ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸಿ ಮಾನವೀಯತೆ ಮೆರೆಯುತ್ತಿರುವ ಮಂಜಯ್ಯ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ತರೀಕೆರೆ, ಮಾರ್ಚ್ ತಿಂಗಳ ಬಿಸಿಲಿನ ತಾಪ, ಹೆಚ್ಚಿದ ಉಷ್ಣಾಂಶದಿಂದ ಜನರೇ ತತ್ತರಿಸುತ್ತಿರುವ ಈ ದಿನಗಳಲ್ಲಿ ನೆರಳು, ಗಾಳಿ, ನೀರಿಗಾಗಿ ಹಪಹಪಿಸುವಂತೆ ಮಾಡುತ್ತದೆ. ಜನರ ಪಾಡೇ ಹೀಗಾದರೆ ಇನ್ನೂ ಮೂಖ ಪ್ರಾಣಿಗಳ ಸ್ಥಿತಿ ಹೇಳಬೇಕಾಗೇ ಇಲ್ಲ.

ಬಿರು ಬೇಸಿಗೆಯಲ್ಲಿ ತಮ್ಮ ಮನೆ ಮುಂದೆ ಹಸುಗಳಿಗೆ ಆಹಾರ । ಪಕ್ಷಿಗಳಿಗೆ ನೀರು, ನೆರಳಿನ ಸೇವೆ

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ

ಮಾರ್ಚ್ ತಿಂಗಳ ಬಿಸಿಲಿನ ತಾಪ, ಹೆಚ್ಚಿದ ಉಷ್ಣಾಂಶದಿಂದ ಜನರೇ ತತ್ತರಿಸುತ್ತಿರುವ ಈ ದಿನಗಳಲ್ಲಿ ನೆರಳು, ಗಾಳಿ, ನೀರಿಗಾಗಿ ಹಪಹಪಿಸುವಂತೆ ಮಾಡುತ್ತದೆ. ಜನರ ಪಾಡೇ ಹೀಗಾದರೆ ಇನ್ನೂ ಮೂಖ ಪ್ರಾಣಿಗಳ ಸ್ಥಿತಿ ಹೇಳಬೇಕಾಗೇ ಇಲ್ಲ.

ಜಾನುವಾರುಗಳ ಪಶು ಪಕ್ಷಿಗಳಂತೂ ನೀರು, ನೆರಳಿನ ಜತೆಗೆ ಆಹಾರಕ್ಕೂ ಪರದಾಡುವ ಸ್ಥಿತಿ ಎದುರಿಸುತ್ತವೆ. ಇವುಗಳ ಸಂಕಷ್ಟಕ್ಕೆ ಆಸರೆಯಾಗಿ ಮಾನವೀಯತೆ ಮೆರೆಯುತ್ತಿರುವ ವ್ಯಕ್ತಿ ಭದ್ರಾವತಿ ಎಂಪಿಎಂ ನಿವೃತ್ತ ಫೋರ್ ಮೆನ್ ಆಗಿರುವ ಪಟ್ಟಣದ ಗಿರಿನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಮಂಜಯ್ಯ. ಇವರು ಬಿರು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಹಸಿವು, ನೀರಡಿಕೆ ನಿವಾರಿಸಲು ತಮ್ಮದೇ ಆದರೀತಿಯಲ್ಲಿ ಸ್ಪಂದಿಸುತ್ತಿದ್ದು, ಅದಕ್ಕಾಗಿ ತಮ್ಮ ಮನೆಯಲ್ಲೆ ಪರಿಹಾರ ಕಂಡುಕೊಂಡಿದ್ದಾರೆ.

ಬಿಸಿಲಿನ ಝಳದಿಂದ ಪಟ್ಟಣದ ಅಂಗಡಿಗಳಲ್ಲಿ ಮಾರಾಟಕ್ಕೆ ತಂದ ಬಾಳೆ ಹಣ್ಣುಗಳು ಕಪ್ಪಾಗಿ ಹೋಗುವ, ಇಲ್ಲ ಗೊನೆಯಿಂದ ಉದುರಿ ಹೋಗುವಂತಹ ಬಾಳೆಹಣ್ಣುಗಳು ಕಸದ ಬುಟ್ಟಿ ಸೇರದಂತೆ ಬಾಳೆ ಮತ್ತು ಇತರೆ ಹಣ್ಣಿನ ಅಂಗಡಿ ಮಾಲೀಕರಿಂದ ತೆಗೆದುಕೊಮಡು ಬಂದು ಅದನ್ನು ತಮ್ಮ ಮನೆ ಗೇಟ್ ಬಳಿ ಗೊನೆ ಸಮೇತ ಕಟ್ಟಿ ನೀರಿನ ವ್ಯವಸ್ಥೆ ಮಾಡಿ ಜಾನವಾರುಗಳ ಹಸಿವು, ದಾಹ ತೀರಿಸಿದರೆ, ಟೆರೇಸ್ ಮೇಲೆ ಪಕ್ಷಿಗಳಿಗಾಗಿ ನೀರು-ನೆರಳು ಮತ್ತು ಆಹಾರ ಒದಗಿಸಿ ಪ್ರಾಣಿಗಳಿಗೂ ಈ ಬೇಸಿಗೆಯನ್ನು ಸಹನೀಯವಾಗಿಸಿದ ಇವರ ಕೆಲಸದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದಕ್ಕಾಗಿ ನಿತ್ಯ ಮಂಜಯ್ಯ ಪ್ರತಿನಿತ್ಯ ತಮ್ಮ ಸ್ಕೂಟಿಯಲ್ಲಿ ಒಂದು ದೊಡ್ಡ ಚೀಲದೊಂದಿಗೆ ಹಣ್ಣಿನ ಅಂಗಡಿಗಳಿಗೆ ಹೋಗಿ ಚೀಲಗಟ್ಟಲೆ ಜನರು ಉಪಯೋಗಿಸದ ಹಣ್ಣುಗಳನ್ನು ಸಂಗ್ರಹಿಸಿ ತಂದು ಜಾನುವಾರುಗಳಿಗೆ ಒದಗಿಸುತ್ತಿದ್ದಾರೆ. ಬೇಸಿಗೆ ಕಾಲ ಬಂತೆಂದರೆ ಸಾಕು ಮಂಜಯ್ಯ ತಮ್ಮ ಈ ಸಾಮಾಜಿಕ ಸೇವೆಯಲ್ಲಿ ತೊಡಗುತ್ತಾರೆ. ಕಳೆದ ಮೂರು ವರ್ಷಗಳಿಂದ ತಮ್ಮ ಈ ಕೈಂಕರ್ಯದಲ್ಲಿ ತೊಡಗಿರುವ ಅವರು ತಮಗೆ ನೆರವಾಗುತ್ತಿರುವ ಹಣ್ಣಿನವ ಅಂಗಡಿ ಮಾಲೀಕರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಹಣ್ಣು, ನೀರಿನ ವ್ಯವಸ್ಥೆಯಿಂದ ದಿನನಿತ್ಯ ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರಗಳು ಬಂದು ಸೇರುತ್ತವೆ. ಬಿಸಿಲಿನಲ್ಲೂ ಹಣ್ಣು ತಿಂದು ನೀರು ಕುಡಿದು ತೃಪ್ತಿಯಿಂದ ತೆರಳುತ್ತವೆ.

23ಕೆಟಿಆರ್.ಕೆ.4ಃ ಬಿರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಬಾಳೆ ಹಣ್ಣು ಮತ್ತು ಇತರ ಹಣ್ಣುಗಳನ್ನು ಒದಗಿಸಲಾಗುತ್ತಿದೆ,.

Share this article