ಕನ್ನಡಪ್ರಭ ವಾರ್ತೆ ಮಂಡ್ಯ
ಯುವತಿಯರು ಹಾಗೂ ಮಹಿಳೆಯರು ಋತುಚಕ್ರದ ದಿನಗಳಲ್ಲಿ ಪ್ಲಾಸಿಕ್ ಸ್ಯಾನಿಟರಿ ಪ್ಯಾಡ್ ಬಳಸುವುದು ಅಪಾಯಕಾರಿ. ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಹೆಚ್ಚಿದ್ದು, ಕ್ಯಾನ್ಸರ್‌ಕಾರಕ ಅಂಶಗಳಿಗೆ ಎಂದು ಮಿಮ್ಸ್ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಮನೋಹರ್ ಹೇಳಿದರು.ತಾಲೂಕಿನ ಗೊರವಾಲೆ ಸರ್ಕಾರಿ ಶಾಲೆ ಆವರಣದಲ್ಲಿ ಶಿವಳ್ಳಿ ಗ್ರಾಮ ಪಂಚಾಯ್ತಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ, ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಅಂಶಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ, ಋತುಚಕ್ರ ದಿನಗಳಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳಿಂದ ಕ್ಯಾನ್ಸರ್ ಬರುತ್ತಿದೆ ಎಂಬ ವರದಿ ಬಂದಿದೆ ಎಂದರು.
ಪ್ಲಾಸ್ಟಿಕ್ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ಬದಲು ಕಡಿಮೆ ಹಣದಲ್ಲಿ ಸಿಗುವ ಮುಟ್ಟಿನ ಕಪ್‌ಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಗ್ರಾಪಂನಿಂದ ಉಚಿತವಾಗಿ ಮುಟ್ಟಿನ ಕಪ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.ಬದಲಾದ ಜೀವನ ಶೈಲಿ ಮತ್ತು ಆಹಾರ ಪದಾರ್ಧಗಳಿಂದ ಹಾಗೂ ಫಾಸ್ಟ್ ಮತ್ತು ಜಂಕ್‌ಫುಡ್ ಸೇವನೆಯಿಂದ ಯುವತಿಯರಲ್ಲಿ ಋತುಚಕ್ತ ಏರುಪೇರಾಗುತ್ತಿದೆ, ಚಿಕ್ಕವಯಸ್ಸಿನ ಹೆಣ್ಣುಮಕ್ಕಳು ಬಹುಬೇಗನೇ ಋತುಮತಿಯಾಗುತ್ತಿದ್ದಾರೆ ಎಂದು ಎಚ್ಚರಿಸಿದರು.
ಮಹಿಳೆಯರಲ್ಲಿ ಮುಟ್ಟು ಅಥವಾ ಋತುಚಕ್ರ ಪ್ರಕೃತಿಯ ಸಹಜ ಕ್ರಿಯೆ. ಸ್ವ-ಸ್ವಚ್ಛತೆಯಿಂದ ಆರೋಗ್ಯ ರಕ್ಷಿಸಿಕೊಳ್ಳಬೇಕು, ಹದಿಹರೆಯದ ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ತಾಯಿಯ ಪೋಷಣೆಯಲ್ಲಿರುತ್ತಾರೆ, ಅವರೂ ಸಹ ಸ್ವ-ಸ್ವಚ್ಛತೆಯಿಂದ ಆರೋಗ್ಯ ನೋಡಿಕೊಳ್ಳುವುದು ಉತ್ತಮ ಎಂದರು.ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಶಿಲ್ಪಶ್ರೀ, ಮಹಿಳೆಯರಿಗೆ ಮುಟ್ಟು ಪ್ರಕೃತಿಯ ವರವಾಗಿದ್ದು, ಇದರಿಂದಲೇ ಜನನ, ಇಂತಹ ಭಾಗ್ಯವನ್ನು ಪಡೆದ ಮಹಿಳೆಯರೇ ಧನ್ಯರು, ಸಂತಾನೋತ್ಪತ್ತಿಗೆ ಮೂಲಾಧಾರ ಮಹಿಳೆಯರೇ ಆಗಿದ್ದಾರೆ. ಅವರ ಆರೋಗ್ಯ ಮತ್ತು ಶಿಕ್ಷಣ ಬಹಳ ಮುಖ್ಯ ಎಂದರು.
ಮಹಿಳೆ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಲೈಂಗಿಕ ದೌರ್ಜನ್ಯ ತಡೆ, ಕಳ್ಳಸಾಗಾಣಿಕೆ,ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಹೆಣ್ಣುಭ್ರೂಣಹತ್ಯೆ, ಕಾನೂನು ಅರಿವು, ಕೌಟುಂಬಿಕ ದೌರ್ಜನ್ಯ ತಡೆ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಮಂಡ್ಯ ತಾಲೂಕು ಪಂಚಾಯ್ತಿ ಎಂ ಎಸ್ ವೀಣಾ,ಶಿವಳ್ಳಿ ಗ್ರಾ.ಪಂ.ಅಧ್ಯಕ್ಷೆ ಎಂ.ಸಿ.ಉಷಾ, ಉಪಾಧ್ಯಕ್ಷೆ ನವ್ಯಶ್ರೀ, ಪಿಡಿಒ ಶಿವಕುಮಾರ್, ಕಾರ್ಯದರ್ಶಿ ಪ್ರಕಾಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ.ಶೋಭಾರಾಣಿ, ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ಗ್ರಾಪಂ ಸದಸ್ಯರು, ಮಾಜಿ ಅಧ್ಯಕ್ಷರು, ಸಿಬ್ಬಂದಿ ಹಾಜರಿದ್ದರು.