ಹಾರ್ನಬಿಲ್ ಹಕ್ಕಿ ಹಬ್ಬದ ಸಮಾರೋಪ ಸಮಾರಂಭ
ಮನುಷ್ಯ ಇಂದು ಕ್ಷಣಿಕ ಸುಖಕ್ಕಾಗಿ, ಹಣದ ಆಸೆಗಾಗಿ ಕಾಡು, ಪ್ರಾಣಿಗಳನ್ನು ಹಾಳು ಮಾಡುತ್ತ ಮನುಕುಲಕ್ಕೆ ತೊಂದರೆ ತಂದೊಡ್ಡುತ್ತಿದ್ದಾನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕಳವಳ ವ್ಯಕ್ತಪಡಿಸಿದರು.
ನಗರದ ಹಾರ್ನಬಿಲ್ ಸಭಾಭವನದಲ್ಲಿ ನಡೆದ 2 ದಿನಗಳ ಹಾರ್ನಬಿಲ್ ಹಕ್ಕಿ ಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎರಡು ದಿನಗಳ ಈ ಹಾರ್ನಬಿಲ್ ಪಕ್ಷಿ ಹಬ್ಬದ ಕಾರ್ಯಕ್ರಮದಲ್ಲಿ ಮೊದಲ ದಿನದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಶ್ರೀ ಸುತ್ತೂರು ಮಠದ ಶ್ರೀಗಳ ಮೈಸೂರಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಕಾರಣ ಇಲ್ಲಿಯ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದ ಅವರು, ಕಳೆದ ೨೦೧೮ರಿಂದ ಹಾರ್ನಬಿಲ್ ಹಕ್ಕಿ ಹಬ್ಬವನ್ನು ಅರಣ್ಯ ಇಲಾಖೆಯವರು ಈ ವರೆಗೂ ನಿರಂತರವಾಗಿ ಆಯೋಜಿಸುತ್ತ ಬಂದಿದ್ದು, ಸ್ಥಳೀಯರು ಈ ಕಾರ್ಯಕ್ರಮಕ್ಕೆ ಸಹಕಾರಿಯಾಗಿದ್ದಾರೆ ಎಂದರು.
ವಿಧಾನಪರಿಷತ್ ಶಾಸಕ ಶಾಂತಾರಾಮ ಸಿದ್ದಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕೆನರಾ ಅರಣ್ಯ ವಲಯದ ಸಿಸಿಎಫ್ ಟಿ.ಹೀರಾಲಾಲ ಮಾತನಾಡಿ, ಪ್ರಪಂಚದಾದ್ಯಂತ ೫೭ ಪ್ರಭೇದದ ಹಾರ್ನಬಿಲ್ ಹಕ್ಕಿಗಳು ಇದ್ದು, ಭಾರತದಲ್ಲಿ ೯ ಪ್ರಭೇದದ, ಅದರಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಪ್ರಭೇದದ ಹಾರ್ನಬಿಲ್ ಹಕ್ಕಿಗಳು ಇವೆ. ಇದು ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯರಿಗೆ ಜೀವನೋಪಾಯದ ಅವಶ್ಯಕತೆಗಳನ್ನು ನೀಗಿಸಲು ಈ ಭಾಗದಲ್ಲಿ ಹಾರ್ನಬಿಲ್ ಇಕೋಟೂರಿಸಂಗೆ ಯೋಜನೆಯನ್ನು ಮಾಡಬಹುದಾಗಿದೆ. ಹಾರ್ನಬಿಲ್ ಹಕ್ಕಿಯ ಈ ಹಬ್ಬದಲ್ಲಿ ಹಾರ್ನಬಿಲ್ ಹಕ್ಕಿಯ ಕುರಿತು ೧೦೦ಕ್ಕೂ ಹೆಚ್ಚು ತಜ್ಞರು ಮತ್ತು ವಿಜ್ಞಾನಿಗಳು ತಮ್ಮ ವಿಷಯಗಳನ್ನು ಮಂಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ವೇದಿಕೆಯಲ್ಲಿ ಪಂಚಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಿಯಾಜ ಸಯ್ಯದ, ತಹಶೀಲ್ದಾರ ಶೈಲೇಶ ಪರಮಾನಂದ, ತಾಪಂ ಕಾರ್ಯನಿರ್ವಹಣಾಧಿಕಾರಿ ಟ.ಎಸ್. ಹಾದಿಮನಿ, ದಾಂಡೇಲಿ ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಮಾನ್ಯತಾ ವಾಸರೆ ಪ್ರಾರ್ಥನಾ ಗೀತೆ ಹಾಡಿದರು. ದಾಂಡೇಲಿ ಎಸಿಎಫ್ ಸಂತೋಷ ಚವ್ಹಾಣ ಸ್ವಾಗತಿಸಿದರು. ಶಿಕ್ಷಕಿ ಆಶಾ ದೇಶಭಂಡಾರಿ ನಿರೂಪಿಸಿದರು. ಕೊನೆಯಲ್ಲಿ ಆರ್.ಎಫ್.ಓ ವಿನಯ ಭಟ್ ವಂದಿಸಿದರು.