ಇಂದಿನಿಂದ ಕೊಪ್ಪಳದಲ್ಲಿ ಮಾವು ಮೇಳ

KannadaprabhaNewsNetwork |  
Published : May 13, 2024, 12:01 AM IST
12ಕೆಪಿಎಲ್1:ಕೊಪ್ಪಳದ ನಗರದ  ತೋಟಗಾರಿಕೆ ಉಪ ನಿರ್ದೆಶಕರ ಕಚೇರಿ ಆವರಣದಲ್ಲಿ ಮೇ.13, ಸೋಮವಾರದಿಂದು ಜರುಗುವ ಮಾವು ಮೇಳಕ್ಕೆ ಸಿದ್ದತೆ ಜರುಗಿತು. | Kannada Prabha

ಸಾರಾಂಶ

ಕೊಪ್ಪಳ ನಗರದ ತೋಟಗಾರಿಕೆ ಉಪ ನಿರ್ದೆಶಕರ ಕಚೇರಿ ಆವರಣದಲ್ಲಿ ಮೇ 13ರಂದು ಮಾವು ಮೇಳ ಜರುಗಲಿದೆ. ಜಿಲ್ಲೆಯ ಗ್ರಾಹಕರು ಹಾಗೂ ರೈತರಿಗೆ ಮಾವು ಮಾರಾಟ, ಖರೀದಿಗೆ ಅವಕಾಶ ಇದೆ.

ಕೊಪ್ಪಳ: ನಗರದ ತೋಟಗಾರಿಕೆ ಉಪ ನಿರ್ದೆಶಕರ ಕಚೇರಿ ಆವರಣದಲ್ಲಿ ಮೇ 13ರಂದು ಮಾವು ಮೇಳ ಜರುಗಲಿದೆ.

ಹಣ್ಣಿನ ರಾಜಾ ಎಂದೇ ಖ್ಯಾತಿ ಆಗಿರುವ ಈ ಮಾವು ಮೇಳದಲ್ಲಿ ಮಾವು ಖರೀದಿಗೆ ಮುಕ್ತ ಅವಕಾಶ ಸಿಗುತ್ತಿದೆ. ಜಿಲ್ಲೆಯ ಗ್ರಾಹಕರು ಹಾಗೂ ರೈತರಿಗೆ ಮಾವು ಮಾರಾಟ, ಖರೀದಿಗೆ ಅವಕಾಶ ಇದೆ. ರೈತರಿಂದ ನೆರವಾಗಿ ನೈಸರ್ಗಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಾಗಿಸಿದ ಮಾವುಗಳನ್ನು ಯೋಗ್ಯ ದರದಲ್ಲಿ ಗ್ರಾಹಕರಿಗೆ ತಲುಪಿಸುವ ಕಾರಣ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಉತ್ತಮ ಗುಣಮಟ್ಟ ಹಾಗೂ ನಾನಾ ಬಗೆಯ ಮಾವುಗಳು ಮೇಳಕ್ಕೆ ಬರಲಿವೆ.

ಹೊಸ ತಳಿಯ ಮಾವಿನ ಜತೆಗೆ ರುಚಿಕಟ್ಟಾದ ಮಾವಿನ ಹಣ್ಣುಗಳು ಗ್ರಾಹಕರ ಕೈ ಸೇರಲಿವೆ. ಗಣ್ಯಮಾನ್ಯರು, ಅಧಿಕಾರಿ ವರ್ಗದವರು ಮಾವು ಮೇಳ ಉದ್ಘಾಟಿಸಲಿದ್ದಾರೆ. ಅಪಾರ ಪ್ರಮಾಣದಲ್ಲಿ ಗ್ರಾಹಕರು ಮಾವು ಮೇಳದಲ್ಲಿ ಭಾಗಿಯಾಗಲಿದ್ದು, ಮಾವು ಮೇಳವನ್ನು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ರೈತರಿಗೆ ಮಾವುಮೇಳ ಸಹ ಸೂಕ್ತ ಮಾರುಕಟ್ಟೆಯಾಗಲಿದೆ. ಈಗಾಗಲೇ ಮಾವು ಮೇಳಕ್ಕೆ ಸಿದ್ಧತೆ ನಡೆದಿದ್ದು, ಸೋಮವಾರದಿಂದ ಮಾವಿನ ಹಣ್ಣಿನ ಪರಿಮಳ ಎಲ್ಲೆಡೆ ಪಸರಿಸಲಿದೆ.

ಮೇಳಕ್ಕೆ ಚಾಲನೆ ನೀಡಲಿರುವ ಡಿಸಿ:

ಮೇ 13ರಿಂದ ಮೇ 21ರ ವರೆಗೆ ಕೊಪ್ಪಳ ನಗರದ ಎಲ್‌ಐಸಿ ಆಫೀಸ್ ಹತ್ತಿರವಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮೇ 13ರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡುವರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವರು.

ಈ ಮೇಳದದಲ್ಲಿ ಕೊಪ್ಪಳ ಕೇಸರ್, ಮಲಘೋಬಾ, ಬಿನಿಶಾ, ತೋತಾಪುರಿ, ಆಪೂಸ್ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾವು ಮೇಳಕ್ಕೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ್ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ