ಪಂಚಭೂತಗಳಲ್ಲಿ ಲೀನರಾದ ತರಬೇತಿ ವೇಳೆ ಫ್ಯಾರಚೂಟ್ ಜಿಗಿತದ ಅಪಘಾತದಲ್ಲಿ ಹುತಾತ್ಮರಾದ ಮಂಜುನಾಥ್

KannadaprabhaNewsNetwork | Updated : Feb 10 2025, 12:01 PM IST

ಸಾರಾಂಶ

 ತರಬೇತಿ ವೇಳೆ ಫ್ಯಾರಚೂಟ್ ಜಿಗಿತದ ಅಪಘಾತದಲ್ಲಿ ಹುತಾತ್ಮರಾದ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ನಿಧನಕ್ಕೆ ಮಲೆನಾಡ ಜನತೆ ಕಂಬನಿ ಮಿಡಿದಿದ್ದಾರೆ.

ಹೊಸನಗರ: ತರಬೇತಿ ವೇಳೆ ಫ್ಯಾರಚೂಟ್ ಜಿಗಿತದ ಅಪಘಾತದಲ್ಲಿ ಹುತಾತ್ಮರಾದ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ನಿಧನಕ್ಕೆ ಮಲೆನಾಡ ಜನತೆ ಕಂಬನಿ ಮಿಡಿದಿದ್ದಾರೆ.

ಭಾನುವಾರ ಬೆಳಗ್ಗೆ 11.30ಕ್ಕೆ ಸೇನಾ ವಾಹನದಲ್ಲಿ ಮಂಜುನಾಥ್ ರವರ ಪಾರ್ಥಿವ ಶರೀರ ಹೊಸನಗರ ಪಟ್ಟಣ ಪ್ರವೇಶಿಸಿತು. ಬೆಳಗ್ಗೆಯಿಂದಲೇ ಊರಿನ ಹೊರಭಾಗ ಕೊಡಚಾದ್ರಿ ಕಾಲೇಜು ಸಮೀಪ ಶಾಲಾ ವಿದ್ಯಾರ್ಥಿಗಳು, ನಗರದ ನಾಗರಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಹೊಸನಗರದ ತಹಸೀಲ್ದಾರ್ ರಶ್ಮಿ ಹಾಲೇಶ್ ಹಾಗೂ ಸಾಗರ ಹೊಸನಗರದ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್.ಹೆಬ್ಬಾಳ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ ಹಾಗೂ ತಾಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಮೃತ ದೇಹಕ್ಕೆ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಬರಮಾಡಿಕೊಂಡರು.

ಬಳಿಕ ಮಂಜುನಾಥ್ ರವರ ಪಾರ್ಥಿವ ಶರೀರವಿದ್ದ ತೆರೆದ ವಾಹನದ ಜೊತೆಗೆ ಜನತೆ ವೀರ ಘೋಷಣೆಗಳನ್ನು ಹಾಕುತ್ತ ಊರಿನ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದರು.ದಾರಿಯಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಮಹಿಳೆಯರು ಸೇರಿದಂತೆ ವಿದ್ಯಾರ್ಥಿಗಳು ರಸ್ತೆಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದರು. ಪಾರ್ಥಿವ ಶರೀರ ಹತ್ತಿರ ಬರುತ್ತಿದ್ದಂತೆಯೇ’ ಮಂಜುನಾಥ ಚಿರಾಯುವಾಗು’ಎಂಬ ಘೋಷಣೆ ಮುಗಿಲು ಮುಟ್ಟಿತು. ಹೊಸನಗರ ತಾಲುಕಿನ ಎಲ್ಲ ಪಕ್ಷದ ರಾಜಕೀಯ ನಾಯಕರು, ಕಾರ್ಯಕರ್ತರು, ವಿವಿಧ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಮಹಿಳೆಯರು ಭಾಗವಹಿಸಿ ಸುಮಾರು 12 ಕಿ.ಮಿ ವರೆಗೆ ಕಾಲ್ನಡಿಗೆಯಲ್ಲಿ ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಹುಟ್ಟುರಿನವರೆಗೆ ಸಾಗಿಸಲಾಯಿತು.

ದಾರಿ ಉದ್ದಕ್ಕೂ ಸಾರ್ವಜನಿಕರು ಶಾಲಾ ಮಕ್ಕಳು ಹೂವುಗಳನ್ನು ಹಾಕುವ ಮೂಲಕ ಅಗಲಿದ ಯೋಧನಿಗೆ ನಮನ ಸಲ್ಲಿಸಿದರು. ಸರ್ಕಾರದ ಪರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹಾಲೇಶ್ ಗೌರವವನ್ನು ಸಲ್ಲಿಸಿದರು.ಶಾಸಕ ಗೋಪಾಲಕೃಷ್ಣ ಮಾತನಾಡಿ, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ಊರಿನ ಯೋಧ ಫ್ಯಾರಚೂಟ್ ಜಿಗಿತದ ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದ ಅವರು, ಯೋಧನ ಆತ್ಮಕ್ಕೆ ಶಾಂತಿ ಕೋರಿದರು.ಯೋಧ ಮಂಜುನಾಥ್ ಅವರ ಮನೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕಕ್ಕೆ ಸಂಕೂರಿನ ಸುತ್ತ ಮುತ್ತಲಿನ ಗ್ರಾಮದ ಜನತೆ ತಂಡೋಪ ತಂಡವಾಗಿ ಆಗಮಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಸುಮಾರು 3 ಗಂಟೆಯ ಸಮಯದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜ್ಯ ಪೊಲೀಸ್ ತುಕಡಿ ಹಾಗೂ ವಾಯು ಸೇನೆ ಕುಶಲತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಾಯಿತು. ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮಂಜುನಾಥರವರ ಪತ್ನಿ ಅವರಿಗೆ ಹಸ್ತಾಂತರಿಸಲಾಯಿತು.

ಅಂತ್ಯಕ್ರಿಯೆ ವೇಳೆ ಹರತಾಳು ಹಾಲಪ್ಪ, ಕಲಗೋಡು ರತ್ನಾಕರ್,ಕೆ ಎಸ್ ಪ್ರಶಾಂತ ಪಾಲ್ಗೊಂಡಿದ್ದರು.

ಮುಗಿಲು ಮುಟ್ಟಿದ ರೋದನ:ಪುತ್ರನನ್ನು ಕಳೆದುಕೊಂಡ ತಂದೆತಾಯಿಗಳ ರೋಧನ ಮುಗಿಲು ಮುಟ್ಟಿತ್ತು. ಮೃತ ಯೋಧನ ಮಡದಿಯ ಅಳು ಕಂಡು ಎಲ್ಲರ ಕಣ್ಣುಗಳು ತೇವಗೊಂಡವು.

Share this article