ರಾಮನಗರ, ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಗೆ ಮಾವು ಲಗ್ಗೆ

KannadaprabhaNewsNetwork |  
Published : Apr 11, 2025, 12:32 AM IST
10ಕೆಆರ್ ಎಂಎನ್ 1,2.ಜೆಪಿಜಿಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಮಾವಿನ ಕಾಯಿಗಳು | Kannada Prabha

ಸಾರಾಂಶ

ಜಿಲ್ಲೆಯ ಮಾವು ಬೆಳೆಗಾರರು ಶೇ 90ರಷ್ಟು ಬಾದಾಮಿ ತಳಿಯ ಮಾವು ಬೆಳೆಯುತ್ತಾರೆ. ಉಳಿದ ಶೇ .5ರಷ್ಟು ಸೇಂದೂರ ಬಿಟ್ಟರೆ ರಸಪೂರಿ, ತೋತಾಪುರಿ, ಅಮರಪಾಲಿ, ಮಲ್ಲಿಕಾ ತಳಿಯ ಮಾವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಜಿಲ್ಲೆಯ ಕೆಲವೆಡೆ ಬೆಳೆಯಲಾಗುತ್ತದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವು ಬರತೊಡಗಿವೆ. ಮಳೆ ಬೀಳುತ್ತಿದ್ದಂತೆಯೇ ಹಲವೆಡೆ ಮಾವಿನ ಕಾಯಿ ಕೊಯ್ಲು ಶುರುವಾಗಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ಬಳಿಕ ಕೋಲಾರ, ಹುಬ್ಬಳ್ಳಿ– ಧಾರವಾಡ ಮಾವು ಮಾರುಕಟ್ಟೆ ಪ್ರವೇಶಿಸುತ್ತವೆ. ಕಳೆದ ವರ್ಷ ಬರ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಶೇ. 90ರಷ್ಟು ಬೆಳೆ ಕೈ ಕೊಟ್ಟಿತ್ತು. ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಮಳೆ ಜೊತೆಗೆ ಬೆಳೆಯೂ ಚೆನ್ನಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯಲ್ಲಿ 31,723 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. 30 ಸಾವಿರ ಮಾವು ಬೆಳೆಗಾರರು ಇದ್ದಾರೆ. ಮಾವಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರರು ಇದ್ದಾರೆ.

ಶೇ.90ರಷ್ಟು ಬಾದಾಮಿ ಬೆಳೆ:

ಜಿಲ್ಲೆಯ ಮಾವು ಬೆಳೆಗಾರರು ಶೇ 90ರಷ್ಟು ಬಾದಾಮಿ ತಳಿಯ ಮಾವು ಬೆಳೆಯುತ್ತಾರೆ. ಉಳಿದ ಶೇ .5ರಷ್ಟು ಸೇಂದೂರ ಬಿಟ್ಟರೆ ರಸಪೂರಿ, ತೋತಾಪುರಿ, ಅಮರಪಾಲಿ, ಮಲ್ಲಿಕಾ ತಳಿಯ ಮಾವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಜಿಲ್ಲೆಯ ಕೆಲವೆಡೆ ಬೆಳೆಯಲಾಗುತ್ತದೆ.

ತೋಟಗಾರಿಕಾ ಇಲಾಖೆ ಸಿಬ್ಬಂದಿ ಜಿಲ್ಲೆಯ ಹಲವು ತೋಟಗಳಿಗೆ ತೆರಳಿ ಸಮೀಕ್ಷೆ ನಡೆಸಿದ್ದು, ಶೇ 70ರಷ್ಟು ಇಳುವರಿ ಚೆನ್ನಾಗಿರುವುದು ಕಂಡು ಬಂದಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಮಾವಿನ ಕಾಯಿಗಳಿಗೆ ಅಷ್ಟಾಗಿ ಹೊಡೆತ ಬಿದ್ದಿಲ್ಲ. ಸದ್ಯ ಮಾರುಕಟ್ಟೆಯ ಕೆಲವೆಡೆ ಸೇಂದೂರ ಹಣ್ಣು ಸಿಗುತ್ತಿವೆ. ಈ ತಿಂಗಳ ಮೂರನೇ ವಾರದಲ್ಲಿ ಬಾದಾಮಿ ಮಾವು ಮಾರುಕಟ್ಟೆ ಪ್ರವೇಶಿಸಲಿದೆ. ಜೂನ್ ಅಂತ್ಯದವರೆಗೆ ಮಾವಿನ ಋತು ಇರಲಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಮಾವು ಬೆಳೆ ಉತ್ತಮವಾಗಿದ್ದು, ಶೇ 70ರಷ್ಟು ಇಳುವರಿ ನಿರೀಕ್ಷಿಸಲಾಗಿದೆ. ಕೊಯ್ಲು ಶುರುವಾಗಿ ಕಾಯಿಗಳು ಮಂಡಿಗೆ ಬರಲು ಶುರುವಾಗಿದೆ. ಕೆಲವೆಡೆ ಸೇಂದೂರ ಹಣ್ಣು ಸಿಗುತ್ತಿವೆ. ಇನ್ನೂ 20 ದಿನದೊಳಗೆ ಪೂರ್ಣ ಪ್ರಮಾಣದಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ನೀರಾವರಿ ವ್ಯವಸ್ಥೆ ಮಾವಿನ ತೋಟಗಳಲ್ಲಿ ಫಸಲು ಉತ್ತಮವಾಗಿದ್ದು, ಮಳೆಯಾಶ್ರಿತ ತೋಟಗಳಲ್ಲಿ ಅಷ್ಟಾಗಿ ಹೇಳಿಕೊಳ್ಳುವಂತಿಲ್ಲ. ಈಗಾಗಲೇ ಸುರಿದ ಮಳೆಗೆ ಸಣ್ಣ ಕಾಯಿಗಳು ಉದುರಿವೆ. ಕಾಯಿಗಳು ಮರದಲ್ಲೇ ಹಣ್ಣಾಗಲಿ ಎಂದು ಇನ್ನೂ ಸ್ವಲ್ಪ ದಿನ ಬಿಡಬೇಕು ಎನಿಸುತ್ತದೆ. ಆದರೆ, ಮತ್ತೇನಾದರೂ ಜೋರಾಗಿ ಮಳೆ ಸುರಿದರೆ ಅಥವಾ ಆಲಿಕಲ್ಲು ಮಳೆಯಾದರೆ ಕಾಯಿಗಳು ನೆಲ ಕಚ್ಚಲಿವೆ. ಹಾಗಾಗಿ, ಬಲಿತ ಕಾಯಿಗಳನ್ನು ಕೊಯ್ಲು ಮಾಡಿ ಮಂಡಿಗೆ ತಂದು ಹಾಕುತ್ತಿದ್ದೇವೆ.

- ಕುಮಾರಸ್ವಾಮಿ, ಮಾವು ಬೆಳೆಗಾರ.

ರಾಮನಗರ ಜಿಲ್ಲೆಯ ಮಾವು ರಾಜ್ಯದ ವಿವಿಧ ಭಾಗ ಅಲ್ಲದೇ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳ, ಗುಜರಾತ್‌ಗೆ ಹೋಗುತ್ತದೆ. ಕಾಯಿಗಳ ಕೊಯ್ಲು ಶುರುವಾಗುತ್ತಿದ್ದಂತೆ ಅಲ್ಲಿನ ವ್ಯಾಪಾರಿಗಳು ಬಂದು ಖರೀದಿಸುತ್ತಾರೆ. ಹಿಂದೆ ನಾವೇ ತೋಟಗಳನ್ನು ವಹಿಸಿಕೊಂಡು ಕೊಯ್ಲು ಮಾಡುತ್ತಿದ್ದೇವು. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ವ್ಯಾಪಾರಿಗಳು ತೋಟಗಳನ್ನು ವಹಿಸಿಕೊಳ್ಳುವುದು ಕಡಿಮೆಯಾಗಿದೆ. ರೈತರೇ ಕೊಯ್ಲು ಮಾಡಿಕೊಂಡು ತರುತ್ತಾರೆ.

- ಸೈಯದ್ ಮತೀನ್ , ಮಾವು ವ್ಯಾಪಾರಿ.

ಕಾಯಿಗಳನ್ನು ಹಣ್ಣು ಮಾಡಲು ಯಾವುದೇ ರಾಸಾಯನಿಕ ಸಿಂಪಡಿಸದೆ, ಸ್ವಾಭಾವಿಕವಾಗಿಯೇ ಹಣ್ಣು ಮಾಡಿ ಗ್ರಾಹಕರಿಗೆ ಮಾರಾಟ ಮಾಡುವಂತೆ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಜಾಗೃತಿ ಮೂಡಿಸುತ್ತಿದ್ದೇವೆ.

- ಎಂ.ಎಸ್.ರಾಜು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ.

-----------------------------

ಸಗಟು ದರ ಪ್ರತಿ ಕೆ.ಜಿ.ಗೆ

ಮಾವು ದರ (ಕನಿಷ್ಟ-ಗರಿಷ್ಟ)

ಬಾದಾಮಿ 120-160

ಸೇಂದೂರ 70-100

ರಸಪೂರಿ 150

ಮಲ್ಲಿಕಾ 110-120

ತೋತಾಪುರಿ 20-25

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!