಷಿಕರಿಗೆ ಸಂತಸ, ಆಸ್ತಿಕರಿಗೆ ನೋವು ನಿರಾಸೆ: ಬಿಳಿಯೂರು ಅಣೆಕಟ್ಟಿನಲ್ಲಿ ಡಿಸೆಂಬರ್ ತಿಂಗಳಿಂದಲೇ ಗೇಟು ಅಳವಡಿಸಿ ನೀರು ಸಂಗ್ರಹಿಸುತ್ತಿರುವುದರಿಂದ ನದಿ ಪಾತ್ರದ ಕೃಷಿಕರಿಗೆ ಸುಲಲಿತ ನೀರಿನ ಸೌಲಭ್ಯ ದೊರೆಂತಂತಾಗಿ ಸಂತಸ ಮೂಡಿದೆ. ಆದರೆ ನೇತ್ರಾವತಿ ನದಿ ಗರ್ಭದಲ್ಲಿರುವ ಶಿವನ ಉದ್ಭವ ಲಿಂಗಕ್ಕೆ ಸನಾತನ ಕಾಲದಿಂದ ನಡೆದುಕೊಂಡು ಬರಲಾಗುತ್ತಿದ್ದ ಶಿವರಾತ್ರಿ ವಿಶೇಷ ಪೂಜೆಯು ನಡೆಯದಂತಾಗಿ ಭಕ್ತರಿಗೆ ನೋವು ಮತ್ತು ನಿರಾಸೆ ಆಗಿದೆ. ಗೇಟಿನ ಗಾತ್ರವನ್ನು ತಗ್ಗಿಸಿ ಮಾರ್ಚ್ ತಿಂಗಳ ನಂತರ ಗೇಟಿನ ಗಾತ್ರವನ್ನು ಹೆಚ್ಚಿಸಲು ತನ್ಮೂಲಕ ಪರಂಪರಾಗತವಾಗಿ ನಡೆಯುತ್ತಿದ್ದ ಪೂಜಾ ವಿಧಿವಿಧಾನವನ್ನು ನಡೆಸುವಂತಾಗಲು ಅವಕಾಶ ಕಲ್ಪಿಸಬೇಕೆಂಬ ಭಕ್ತರ ಮನವಿಗೆ ಮೂರು ವರ್ಷಗಳಲ್ಲಿ ಮಾನ್ಯತೆ ದೊರಕಿಲ್ಲ.

ಅತೀ ಹೆಚ್ಚು ಕಲ್ಮಶ ನದಿ ಸೇರ್ಪಡೆ: ಬೆಳೆಯುತ್ತಿರುವ ಪಟ್ಟಣವಾಗಿರುವ ಉಪ್ಪಿನಂಗಡಿಯಲ್ಲಿ ದ್ರವ ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ನದಿ ಸೇರುತ್ತಿದ್ದು, ಇನ್ನು ಕೆಲವು ವಸತಿ ಸಂಕೀರ್ಣಗಳಿಂದ ಶೌಚಾಲಯದ ತ್ಯಾಜ್ಯಗಳೂ ಸೇರುತ್ತಿದೆ ಎಂಬ ಆರೋಪವಿದೆ. ಇದು ಕುಡಿಯುವ ನೀರಿಗಾಗಿ ಬಳಕೆಯಾಗುವ ಈ ನದಿ ನೀರಿನ ಬಗ್ಗೆ ಕಳವಳಕಾರಿ ವಿದ್ಯಾಮಾನವಾಗಿದೆ. ಆದಾಗ್ಯೂ ನದಿಯಲ್ಲಿ ಹೆಚ್ಚುತ್ತಿರುವ ಮೀನಿನ ಸಂತತಿಯಿಂದಾಗಿ ಒಂದಷ್ಟು ನೀರಿನ ಶುಧಿ ಪ್ರಾಕೃತಿಕವಾಗಿ ಆಗುತ್ತಿದೆ ಎನ್ನುವುದು ಸಮಾಧಾನಕರ ಸಂಗತಿ.

ಸುಡುವ ಬಿಸಿಲ ಬೇಗೆಯ ನಡುವೆ ಭರಪೂರ ಜಲರಾಶಿ ತುಂಬಿಕೊಂಡಿರುವ ನೇತ್ರಾವತಿಯ ಒಡಲು ಕಂಡಾಗ ಮನಸ್ಸು ತಂಪಾಗುತ್ತಿದೆ. ಈ ಬಾರಿಯ ಜೂನ್ ತಿಂಗಳಾರಂಭದವರೆಗೆ ಈ ಜಲರಾಶಿ ಜಿಲ್ಲೆಯ ಜನತೆಗೆ ಜಲಕ್ಷಾಮ ತಡೆಯುವ ಆಶಾಕಿರಣವಾಗಿಯೂ ಕಾಣಿಸುತ್ತಿದೆ.

ನೇತ್ರಾವತಿ ನದಿಯಲ್ಲಿ ಬಿಳಿಯೂರು ಅಣೆಕಟ್ಟಿನ ಕಾರಣಕ್ಕೆ ಹಿನ್ನೀರು ಸಂಗ್ರಹವಾಗಿ ಕೃಷಿಕರಿಗೆ ಅನುಕೂಲವಾಗಿರುವುದು, ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿರುವುದು ಸಂತಸದ ವಿಚಾರ. ಆದಾಗ್ಯೂ ನೇತ್ರಾವತಿ ನದಿ ಗರ್ಭದ ಶಿವನ ಉದ್ಭವ ಲಿಂಗಕ್ಕೆ ಶಿವರಾತ್ರಿಯ ವಿಶೇಷ ಪೂಜೆ ನಡೆಯುವಂತಾಗಲೂ ಜಿಲ್ಲಾಡಳಿತ ಮುಂದಾಗಬೇಕು.-ಸಂದೀಪ್ ಶೆಟ್ಟಿ, ಹೋಟೆಲ್ ಮಾಲೀಕರು ಉಪ್ಪಿನಂಗಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದೇಶ್ವರ ಶ್ರೀ ಮಹದಾಸೆ ಈಡೇರಿಸಿದ್ದೇವೆ
ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಉಮೇಶ