ಮಣಿಪಾಲ ಮ್ಯಾರಥಾನ್‌: ಸತೀಶ್ ಪೂಜಾರಿ, ಸೆನೈಟ್ ಕೆಫೆಲೆಗೆನ್ ಚಾಂಪಿಯನ್ಸ್

KannadaprabhaNewsNetwork |  
Published : Feb 09, 2026, 03:00 AM IST
ಮಣಿಪಾಲದಲ್ಲಿ ನಡೆದ ಮಾಹೆ ಮ್ಯಾರಥಾನ್ ಸ್ಪರ್ಧೆಯ ಆರಂಭ | Kannada Prabha

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಭಾನುವಾರ ನಡೆದ 8ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ನ ಪುರುಷರ ವಿಭಾಗದಲ್ಲಿ ಸತೀಶ್‌ ಕುಮಾರ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಭಾನುವಾರ ನಡೆದ 8ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ನ ಪುರುಷರ ವಿಭಾಗದಲ್ಲಿ ಸತೀಶ್‌ ಕುಮಾರ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರು 42 ಕಿ.ಮೀ. ದೂರವನ್ನು 2 ಗಂಟೆ 26 ನಿಮಿಷ ಮತ್ತು 49 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆ ಮಾಡಿದ್ದಾರೆ. 2ನೇ ಸ್ಥಾನವನ್ನು ಸಚಿನ್ ಪೂಜಾರಿ (2.27.09) ಮತ್ತು 3ನೇ ಸ್ಥಾನವನ್ನು ಡೆಸೆ ಎಂಡಲೆವ್ (2.32.09) ಗೆದ್ದುಕೊಂಡರು.ಮಹಿಳೆಯರ ವಿಭಾಗದಲ್ಲಿ ಸೆನೈಟ್ ಕೆಫೆಲೆಗೆನ್ ಲಸರ್ಗೆ (3.14.05) ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು, 2ನೇ ಸ್ಥಾನವನ್ನು ಎನಿಯಾಲಿಮ್ ಅಯೋನಾ ಬುಲಿ (3.14.57) ಮತ್ತು 3ನೇ ಸ್ಥಾನವನ್ನು ನೀತಿ ಕೃಪಲಾನಿ (4.18.01) ಗೆದ್ದುಕೊಂಡರು.

ಭಾರತದ ಅತಿದೊಡ್ಡ ವಿದ್ಯಾರ್ಥಿ ಆಯೋಜಿತ ಈ ಮ್ಯಾರಥಾನ್‌ನ ವಿವಿಧ ವಿಭಾಗಗಳಲ್ಲಿ 20,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 25 ಲಕ್ಷ ರು.ಗೂ ಅಧಿಕ ಮೊತ್ತದ ನಗದು ಬಹುಮಾನಗಳನ್ನು ನೀಡಲಾಯಿತು.

ಹಸಿರು ಭವಿಷ್ಯಕ್ಕಾಗಿ ಹೆಜ್ಜೆಗಳು - ಸುಸ್ಥಿರ ಭವಿಷ್ಯಕ್ಕಾಗಿ ಓಟ ಎಂಬ ಆಶಯದೊಂದಿಗೆ ಆಯೋಜಿಸಲಾಗಿದ್ದ ಈ ಮ್ಯಾರಥಾನ್‌ನಲ್ಲಿ ದುಬೈ, ಇಂಗ್ಲೆಂಡ್, ಇಥಿಯೋಪಿಯ, ಜರ್ಮನಿ, ಕೀನ್ಯಾ, ಜಪಾನ್, ಮಲೇಷ್ಯಾ, ನೇಪಾಳ, ಶ್ರೀಲಂಕಾ ಮತ್ತು ಅಮೆರಿಕ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಭಾಗವಹಿಸಿದ್ದರು.ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಸಹ ಕುಲಪತಿಗಳಾದ ಡಾ. ಶರತ್ ರಾವ್, ಡಾ. ದಿಲೀಪ್ ನಾಯ್ಕ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಸಿಕ್ಕಿಂ ಮಣಿಪಾಲ್ ವಿವಿ ಕುಲಪತಿ ಡಾ. ಗೋಪಾಲಕೃಷ್ಣ ಪ್ರಭು, ಸೇರಿ ಮಾಹೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಜಿಲ್ಲೆಯ 1222 ಮನೆಗಳಲ್ಲಿ ಪಿಎಂ ಸೂರ್ಯಘರ್ ಅನುಷ್ಠಾನ: ಕೋಟ
ಶ್ರೀ ಓಂಕಾರ ಭಜನಾ ಮಂಡಳಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ