ರಾಜ್ಯ ಮಹಿಳಾ ನಿಲಯದಲ್ಲಿ ಮೊಳಗಿದ ಮಂತ್ರ ಮಾಂಗಲ್ಯ

KannadaprabhaNewsNetwork |  
Published : Feb 22, 2024, 01:51 AM IST
21ಕೆಡಿವಿಜಿ1-ದಾವಣಗೆರೆ ರಾಜ್ಯ ಮಹಿಳಾ ನಿಲಯದಲ್ಲಿ ಎಂ.ದಿವ್ಯಾ ಹಾಗೂ ಚಿತ್ರದುರ್ಗ ತಾ. ಮುದ್ದಾಪುರ ಗ್ರಾಮದ ಟಿ.ನಾಗರಾಜ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ಸಂದರ್ಭದಲ್ಲಿ ಡಿಸಿ, ಸಿಇಓ, ಎಸ್ಪಿ ಸಂವಿಧಾನ ಪ್ರಸ್ತಾವನೆಯ ಫೋಟೋ ಪ್ರೇಮ್‌ ನೀಡಿದರು. ..............21ಕೆಡಿವಿಜಿ2-ದಾವಣಗೆರೆ ರಾಜ್ಯ ಮಹಿಳಾ ನಿಲಯದಲ್ಲಿ ಎಂ.ದಿವ್ಯಾ ಹಾಗೂ ಚಿತ್ರದುರ್ಗ ತಾ. ಮುದ್ದಾಪುರ ಗ್ರಾಮದ ಟಿ.ನಾಗರಾಜ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ನವ ಜೋಡಿಗೆ ಡಿಸಿ, ಸಿಇಓ, ಎಸ್ಪಿ ಅಧಿಕಾರಿಗಳು ಶುಭಾರೈಸಿದರು. | Kannada Prabha

ಸಾರಾಂಶ

ದಾವಣಗೆರೆ ರಾಜ್ಯ ಮಹಿಳಾ ನಿಲಯದಲ್ಲಿ ಎಂ.ದಿವ್ಯಾ ಹಾಗೂ ಚಿತ್ರದುರ್ಗ ತಾ. ಮುದ್ದಾಪುರ ಗ್ರಾಮದ ಟಿ.ನಾಗರಾಜ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ನವ ಜೋಡಿಗೆ ಡಿಸಿ, ಸಿಇಓ, ಎಸ್ಪಿ ಅಧಿಕಾರಿಗಳು ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅನಾಥ ಯುವತಿಯರಿಗೆ ಬಾಳು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿರುವ ಇಲ್ಲಿನ ರಾಜ್ಯ ಮಹಿಳಾ ನಿಲಯವು ಇದೀಗ ಮತ್ತೊಬ್ಬ ಯುವತಿಗೆ ಮದುವೆ ಮಾಡುವ ಮೂಲಕ ಜಿಪಂ, ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗಳು ತವರು ಮನೆಯ ಜವಾಬ್ದಾರಿ ನಿರ್ವಹಿಸಿವೆ.

ನಗರದ ಶ್ರೀರಾಮ ನಗರದ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ಬೆಳಿಗ್ಗೆ ಎಂ.ದಿವ್ಯಾ ಮದುವೆಯು ಚಿತ್ರದುರ್ಗ ತಾ. ಮುದ್ದಾಪುರ ಗ್ರಾಮದ ಟಿ.ನಾಗರಾಜ ಅವರೊಂದಿಗೆ ರಾಷ್ಟ್ರಕವಿ ಕುವೆಂಪುರ ಮಂತ್ರ ಮಾಂಗಲ್ಯ ಧಾರಣೆಯಂತೆ ನೆರವೇರಿತು.

ರಾಜ್ಯ ಮಹಿಳಾ ನಿಲಯದಲ್ಲಿ ನಿನ್ನೆಯಿಂದಲೇ ಮದುವೆಗೆ ಸಿದ್ಧತೆ ನಡೆದಿತ್ತಲ್ಲದೇ, ಇಂದು ಇಡೀ ದಿನ ಸಂಭ್ರಮ ಮನೆ ಮಾಡಿತ್ತು. ಅತ್ಯಂತ ಸರಳ, ಕ್ರಮಬದ್ಧವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ವಧುವಿನ ತವರು ಮನೆಯವರಂತೆ ನಿಂತು, ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿ, ನವ ಜೋಡಿ ಗಳಾದ ನಿಲಯದ ಎಂ.ದಿವ್ಯಾ ಹಾಗೂ ಮುದ್ದಾಪುರದ ಟಿ.ನಾಗರಾಜಗೆ ಆದರ್ಶ ದಂಪತಿಗಳಾಗಿ ಬಾಳುವಂತೆ ಶುಭ ಹಾರೈಸಿ, ಆಶೀರ್ವದಿಸಿದರು.

ಇದೇ ವೇಳೆ ದಿವ್ಯಾ-ನಾಗರಾಜ ನವ ದಂಪತಿಗಳಿಗೆ ಸಂವಿಧಾನ ಪ್ರಸ್ತಾವನೆಯುಳ್ಳ ಫೋಟೋ ಫ್ರೇಮ್‌ ನೀಡುವ ಶುಭ ಹಾರೈಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ, ರಾಷ್ಟ್ರಕವಿ ಕುವೆಂಪುರವರು ಹಾಕಿಕೊಟ್ಟ ಸರಳವಾದ ಮಂತ್ರ ಮಾಂಗಲ್ಯದಲ್ಲಿ ನವ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಬಹಳ ವಿಶೇಷವಾಗಿದ್ದು, ಇಡೀ ಸಮಾಜಕ್ಕೆ ಮಾದರಿಯಾಗಿದೆ. ವಧುವಿನ ಕಡೆಯಿಂದ ನಮ್ಮ ಅಧಿಕಾರಿಗಳೇ ತವರು ಮನೆಯವರಾಗಿ ನಿಂತಿದ್ದಾರೆ. ವರನ ಕಡೆಯಿಂದ ನಾಗರಾಜರ ಅಕ್ಕ, ಭಾವಂದಿರುವ ಪಾಲ್ಗೊಂಡು, ಮದುವೆಗೆ ಸಾಕ್ಷೀಕರಿಸಿದ್ದಾರೆ ಎಂದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಸೈಯ್ಯದ್‌ ಆಫ್ರೀನ್ ಭಾನು ಎಸ್.ಬಳ್ಳಾರಿ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ನವ ಜೋಡಿಗೆ ಶುಭ ಹಾರೈಸಿದರು.

ಕಚೇರ ಅಧೀಕ್ಷಕ ಮಲ್ಲಿಕಾರ್ಜುನ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಶಕುಂತಲಾ ಬಿ.ಕೋಳೂರ ಇತರರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು. ದಾವಣಗೆರೆ ಶ್ರೀ ರಾಮ ನಗರದ ರಾಜ್ಯ ಮಹಿಳಾ ನಿಲಯದಲ್ಲಿ ಕಳೆದ 5 ವರ್ಷದಿಂದ ಎಂ.ದಿವ್ಯಾ ಆಶ್ರಯ ಪಡೆದಿದ್ದಾರೆ. ನಿಲಯದ ಯುವತಿ ದಿವ್ಯಾಗೆ ಚಿತ್ರದುರ್ಗ ತಾ. ಮುದ್ದಾ ಪುರ ಗ್ರಾಮದ ನಾಗರಾಜ ಕೈಹಿಡಿಯುವ ಮೂಲಕ ಹೊಸ ಬಾಳು ನೀಡಿದ್ದಾರೆ.

ನವ ವಧು ದಿವ್ಯಾ, ವರ ನಾಗರಾಜ ಸಂಪ್ರಾದಾಯವನ್ನು ಕೈಬಿಟ್ಟು, ಪುರೋಹಿತರನ್ನು ಕರೆಸದೇ ವಿಶೇಷ ರೀತಿಯಲ್ಲಿ ಸರಳ ವಿಧಾನದಲ್ಲಿ ಮಂತ್ರ ಮಾಂಗಲ್ಯದ ಮೂಲಕ ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಕಾಲಿಟ್ಟರು. ಚಿತ್ರದುರ್ಗ ಜಿಲ್ಲೆ ಮುದ್ದಾಪುರ ಗ್ರಾಮದ ವಾಸಿಯಾದ ಟಿ.ನಾಗರಾಜ ವ್ಯವಸಾಯದ ಕೌಟುಂಬಿಕ ಹಿನ್ನೆಲೆಯವರು. ನಾಗರಾಜ ತಂದೆ ದಿವಂಗ ತಿಮ್ಮಣ್ಣ ರೈತರಾಗಿದ್ದು, ಆರ್ಥಿಕವಾಗಿ ಸದೃಢವಾಗಿರುವ ಕುಟುಂಬದವರಾಗಿದ್ದಾರೆ. ನಾಗರಾಜಗೆ ತಂದೆ, ತಾಯಿ ಇಬ್ಬರೂ ಇಲ್ಲ. ತನ್ನ ಅಜ್ಜನ ಜೊತೆ ನಾಗರಾಜ ವಾಸವಾಗಿದ್ದು, ಸಹೋದರಿಯರು ತಾವೇ ಮುಂದೆ ನಿಂತು ಸಹೋದರನ ಮದುವೆ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ