ಕನ್ನಡಪ್ರಭ ವಾರ್ತೆ ನಾಗಮಂಗಲ
ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಬಿಂಡಿಗನವಿಲೆ ರಸ್ತೆಯಲ್ಲಿರುವ ಕೃಷ್ಣಪ್ಪ ಸಮದಾಯ ಭವನದಲ್ಲಿ ಉಭಯ ಕೋಮಿನವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.
ಈ ವಿಚಾರ ಮುಂದುವರೆಸಬೇಡಿ: ಯಾವುದೋ ಕೆಟ್ಟ ಘಳಿಗೆ, ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರಂತಿದ್ದ ನಾಗಮಂಗಲದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಂಬಲಸಾಧ್ಯವಾದ ಘಟನೆ ನಡೆದುಹೋಗಿದೆ. ಇನ್ನು ಮುಂದೆ ಈ ವಿಚಾರವನ್ನು ರಾಜಕಾರಣಿಗಳು, ಸಂಘಟನೆಗಳು ಮುಂದುವರೆಸುವುದು ಬೇಡ, ಇದನ್ನು ಇಲ್ಲಿಗೇ ನಿಲ್ಲಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರ ರೀತಿ ಕುಳಿತಿದ್ದರು. ಈ ಕ್ಷಣದಿಂದ ನಾವು ಒಟ್ಟಾಗಿರುತ್ತೇವೆ ಎಂದಿದ್ದಾರೆ. ಗಣಪತಿ ಹಬ್ಬವನ್ನೂ ಮಾಡುತ್ತೇವೆ. ಮುಸ್ಲಿಂ ಹಬ್ಬಗಳಿಗೂ ಸಹಕಾರ ಕೋರುವುದಾಗಿ ಹೇಳಿದ್ದಾರೆ. ಸೋಮವಾರ ಮುಸ್ಲಿಮರ ಹಬ್ಬ ಈದ್ ಮಿಲಾದ್ ಇರುವ ಕಾರಣ ಗಣಪತಿ ವಿಸರ್ಜನೆ ಬೇಡ ಎಂದು ಹೇಳಿದ್ದೇವೆ. ಅದಕ್ಕೆ ಸಹಮತ ವ್ಯಕ್ತವಾಗಿದೆ ಎಂದು ತಿಳಿಸಿದರು.
ಗಲಭೆಯಿಂದ ಎರಡೂ ಕಡೆಯವರಿಗೆ ನಷ್ಟವಾಗಿರುವ ಪ್ರಮಾಣದ ವರದಿ ಸಿದ್ದವಾಗಲಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕರ ಬಿಡುಗಡೆಗೆ ಮನವಿ ಮಾಡಿದ್ದಾರೆ. ದೋಷಾರೋಪಣಾ ಪಟ್ಟಿಯಲ್ಲಿ ಅಮಾಯಕರನ್ನು ಕೈಬಿಡಲಾಗುವುದು. ಇದರ ಜೊತೆಗೆ ಸಾರ್ವಜನಿಕರೂ ಕೆಲವೊಂದು ಸಲಹೆಗಳನ್ನೂ ನೀಡಿದ್ದು ಅದನ್ನೂ ಸ್ವೀಕರಿಸಿದ್ದೇವೆ ಎಂದು ನುಡಿದರು.
ಅಲ್ಲಿ ಮತ್ತೆ ಶಾಂತಿ ಸ್ಥಾಪನೆ ಆಗಬೇಕು. ನಾಳೆಯಿಂದ ಗಣಪತಿ ಉತ್ಸವ ಆರಂಭವಾಗಲಿದೆ. ಈ ಘಟನೆ ಇಲ್ಲಿಗೇ ನಿಲ್ಲಲು ಎಲ್ಲರ ಸಹಕಾರ ಅಗತ್ಯವಿದೆ. ನಾಗಮಂಗಲ ಯಥಾಸ್ಥಿತಿಗೆ ತಲುಪಿರುವ ಸಂದೇಶವನ್ನು ರಾಜ್ಯಕ್ಕೆ ಕೊಡಬೇಕು ಎಂದು ಮನವಿ ಮಾಡಿದರು.
ಉಭಯ ಕೋಮಿನವರ ನಡುವೆ ಸಮನ್ವಯ ಸಮಿತಿ ರಚನೆಗೆ ಸಲಹೆ: ನಾಗಮಂಗಲದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ- ಮುಸ್ಲಿಮರ ನಡುವೆ ಗಲಭೆ ಸಂಭವಿಸದಂತೆ ತಡೆಯಲು ಎರಡೂ ಕೋಮಿನವರ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕೆಂಬ ಸಲಹೆ ಸಾರ್ವಜನಿಕರಿಂದ ಶಾಂತಿಸಭೆಯಲ್ಲಿ ವ್ಯಕ್ತವಾಯಿತು.
ಹಬ್ಬ, ಮೆರವಣಿಗೆ ನಡೆಸುವುದಕ್ಕೂ ಮುನ್ನ ಎರಡೂ ಕಡೆಯ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರೆ ಅಶಾಂತಿ ಉಂಟಾಗುವ ಘಟನೆಗಳನ್ನು ತಡೆಯಬಹುದು. ಎರಡೂ ಧರ್ಮದವರು ಪರಸ್ಪರ ಅನ್ಯೋನ್ಯತೆಯಿಂದ ಮಾದರಿಯಾಗಿ ಜೀವನ ನಡೆಸಬಹುದೆಂಬ ಸಲಹೆ ಕೇಳಿಬಂದಿತು.