ಕನ್ನಡಪ್ರಭ ವಾರ್ತೆ ಭಾರತೀನಗರ
ನಮ್ಮ ಕುಟುಂಬದವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿ ಜನರ ಸೇವೆ ಮಾಡಿದವರಲ್ಲ ಎಂದು ಮುಖಂಡ ಆಶಯ್ ಮಧು ತಿಳಿಸಿದರು.ಗುರುದೇವರಹಳ್ಳಿ ಕಾಲೋನಿಯಲ್ಲಿ ಆಯೋಜಿಸಿದ್ದ ತವರೂರಿನ ಸಿರಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕಾರಣ ಮತ್ತು ಜನರ ಸೇವೆ ಸ್ವಾರ್ಥಕ್ಕಾಗಿ ಮಾಡಬಾರದು ಎಂದು ನಮ್ಮ ತಾತ ತಿಳಿಸಿ ಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ರಾಜಕಾರಣ ಎಂದೂ ನಿಂತ ನೀರಲ್ಲ. ನಾವು ಗೆದ್ದೆವು ಎಂದು ಬೀಗುವುದಾಗಲಿ, ಬಿದ್ದೆವು ಎಂದು ಕೈಕಟ್ಟಿ ಕುಳಿತುಕೊಳ್ಳುವುದಾಗಲಿ ನಮ್ಮಲ್ಲಿಲ್ಲ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಭರತೇಶ್ ಮಾತನಾಡಿ, ಕಳೆದ 2 ತಿಂಗಳಿಂದ ವಿಸಿ ನಾಲೆಗೆ ನೀರು ಬಿಟ್ಟರೂ ಸಹ ಕೊನೆ ಭಾಗದ ಕಾಲುವೆಗಳಿಗೆ ನೀರು ತಲುಪಿಲ್ಲ. ಅದೇ ದಿ.ಜಿ.ಮಾದೇಗೌಡರು ನಮ್ಮೊಂದಿಗೆ ಇದ್ದಿದ್ದರೆ ಹೋರಾಟ ಮತ್ತು ಅವರ ಮಾತಿನ ಚಾಟಿಯಿಂದ ಎರಡೇ ವಾರದಲ್ಲಿ ಕೊನೆ ಭಾಗದವರೆಗೂ ನೀರು ತಲುಪುತ್ತಿತ್ತು ಎಂದರು.ಪ್ರಸ್ತುತ ಹೆಸರೇ ಇಲ್ಲದವರು ರಾಜಕಾರಣ ಮಾಡುತ್ತಿರುವಾಗ ನಿಸ್ವಾರ್ಥ ರಾಜಕಾರಣ ಮಾಡಿ ರಾಜ್ಯದ ಮೂಲೆಮೂಲೆಗೂ ಹೆಸರಾಗಿರುವ ಜಿ.ಮಾದೇಗೌಡ ಕುಟುಂಬ ನಿರಂತರವಾಗಿ ಜನಸೇವೆಯಲ್ಲಿ ತೊಡಗಿದೆ ಎಂದು ಹೇಳಿದರು.
ಆಯೋಜಕ ಕೆ.ಪುಟ್ಟಸ್ವಾಮಿ ಮಾತನಾಡಿ, ಜಿ.ಮಾದೇಗೌಡರ ಗತ್ತು ಮಂಡ್ಯದಿಂದ ದೆಹಲಿಯವರೆಗೂ ಗೊತ್ತಿದೆ. ಇದರಿಂದ ನಮ್ಮ ಗ್ರಾಮ ಗುರುದೇವರಹಳ್ಳಿ ಎಂಬ ಹೆಸರು ರಾಜ್ಯದ ಉದ್ದಗಲಕ್ಕೂ ಹೆಸರುವಾಸಿಯಾಗಿದೆ. ಮುಂದಿನ ದಿನಗಳಲ್ಲಿ ಮಧು ಜಿ ಮಾದೇಗೌಡ ಮತ್ತು ಆಶಯ್ ಅವರನ್ನು ನಾವು ಉತ್ತಮ ಸ್ಥಾನಮಾನಗಳಲ್ಲಿ ಕೊಂಡ್ಯೊಯಲು ಶ್ರಮಿಸೋಣ ಎಂದು ತಿಳಿಸಿದರು.ಆಶಯ್ ಮಧು ಅವರನ್ನು ತೆರೆದ ವಾಹನದಲ್ಲಿ ಪೂರ್ಣಕುಂಭದೊಂದಿಗೆ ತಮಟೆ ನಗಾರಿಗಳ ಜೊತೆ ಮೆರವಣಿಗೆ ನಡೆಸಿ ಗ್ರಾಮಕ್ಕೆ ಬರಮಾಡಿಕೊಂಡು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್‌ರನ್ನು ಗೌರವಿಸಲಾಯಿತು.
ಮುಖಂಡರಾದ ಪುಟ್ಟೇಗೌಡ, ಪುಟ್ಟಸ್ವಾಮಿ, ಈರೇಗೌಡ, ಬೋರೇಗೌಡ, ಸುನಿಲ್, ಕಾರ್ತಿಕ್, ಅಂದಾನಿ ಹಲವರಿದ್ದರು.