ಫ್ಲೈಒವರ್‌ ಕಾಮಗಾರಿ ಅಡಿಯಲ್ಲೇ ಮಾವು ಮಾರಾಟ!

KannadaprabhaNewsNetwork |  
Published : May 09, 2026, 02:00 AM IST
ಮದಮದಮ | Kannada Prabha

ಸಾರಾಂಶ

ಫ್ಲೈಒವರ್‌ ಮೇಲೆ ಕಾಮಗಾರಿ ನಡೆಯುತ್ತಿದ್ದರೆ ಬುಡದಲ್ಲಿ ನಿರಂತರವಾಗಿ ವಾಹನ ಓಡಾಡುತ್ತಿದ್ದರೆ, ಮತ್ತೊಂದೆಡೆ ಮಾವಿನ ಹಣ್ಣು, ತರಕಾರಿ ಸೇರಿದಂತೆ ವಿವಿಧ ಬೀದಿ ಬದಿಯಲ್ಲಿ ವ್ಯಾಪಾರಿಗಳು ಕುಳಿತು ವಹಿವಾಟು ನಡೆಸುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಕೆಳಗೆ ಮಾವು, ತರಕಾರಿ ಮಾರಾಟ... ಪಕ್ಕದಲ್ಲೇ ಬಸ್‌, ಕಾರು, ಬೈಕ್‌ಗಳ ಸಂಚಾರ... ಅನಾಹುತ ಸಂಭವಿಸಿದರೆ ಹೊಣೆ ಯಾರು? 2 ವರ್ಷದ ಹಿಂದೆ ಕಾಮಗಾರಿ ವೇಳೆ ನಡೆದ ಅವಘಡದಿಂದ ಎಎಸ್‌ಐ ಮೃತಪಟ್ಟಿದ್ದರೂ ಗುತ್ತಿಗೆ ಸಂಸ್ಥೆಯಾಗಲಿ, ಅಧಿಕಾರಿ ವರ್ಗವಾಗಲಿ ಪಾಠ ಕಲಿತಿಲ್ಲವೇ?

ಇವು ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಬಳಿ ಫ್ಲೈಒವರ್‌ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದಾಗ ಉದ್ಭವಿಸುವ ಪ್ರಶ್ನೆಗಳು.

ಚೆನ್ನಮ್ಮ ವೃತ್ತ ಸಂಪರ್ಕಿಸುವ ಹುಬ್ಬಳ್ಳಿ-ಗದಗ ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ-ಧಾರವಾಡ ರಸ್ತೆ, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ- 218ರ ವ್ಯಾಪ್ತಿಯ 3.6 ಕಿಮೀದಲ್ಲಿ ಫ್ಲೈಒವರ್ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿಯನ್ನು ರಾಜಸ್ಥಾನ ಮೂಲದ ಝಂಡು ಕಂಪನಿ ಗುತ್ತಿಗೆ ಪಡೆದಿದ್ದು, ಕಾಮಗಾರಿ ಅತ್ಯಂತ ಅಪಾಯಕಾರಿಯಾಗಿ ನಡೆಯುತ್ತಿದೆ. ಕಂಪನಿಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೋ ಗೊತ್ತಿಲ್ಲ. ಆದರೆ, ಫ್ಲೈಒವರ್‌ ಕಾಮಗಾರಿಯಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

ಮುಂಜಾಗ್ರತೆ ಇಲ್ಲ:

ಗದಗ ರಸ್ತೆಯಿಂದ ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ ಸಂಪರ್ಕಿಸುವ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದೆ. ಆದರೆ, ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಮೇಲೆ ಕಾಮಗಾರಿ ನಡೆಯುತ್ತಿದ್ದರೆ ಬುಡದಲ್ಲಿ ನಿರಂತರವಾಗಿ ವಾಹನ ಓಡಾಡುತ್ತಿದ್ದರೆ, ಮತ್ತೊಂದೆಡೆ ಮಾವಿನ ಹಣ್ಣು, ತರಕಾರಿ ಸೇರಿದಂತೆ ವಿವಿಧ ಬೀದಿ ಬದಿಯಲ್ಲಿ ವ್ಯಾಪಾರಿಗಳು ಕುಳಿತು ವಹಿವಾಟು ನಡೆಸುತ್ತಿದ್ದಾರೆ. ಒಂದೇ ವೇಳೆ ಇವರ ಮೇಲೆ ಕಬ್ಬಿಣದ ರಾಡ್‌ ಅಥವಾ ಕಾಮಗಾರಿಗೆ ಬಳಸುವ ವಸ್ತುಗಳು ಬಿದ್ದು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.

ಎಎಸ್‌ಐ ಸಾವು:

2024ರ ಸೆ. 10ರಂದು ಹಳೆಯ ಕೋರ್ಟ್‌ ಸರ್ಕಲ್‌ನಲ್ಲಿ ಕೆಲಸ ನಡೆಯುತ್ತಿದ್ದ ವೇಳೆ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದು ಎಎಸ್‌ಐ ನಾಭಿರಾಜ್‌ ಎಂಬವರ ಮೇಲೆ ಕಬ್ಬಿಣದ ರಾಡ್‌ ಬಿದ್ದು ಹೆಲ್ಮೆಟ್‌ ಸೀಳಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಮೃತಪಟ್ಟರು. ಘಟನೆಗೆ ಸಂಬಂಧಿಸಿದಂತೆ 19 ಜನರ ಮೇಲೆ ಪ್ರಕರಣ ದಾಖಲಾಗಿ 4 ತಿಂಗಳು ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಮತ್ತೆ ಅದೇ ಚಾಳಿ:

ಎಎಸ್‌ಐ ಸಾವು ಘಟನೆ ಬಳಿಕ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಮುಂಜಾಗ್ರತಾ ಕ್ರಮಕೈಗೊಂಡು ಕಾಮಗಾರಿ ಆರಂಭಿಸುವಂತೆ ತಾಕೀತು ಮಾಡಿದ್ದರಿಂದ ಗುತ್ತಿಗೆ ಕಂಪನಿ ಸುರಕ್ಷತಾ ಕ್ರಮಕೈಗೊಳ್ಳುವ ವಾಗ್ದಾನ ಮಾಡಿತ್ತು. ಆರಂಭದಲ್ಲಿ ಹೇಳಿದಂತೆ ನಡೆದುಕೊಂಡ ಕಂಪನಿ ಬಳಿಕ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ. ಈಗಲೂ ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನ ಸಂಚಾರ ನಿರ್ಬಂಧ, ವ್ಯಾಪಾರಿಗಳ ಸ್ಥಳಾಂತರಿಸುವ ಗೋಜಿಗೆ ಕಂಪನಿ ಹೋಗಿಲ್ಲ. ಇದನ್ನು ಕಣ್ಣಾರೆ ಕಂಡರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.ಮೇಲ್ಸೇತುವೆ ಕಾಮಗಾರಿ ನಡೆಯುವ ಕೆಳಗಡೆ ಮಾವಿನ ಹಣ್ಣು ಮಾರಾಟ, ತರಕಾರಿ ವ್ಯಾಪಾರ ನಡೆಯುತ್ತಿದೆ. ಜತೆಗೆ ವಾಹನಗಳ ಸಂಚಾರವೂ ಇದೆ. ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ?

ಬಸವರಾಜ ಜೋಶಿ, ಸಾರ್ವಜನಿಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹಿತಿ ನೀಡದ 18 ಅಧಿಕಾರಿಗಳಿಗೆ ದಂಡ: ಬಿ. ವೆಂಕಟಸಿಂಗ್
ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ?