ಗದಗ: ಕನ್ನಡಿಗರು ಅಭಿಮಾನ ಶೂನ್ಯರಾಗದೇ ಭಾಷೆಯ ಅಭಿವೃದ್ಧಿಗೆ ಕೈಜೋಡಿಸಬೇಕು. ಈ ದಿಸೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಸಮಗ್ರ ಏಳ್ಗೆಯೇ ಕಾರ್ಯ ಮಾಡುತ್ತಿರುವ ಪರಿಷತ್ತಿನ ನಡೆ ಮಾದರಿಯಾದುದು ಎಂದು ಸಾಹಿತಿ ಬಸವರಾಜ ಬಾಳೇಶ್ವರಮಠ ತಿಳಿಸಿದರು.
ಕನ್ನಡ, ಕನ್ನಡಿಗ, ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮಗಳನ್ನು ಹಾಗೂ ಹೋರಾಟಗಳನ್ನು ರೂಪಿಸಿಕೊಂಡು ಬಂದು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿರುವ ಕಾರ್ಯವನ್ನು ಪರಿಷತ್ತು ಶತಮಾನದಿಂದ ಮಾಡುತ್ತಾ ಬಂದಿದೆ. ಕರ್ನಾಟಕ ಏಕೀಕರಣ ಮತ್ತು ನಾಮಕರಣದಲ್ಲಿ ಪರಿಷತ್ತಿನ ಪಾತ್ರ ಮಹತ್ವದ್ದಾಗಿದೆ. ಜಿಲ್ಲೆ ಪರಿಷತ್ತಿನ ಕಾರ್ಯಗಳು ಮಾದರಿಯಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾ. ಸಂತೋಷ ಬೆಳವಡಿ ಮಾತನಾಡಿ, ಕನ್ನಡಿಗರು ಸ್ವಾಭಿಮಾನವನ್ನು ಹೊಂದಿ ಕನ್ನಡದ ಬೆಳವಣಿಗೆಗೆ ಶ್ರಮಿಸಬೇಕು. ಉನ್ನತ ಶಿಕ್ಷಣದ ಪಠ್ಯಗಳು ಕನ್ನಡದಲ್ಲಿ ದೊರೆಯುವಂತೆ ಮಾಡುವ ಮೂಲಕ ಬೇರೆ ಭಾಷೆಗಳ ಅನಿವಾರ್ಯತೆಯನ್ನು ಕಡಿಮೆಗೊಳಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ, ಪುಸ್ತಕ ಪ್ರಕಟಣೆ, ಕಾರ್ಯಾಗಾರಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿದೆ ಎಂದರು.ಕನ್ನಡ ನಾಡು ನುಡಿ, ನೆಲ ಜಲದ ಪ್ರಶ್ನೆ ಬಂದಾಗ ಪರಿಷತ್ ಮುಂಚೂಣಿಯಲ್ಲಿ ನಿಂತು ಕನ್ನಡಿಗರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ. ಕನ್ನಡಿಗರೆಲ್ಲ ಪರಿಷತ್ತಿನ ಸದಸ್ಯರಾಗುವ ಮೂಲಕ ಶಕ್ತಿಯನ್ನು ಇಮ್ಮಡಿಗೊಳಿಸುವ ಕಾರ್ಯ ಮಾಡಬೇಕಿದೆ. ಕನ್ನಡ ಶಾಲೆಗಳ ಸಬಲೀಕರಣ ಪ್ರಥಮ ಆದ್ಯತೆಯಾಗಬೇಕು ಎಂದರು.ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಶಿಕ್ಷಣದ ಚಟುವಟಿಕೆಗಳು ಭಾಷೆಯನ್ನು ಸಮೃದ್ಧವಾಗಿ ಬೆಳೆಸುತ್ತವೆ. ಈ ದಿಸೆಯಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳು ಭಾಷಾ ಬೆಳವಣಿಗೆ ಮತ್ತು ಉದ್ಯೋಗದ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು ಎಂದರು.ಈ ವೇಳೆ ಶಿಕ್ಷಣದ ಉನ್ನತಿಗೆ ಶ್ರಮಿಸಿದ ಎಸ್.ಎಸ್. ಪಟ್ಟಣಶೆಟ್ಟರ ಹಾಗೂ ಡಾ. ಬಸವರಾಜ ಧಾರವಾಡ ಅವರನ್ನು ಸನ್ಮಾನಿಸಲಾಯಿತು. ಸಿ.ಕೆ.ಎಚ್. ಶಾಸ್ತ್ರಿ, ಅನ್ನದಾನಿ ಹಿರೇಮಠ, ಡಿ.ಎಸ್. ಬಾಪುರಿ, ಅಮರೇಶ ರಾಂಪೂರ, ಸಿ.ಎಂ. ಮಾರನಬಸರಿ, ಪ್ರ.ತೋ. ನಾರಾಯಣಪೂರ, ಬಸವರಾಜ ವಾರಿ, ಸತೀಶ ಚನ್ನಪ್ಪಗೌಡ್ರ, ಬೂದಪ್ಪ ಅಂಗಡಿ, ಕು.ಶಿ. ಜಯದೇವಭಟ್, ಶಾರದಾ ಕಾತರಕಿ, ಮಲ್ಲಿಕಾರ್ಜುನ ನಿಂಗೋಜಿ, ಆನಂದ ಹಡಪದ, ಡಾ. ಬೂದೇಶ ಕನಾಜ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.