ನೀರಿಗೆ ಆಗ್ರಹಿಸಿ ಗುಡದೂರು ಗ್ರಾಪಂಗೆ ಮುತ್ತಿಗೆ, ಆಕ್ರೋಶ

KannadaprabhaNewsNetwork |  
Published : Feb 22, 2024, 01:51 AM IST
21-ಎಂ ಎಸ್ ಕೆ -01: | Kannada Prabha

ಸಾರಾಂಶ

ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯದ ವಿರುದ್ಧ ಹಸಮಕಲ್‌ ಗ್ರಾಮಸ್ಥರು ಆರೋಪ. ಕಳೆದ 15 ದಿನಗಳಿಂದ ಜನ-ಜಾನುವಾರುಗಳು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ತಾಲೂಕಿನ ಗುಡದೂರು ಗ್ರಾಪಂ ವ್ಯಾಪ್ತಿಯ ಹಸಮಕಲ್ ಗ್ರಾಮಕ್ಕೆ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ನೀರಿಗಾಗಿ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಅತಂಕಲ್ ಗ್ರಾಮದಲ್ಲಿ ಸರ್ಕಾರದ ಮೂರು ಬೋರ್ವೆಲ್, ಒಂದು ಬಾವಿ ಇದ್ದು, ಸ್ವಯಂಪ್ರೇರಿತವಾಗಿ ನಾಲ್ವರು ರೈತರು ತಮ್ಮ ಜಮೀನಿನಲ್ಲಿರುವ ಬೋರ್ವೆಲ್ ನೀರು ಕೊಡುವುದಾಗಿ ಮುಂದೆ ಬಂದಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಆರೋಪಿಸಿದರು.

ಕಳೆದ ಹತ್ತು ದಿನದಿಂದ ಗ್ರಾಮಸ್ಥರು ನಿರಂತರ ಮೌಖಿಕವಾಗಿ ಪಿಡಿಒಗೆ ಮನವಿ ಮಾಡುತ್ತಾ ಬಂದರೂ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಅವರು, ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಅಗತ್ಯ ಜಲಮೂಲಗಳಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆರೆ ಖಾಲಿಯಾಗಿದೆ. ನೀರು ಬಿಡಲು ಆಗುವುದಿಲ್ಲ ಎಂದು ಹೇಳುತ್ತಿದ್ದು, ಅಲ್ಲದೇ ಬೋರ್ವೆಲ್‌ಗೆ ಪೈಪ್ಲೈನ್ ಮಾಡುವುದು ಪಂಚಾಯಿತಿ ಕೆಲಸ ಅಲ್ಲ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಅರೆಬರೆ ಕೆಲಸ ಮಾಡಿ ಕೈಬಿಟ್ಟಿದ್ದಾರೆ. ನಾನು ಏನು ಮಾಡಲು ಆಗುವುದಿಲ್ಲ, ಜಿಪಂನವರು ಪೈಪ್ಲೈನ್ ಮಾಡಿದರೆ ಮಾತ್ರ ನೀರು ಪೂರೈಕೆ ಮಾಡಲಾಗುವುದು ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 15 ದಿನಗಳಿಂದ ಜನ-ಜಾನುವಾರುಗಳು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ. ಎರಡ್ಮೂರು ದಿನದೊಳಗೆ ನೀರು ಪೂರೈಕೆ ಮಾಡದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ ಎಂದು ಗ್ರಾಮಸ್ಥರು ದೂರಿದರು.

ನೀರಿನ ಸಮಸ್ಯೆ ಉಲ್ಬಣಿಸುವಲ್ಲಿ ಗ್ರಾಪಂ ಪಿಡಿಒ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯಿದ್ದು, ಎರಡು ದಿನದಲ್ಲಿ ಪರ್ಯಾಯವಾಗಿ ನೀರಿನ ಸೌಕರ್ಯ ಕಲ್ಪಿಸದಿದ್ದರೆ ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ ರಸ್ತಾ ರೋಖ ಚಳವಳಿ ನಡೆಸಲಾಗುವುದು. ಮುಂದಿನ ಯಾವುದೇ ರೀತಿಯ ಸಮಸ್ಯೆಗಳಿಗೆ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾಡಳಿತವೇ ಹೊಣೆಯಾಗಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಲ್ಲಪ್ಪ ಪೂಜಾರಿ, ಸಿದ್ದಮ್ಮ ಭೋವಿ, ಮುಖಂಡರಾದ ವೆಂಕಟೇಶ್ ದುಗನೂರು, ಪಂಪಯ್ಯಸ್ವಾಮಿ ಹಿರೇಮಠ, ಶಿವರಾಯಪ್ಪ ತಳವಾರ, ಅಮರೇಗೌಡ ಆನಂದಗಲ್, ಚೆನ್ನಬಸಮ್ಮ ದುಗನೂರು, ರುದ್ರಪ್ಪ ಅಂಗಡಿ, ಸಂಗಮ್ಮ ಬೃಹನ್ಮಠ, ಶರಣಬಸವ ಮಾಲಿ ಪಾಟೀಲ್, ಶಂಭುಲಿಂಗಪ್ಪ , ಬಸವರಾಜ, ಪ್ರಮೋದ್ ದುಗನೂರು ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ