28ನೇ ಮಕ್ಕಳ ರಕ್ತ ಶಾಸ್ತ್ರ-ಆಂಕೊಲಾಜಿ ಸಮ್ಮೇಳನ, ಪ್ರಶಸ್ತಿ ಪ್ರದಾನ, ಕಾರ್ಯಾಗಾರ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ 28ನೇ ವಾರ್ಷಿಕ ಪೀಡಿಯಾಟ್ರಿಕ್ ಹೆಮಟಾಲಜಿ ಆಂಕೊಲಾಜಿ ಸಮ್ಮೇಳನ - ಫೋಕಾನ್ 2025 ಡಾ. ಟಿಎಂಎ ಪೈ ಹಾಲ್ ಗಳಲ್ಲಿ ನ. 28 ರಿಂದ 30 ರವರೆಗೆ ಯಶಸ್ವಿಯಾಗಿ ನಡೆಯಿತು.
ಮಕ್ಕಳ ಹೆಮಟೊಲಾಜಿಕಲ್ ಮತ್ತು ಆಂಕೊಲಾಜಿಕಲ್ ಪರಿಸ್ಥಿತಿಗಳ ರೋಗನಿರ್ಣಯ, ಚಿಕಿತ್ಸೆ ಮತ್ತು ನಿರ್ವಹಣೆ ಮುನ್ನಡೆಸಲು ತಜ್ಞರು, ಸಂಶೋಧಕರು ಮತ್ತು ಆರೋಗ್ಯ ವೃತ್ತಿಪರರನ್ನು ಒಟ್ಟುಗೂಡಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿತ್ತು. ಈ ವೈಜ್ಞಾನಿಕ ಕಾರ್ಯಕ್ರಮವು ತಜ್ಞರ ಪ್ರಸ್ತುತಿ, ಪ್ಯಾನೆಲ್ ಚರ್ಚೆಗಳು, ನರ್ಸಿಂಗ್, ನರ-ಆಂಕೊಲಾಜಿ, ತಳಿಶಾಸ್ತ್ರ ಮತ್ತು ಕಾಂಡಕೋಶ ಕಸಿ ಕುರಿತು ಪ್ರಾಯೋಗಿಕ ಕಾರ್ಯಾಗಾರಗಳು ಮತ್ತು ನವೀನ ಸಂಶೋಧನೆಯ ಪ್ರಸ್ತುತಿಗಳನ್ನು ಒಳಗೊಂಡಿತ್ತು. ಮಾಹೆಯ ಮಾಜಿ ಉಪಕುಲಪತಿ ಡಾ. ರಾಜ್ ವಾರಿಯರ್ ಉದ್ಘಾಟಿಸಿದರು. ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಮತ್ತು ಮಣಿಪಾಲ ಕ್ಲಸ್ಟರ್‌ನ ಸಿಒಒ ಡಾ. ಸುಧಾಕರ್ ಕಂಟಿಪುಡಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಐಎಪಿಯ ಪಿಎಚ್‌ಒ ಅಧ್ಯಾಯದ ಅಧ್ಯಕ್ಷ ಡಾ. ಶ್ರೀಪಾದ ಬನವಾಲಿ, ಐಎಪಿಯ ಪಿಎಚ್‌ಒ ಅಧ್ಯಾಯದ ಕಾರ್ಯದರ್ಶಿ ಡಾ. ಮಾನಸ್ ಕಲ್ರಾ, ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಫೋಕಾನ್ 2025 ರ ಸಂಘಟನಾ ಮುಖ್ಯಸ್ಥ - ಪೀಡಿಯಾಟ್ರಿಕ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಮತ್ತು ಸಂಘಟನಾ ಕಾರ್ಯದರ್ಶಿ - ಸಹ ಪ್ರಾಧ್ಯಾಪಿಕೆ ಡಾ. ಅರ್ಚನಾ ಎಂ. ವಿ. ಇದ್ದರು.ಕ್ಷೇತ್ರಕ್ಕೆ ನೀಡಿದ ಅನುಕರಣೀಯ ಕೊಡುಗೆಗಳಿಗಾಗಿ ಕರ್ನಲ್ (ಡಾ) ಎ.ಟಿ.ಕೆ. ರಾವ್ ಮತ್ತು ಡಾ. ಜಗದೀಶ್ ಚಂದ್ರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಇಂಪಾಕ್ಟ್ ಫೌಂಡೇಶನ್, ಆರೋಹ್ ಫೌಂಡೇಶನ್ ಮತ್ತು ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್‌ಗೆ ಅವರ ಸಮರ್ಪಿತ ಸೇವೆಗಾಗಿ ವಿಶೇಷ ಮನ್ನಣೆ ಪ್ರಶಸ್ತಿಗಳನ್ನು ನೀಡಲಾಯಿತು. ಮಾಹೆಯ ಹಳೆಯ ವಿದ್ಯಾರ್ಥಿಗಳನ್ನು ಡಾ. ಪುಷ್ಪಾ ಕಿಣಿ ಮತ್ತು ಡಾ. ನಳಿನಿ ಭಾಸ್ಕರಾನಂದ ಸನ್ಮಾನಿಸಿದರು.ಡಾ. ವಾಸುದೇವ ಭಟ್ ಕೆ ಸ್ವಾಗತ ಭಾಷಣ ಮಾಡಿ, ಡಾ. ಅರ್ಚನಾ ಎಂ.ವಿ. ಧನ್ಯವಾದ ಅರ್ಪಿಸಿದರು. ಡಾ. ಎಮಿನ್ ಎ. ರಹಿಮಾನ್, ಡಾ. ಸ್ವಾತಿ ಪಿ.ಎಂ. ಮತ್ತು ಡಾ. ಚೈತ್ರ ವೆಂಕಟೇಶ್ ಸಹಕರಿಸಿದರು. ಸಮ್ಮೇಳನದಲ್ಲಿ ಭಾರತದಾದ್ಯಂತ 700 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.