ಮಾವು ಬೆಳೆಗಾರರು, ದಲ್ಲಾಳಿಗಳಿಗೆ ಆತಂಕ । ಈ ಬಾರಿ ಮಾವಿನ ಸುಗ್ಗಿ ವಿಳಂಬವಾಗುವ ಸೂಚನೆಸಂತೋಷ ದೈವಜ್ಞ
ತಡವಾಗಿ ಮಾವಿನ ಮರಗಳು ನೆನೆ (ಹೂವು) ಬಿಡುತ್ತಿದ್ದು, ಸಂಪ್ರದಾಯದಂತೆ ಮಾವು ಬೆಳೆಗಾರರು ಗಿಡಗಳಿಗೆ ಔಷಧ ಸಿಂಪಡಣೆ ಸೇರಿದಂತೆ ಮಾವಿನ ತೋಪುಗಳ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಾವಿನ ಮರಗಳು ವಿಳಂಬವಾಗಿ ಹೂವು ಬಿಡುತ್ತಿರುವುದು ನೋಡಿದರೆ ಈ ಬಾರಿ ಮಾವಿನ ಸುಗ್ಗಿ ವಿಳಂಬವಾಗುವ ಸೂಚನೆ ನೀಡುತ್ತಿದ್ದು, ಮಾವು ಬೆಳೆಗಾರರು ಹಾಗೂ ದಲ್ಲಾಳಿಗಳಿಗೆ ಆತಂಕ ಎದುರಾಗಿದೆ.
ಈ ಹಿಂದೆಲ್ಲ ನವೆಂಬರ್ ತಿಂಗಳಲ್ಲಿಯೇ ಮೈತುಂಬ ಹೂ ಬಿಟ್ಟು ಕಂಗೊಳಿಸಿ ಮಾವು ಬೆಳೆಗಾರರಲ್ಲಿ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸುತ್ತಿತ್ತು. ಆದರೆ ಈ ಬಾರಿ ಇದೀಗ ಅಲ್ಲಲ್ಲಿ ಹೂವು ಬಿಡುತ್ತಿದ್ದು, ಬಹುತೇಕ ಕಡೆ ಹೂವು ಬಿಡುವುದು ವಿಳಂಬವಾಗುತ್ತಿದೆ.ತಾಲೂಕಿನ ಸುಮಾರು ೫ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಆಪೂಸ್, ಪೈರಿ, ಇಸಾಡ್, ಸಿಂದೂಲಾ, ಮಾನಕೂರ, ಗಿಳಿಮಾವು, ಮಲ್ಲಿಕಾ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಮಾವನ್ನು ಬೆಳೆಯಲಾಗಿದೆ. ಮಾವಿನ ಕಣಜ ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಪಾಳಾ ಭಾಗದಲ್ಲಿ ಲಕ್ಷಾಂತರ ರೂಪಾಯಿ ನೀಡಿ ಮಾವಿನ ತೋಟಗಳನ್ನು ದಲ್ಲಾಳಿಗಳು ಗೇಣಿ ಪಡೆಯುತ್ತಾರೆ. ಅದೇ ರೀತಿ ಗೇಣಿ ಪಡೆದ ದಲ್ಲಾಳಿಗಳು ಈಗಾಗಲೇ ಮಾವಿನ ತೋಟಗಳಿಗೆ ಲಗ್ಗೆ ಇಟ್ಟು ಔಷಧೋಪಚಾರ ನಿರ್ವಹಣಾ ಕಾರ್ಯ ಪ್ರಾರಂಭಿಸಿದ್ದಾರೆ. ಬಹುತೇಕ ಮಾವಿನ ತೋಪುಗಳನ್ನು ಗಿಡಗಳ ಸಂಖ್ಯೆ ಹಾಗೂ ಫಸಲು ಬಿಡುವ ಆಧಾರದ ಮೇಲೆ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುವ ಮಾವು ವ್ಯಾಪಾರಸ್ಥ ದಲ್ಲಾಳಿಗಳು ಮಾವಿನ ತೋಪಿನ ಮಾಲೀಕರಿಗೆ ವರ್ಷಕ್ಕೆ ಇಂತಿಷ್ಟು ರೂಪಾಯಿ ಹಣ ಸಂದಾಯ ಒಪ್ಪಂದ ಮಾಡಿಕೊಂಡು ಗುತ್ತಿಗೆ ಪಡೆಯುತ್ತಾರೆ. ಅದೇ ರೀತಿ ಈ ಬಾರಿಯು ಗುತ್ತಿಗೆ ಪಡೆದಿರುವ ಮಾವು ವ್ಯಾಪಾರಸ್ಥ ದಲ್ಲಾಳಿಗಳು ಫಸಲು ರಕ್ಷಣೆ ನಿರ್ವಹಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ಸಲ ದಲ್ಲಾಳಿಗಳು ವರ್ಷ ವರ್ಷಕ್ಕೆ ದ್ವಿಗುಣ ಹಾಗೂ ತ್ರಿಗುಣದರ ಏರಿಸಿ ಇಲ್ಲಿಯ ಮಾವಿನ ಕೊಪ್ಪಲು ಗಳನ್ನು ಗುತ್ತಿಗೆ ಪಡೆಯುತ್ತಾರೆ. ೩-೪ ತಿಂಗಳುಗಳ ಕಾಲ ಸಾವಿರಾರು ರೂಪಾಯಿ ವೇತನ ನೀಡಿ ಕಾವಲುಗಾರನ್ನು ನೇಮಿಸಿ ೨-೩ ಬಾರಿ ಔಷಧ ಸಿಂಪಡಣೆ ಮಾಡುವುದು ಸೇರಿದಂತೆ ವಿವಿಧ ರೀತಿ ತೋಪುಗಳನ್ನು ನಿರ್ವಹಣೆ ಮಾಡಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ.
ಪ್ರಾರಂಭದ ವಾತಾವರಣ ನೋಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವಿನ ತೋಟಗಳನ್ನು ಲಕ್ಷಾಂತರ ರೂಪಾಯಿಗೆ ಗುತ್ತಿಗೆ ಪಡೆದು ಹಲವು ತಿಂಗಳುಗಳ ಕಾಲ ನಿರ್ವಹಣೆ ಮಾಡಿ ಕೊನೆಯ ಕ್ಷಣದಲ್ಲಿ ಕೈ ಸುಟ್ಟುಕೊಂಡ ಅನುಭವ ಕೂಡ ಮಾವು ವ್ಯಾಪಾರಸ್ಥರಿಗಾದ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚಿನ ಕಳೆದ ಕೆಲ ವರ್ಷಗಳಿಂದ ಒಂದು ವರ್ಷ ಮಾವಿನ ಫಸಲು ಉತ್ತಮವಾಗಿದ್ದರೆ ಮತ್ತೊಂದು ವರ್ಷ ಕೈ ಕೊಡುತ್ತದೆ. ಇದರಿಂದ ದಲ್ಲಾಳಿಗಳು ವಾತಾವರಣ ನೋಡಿಕೊಂಡು ಅಳೆದು ತೂಗಿ ಮಾವಿನ ತೋಪುಗಳನ್ನು ಗೇಣಿ ಪಡೆಯುತ್ತಿದ್ದಾರೆ.ಈ ಬಾರಿ ಹೆಚ್ಚು ಮಳೆಯಾದ ಪರಿಣಾಮ ತೇವಾಂಶ ಹೆಚ್ಚಾಗಿದ್ದರಿಂದ ಹೂವು ಬಿಡುವುದು ಸ್ವಲ್ಪ ವಿಳಂಬವಾಗಿದ್ದು, ಈವರೆಗೆ ಶೇ. ೫೦ರಷ್ಟು ಮಾತ್ರ ಹೂವು ಬಿಟ್ಟಿದೆ. ಹೆಚ್ಚು ಇಳುವರಿಗಾಗಿ ಮಾವಿನ ಬೆಳೆಗೆ ಸಿಂಪಡಿಸಲು ಇಲಾಖೆಯಿಂದ ಮಾವು ವಿಶೇಷ ಎಂಬ ಔಷಧಿಯನ್ನು ಉಚಿತವಾಗಿ ರೈತರಿಗೆ ವಿತರಿಸಲಾಗುತ್ತಿದೆ ಎನ್ನುತ್ತಾರೆ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ.ಸದ್ಯದ ಪರಿಸ್ಥಿತಿಯಲ್ಲಿ ಈವರೆಗೆ ಪೂರಕ ವಾತಾವರಣವಿವೆ. ಮಾವಿನ ಮರಗಳು ಉತ್ತಮ ಹೂವು ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಕೂಡ ಇಬ್ಬನಿ ಹಾಗೂ ಕೀಟ ಬಾಧೆ ರೋಗ ಬಾರದಂತೆ ವಾತಾವರಣ ಕೈ ಹಿಡಿದರೆ ಒಳ್ಳೆಯ ಫಸಲು ಬರಬಹುದು ಎಂದು ಮಾವು ಬೆಳೆಗಾರ ಆಬಿದಲಿ ಮಹ್ಮದಗೌಸ ಪಾಟೀಲ ತಿಳಿಸಿದ್ದಾರೆ.