ಕಳೆದ ವರ್ಷ ಮೇ 30ರಂದು ಮಂಜನಾಡಿಯ ಮೊಂಟೆಪದವಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ಎರಡೂ ಕಾಲು ಕಳೆದುಕೊಂಡ ಅಶ್ವಿನಿ ಅವರು ತನ್ನ ತಾಯಿ ಪುಷ್ಪಾವತಿ ಅವರೊಂದಿಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಸಮ್ಮುಖ ನ್ಯಾಯಕ್ಕಾಗಿ ಕಣ್ಣೀರಿಟ್ಟರು.
ಮಂಗಳೂರು: ಕಳೆದ ವರ್ಷ ಮೇ 30ರಂದು ಮಂಜನಾಡಿಯ ಮೊಂಟೆಪದವಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ಎರಡೂ ಕಾಲು ಕಳೆದುಕೊಂಡ ಅಶ್ವಿನಿ ಅವರು ತನ್ನ ತಾಯಿ ಪುಷ್ಪಾವತಿ ಅವರೊಂದಿಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಸಮ್ಮುಖ ನ್ಯಾಯಕ್ಕಾಗಿ ಕಣ್ಣೀರಿಟ್ಟರು.
ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಂ ಭಟ್ ಮತ್ತು ಸದಸ್ಯ ಎಸ್.ಕೆ. ವಂಟಿಗೋಡಿ ಅವರು ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ದೂರು ವಿಚಾರಣೆಯನ್ನು ಹಮ್ಮಿಕೊಂಡಿದ್ದರು. ಅಲ್ಲಿಗೆ ತನ್ನ ತಾಯಿ ಜತೆ ಖಾಸಗಿ ಆಂಬುಲೆನ್ಸ್‌ನಲ್ಲಿ ಆಗಮಿಸಿದ್ದ ಅಶ್ವಿನಿ, ವೀಲ್ ಚೇರ್‌ನಲ್ಲಿ ಕುಳಿತು ಆಯೋಗದ ಅಧ್ಯಕ್ಷ, ಸದಸ್ಯರನ್ನು ಜಿ.ಪಂ. ಸಭಾಂಗಣ ಪ್ರವೇಶ ದ್ವಾರದಲ್ಲಿ ಅಳಲು ತೋಡಿಕೊಂಡರು.ಅಶ್ವಿನಿ ಪರವಾಗಿ ಸಾಮಾಜಿಕ ಕಾರ್ಯಕರ್ತ ರವಿ ಮಾಹಿತಿ ನೀಡಿ, ಮೊಂಟೆಪದವಿನಲ್ಲಿ ನಡೆದ ದುರಂತದಲ್ಲಿ ಅಶ್ವಿನಿ ಅವರ ಇಬ್ಬರು ಪುಟ್ಟ ಮಕ್ಕಳು ಮತ್ತು ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದರೆ ಅಶ್ವಿನಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಮನೆಯ ಹಿಂದಿನ ಗುಡ್ಡದಲ್ಲಿ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸರ್ಕಾರದಿಂದ 2 ಲಕ್ಷ ರು. ಮಾತ್ರ ಪರಿಹಾರ ಲಭಿಸಿದೆ. ಆದರೆ ನಿರ್ಲಕ್ಷ್ಯದಿಂದ ಸಂಭವಿಸಿದ ದುರ್ಘಟನೆಯಾದ ಕಾರಣ ಸಂತ್ರಸ್ತೆಗೆ ಜೀವನ ಪರ್ಯಂತ ಸೂಕ್ತ ಪರಿಹಾರ, ಮನೆಯ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ಮಾನವ ಹಕ್ಕು ಆಯೋಗ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ. ಪ್ರಕರಣದಲ್ಲಿ ಮನೆಯನ್ನೂ ಕಳೆದುಕೊಂಡಿರುವ ಕುಟುಂಬಕ್ಕೆ ಇನ್ನೂ ಯಾವುದೇ ವ್ಯವಸ್ಥೆ ಆಗಿಲ್ಲ ಎಂದು ತಿಳಿಸಿದರು.
ಮಾಹಿತಿ ಪಡೆದ ಆಯೋಗದ ಅಧ್ಯಕ್ಷರು, ಅಧಿಕಾರಿಗಳು ತಿಳಿಸಿರುವಂತೆ ಎನ್‌ಐಟಿಕೆಯಿಂದ ಈ ಬಗ್ಗೆ ಸಲ್ಲಿಸಲಾಗುವ ವರದಿ ಆಧಾರದಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ, ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಮಂಗಳೂರು ಸಹಾಯಕ ಆಯುಕ್ತರಾದ ಮೀನಾಕ್ಷಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.