ಉಳ್ಳಾಲ ತಾಲೂಕಿನ ಮಂಜನಾಡಿಯಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಗುಡ್ಡ ಕುಸಿತ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಆರಂಭದಲ್ಲಿ ಪ್ರಕೃತಿಕ ವಿಕೋಪವೆಂದು ಹೇಳಿದ್ದ ಜಿಲ್ಲಾಡಳಿತದ ನಿಲುವಿಗೆ ವಿರುದ್ಧವಾಗಿ, ಮಾನವ ನಿರ್ಲಕ್ಷ್ಯವೇ ಅವಘಡಕ್ಕೆ ಪ್ರಮುಖ ಕಾರಣ ಎಂಬುದನ್ನು ಸುರತ್ಕಲ್‌ನ ಎನ್ಐಟಿಕೆ (ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ) ತಜ್ಞರ ವರದಿ ಬಹಿರಂಗಪಡಿಸಿದೆ.
ಉಳ್ಳಾಲ: ಉಳ್ಳಾಲ ತಾಲೂಕಿನ ಮಂಜನಾಡಿಯಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಗುಡ್ಡ ಕುಸಿತ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಆರಂಭದಲ್ಲಿ ಪ್ರಕೃತಿಕ ವಿಕೋಪವೆಂದು ಹೇಳಿದ್ದ ಜಿಲ್ಲಾಡಳಿತದ ನಿಲುವಿಗೆ ವಿರುದ್ಧವಾಗಿ, ಮಾನವ ನಿರ್ಲಕ್ಷ್ಯವೇ ಅವಘಡಕ್ಕೆ ಪ್ರಮುಖ ಕಾರಣ ಎಂಬುದನ್ನು ಸುರತ್ಕಲ್‌ನ ಎನ್ಐಟಿಕೆ (ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ) ತಜ್ಞರ ವರದಿ ಬಹಿರಂಗಪಡಿಸಿದೆ.
2025ರ ಮೇ 30ರಂದು ಸಂಭವಿಸಿದ ಈ ದುರ್ಘಟನೆಯಲ್ಲಿ 3 ವರ್ಷದ ಆರ್ಯನ್, 6 ತಿಂಗಳ ಆರುಷ್ ಹಾಗೂ ಅತ್ತೆ ಪ್ರೇಮ ಪೂಜಾರಿ ಮೃತಪಟ್ಟಿದ್ದರು. ತಾಯಿ ಅಶ್ವಿನಿ ಗಂಭೀರವಾಗಿ ಗಾಯಗೊಂಡು ತನ್ನೆರಡೂ ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಮಣ್ಣಿನಡಿ ಸಿಲುಕಿದ ಮಕ್ಕಳನ್ನು ರಕ್ಷಿಸಲು ತಾಯಿ ನಡೆಸಿದ ಹೋರಾಟದ ದೃಶ್ಯ ಇಡಿ ರಾಜ್ಯದ ಜನರನ್ನು ಕಣ್ಣೀರಿನಲ್ಲಿ ಮುಳುಗಿಸಿತ್ತು.ಘಟನೆ ಬಳಿಕ ಜಿಲ್ಲಾಡಳಿತ ಭಾರೀ ಮಳೆಯಿಂದ ಗುಡ್ಡ ಕುಸಿತ ಸಂಭವಿಸಿದೆ ಎಂದು ತಿಳಿಸಿತ್ತು. ಆದರೆ ಸಂತ್ರಸ್ತ ಕುಟುಂಬ ಮಂಜನಾಡಿ ಪಂಚಾಯಿತಿ ನಿರ್ಮಿಸಿದ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆ ಕಾರಣವೆಂದು ಆರೋಪಿಸುತ್ತಲೇ ಬಂದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮಂಗಳೂರಿನ ಎನ್ಐಟಿಕೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ತಜ್ಞರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಡಾ. ಟಿ. ಪಳಣಿಸಾಮಿ ಹಾಗೂ ಡಾ. ಶ್ರೀವಲ್ಸಾ ಕೊಲತಯ್ಯರ್ ಅವರ ನೇತೃತ್ವದ ತಂಡ, ರಸ್ತೆ ನಿರ್ಮಾಣದ ವೇಳೆ ನಡೆದ ಮಣ್ಣು ಕತ್ತರಿಸುವುದು ಹಾಗೂ ತೋಡುವ ಕಾರ್ಯಗಳಿಂದ ಗುಡ್ಡದ ಸ್ಥಿರತೆ ಹದಗೆಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಭಾರೀ ಮಳೆಯಿಂದ ಮಣ್ಣು ತೇವಗೊಂಡು ಒಳಗಿನ ನೀರಿನ ಒತ್ತಡ ಹೆಚ್ಚಾಗಿ ಕೊನೆಗೆ ಗುಡ್ಡ ಕುಸಿತ ಸಂಭವಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಮಾನವ ಚಟುವಟಿಕೆಗಳು ಅವಘಡವನ್ನು ಗಂಭೀರಗೊಳಿಸಿದ್ದವೆಂಬುದು ದೃಢಪಟ್ಟಿದೆ.ಇನ್ನೊಂದೆಡೆ, ಘಟನೆಗೆ ಸಂಬಂಧಿಸಿ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಶ್ವಿನಿ ಆರೋಪಿಸಿದ್ದಾರೆ. ಸೂಕ್ತ ಪರಿಹಾರ ನೀಡದಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಳೆದ ಒಂದು ವರ್ಷದಿಂದ ವೀಲ್‌ಚೇರ್‌ನಲ್ಲೇ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದ್ದಾರೆ. ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಅವರು, ಬಿಎನ್‌ಎಸ್ 105 ಮತ್ತು 106 ಅಡಿಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತನ್ನ ಕುಟುಂಬವನ್ನು ಕಳೆದುಕೊಂಡ ನೋವಿನ ನಡುವೆಯೂ ಅಶ್ವಿನಿ ನಡೆಸುತ್ತಿರುವ ಹೋರಾಟ ಸಮಾಜದಲ್ಲಿ ಸ್ಪಂದನೆ ಮೂಡಿಸಿದ್ದು, ಇದೀಗ ಹೈಕೋರ್ಟ್‌ನ ಮುಂದಿನ ಕ್ರಮದತ್ತ ಎಲ್ಲರ ಗಮನ ನೆಟ್ಟಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.