ಆಧುನಿಕ ಪದ್ಧತಿಯಿಂದ ಕೃಷಿ ಸವಾಲು ಎದುರಿಸಲು ಸಾಧ್ಯ: ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ

KannadaprabhaNewsNetwork |  
Published : Sep 15, 2024, 01:47 AM IST
ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಅಡಕೆಯ ಜತೆಯಲ್ಲಿ ಬಾಳೆ, ತೆಂಗು, ಕಾಳುಮೆಣಸು, ಸೇರಿದಂತೆ ಬದಲಿ ಬೆಳೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಮುಂದಿನ ಸವಾಲನ್ನು ಎದುರಿಸಬಹುದು ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ ಹೇಳಿದರು.

ಯಲ್ಲಾಪುರ: ಆಧುನಿಕ ಕಾಲಘಟ್ಟದಲ್ಲಿದ್ದ ನಮಗೆ ಕೃಷಿಗೆ ಹಲವು ಸವಾಲುಗಳು ಎದುರಾಗುತ್ತಿವೆ. ಹೊಸ ಹೊಸ ಆವಿಷ್ಕಾರದೊಂದಿಗೆ ಆಧುನಿಕ ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ನಾವು ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ ಹೇಳಿದರು.

ಅಡಿಕೆ ಭವನದಲ್ಲಿ ಶುಕ್ರವಾರ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಸಂಸ್ಥೆ ಕೃಷಿಗೆ ಪೂರಕವಾದ ಎಲ್ಲ ಉಪಕರಣಗಳನ್ನು ಒದಗಿಸುತ್ತ ಬಂದಿದೆ. ಅಡಕೆಯ ಜತೆಯಲ್ಲಿ ಬಾಳೆ, ತೆಂಗು, ಕಾಳುಮೆಣಸು, ಸೇರಿದಂತೆ ಬದಲಿ ಬೆಳೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಮುಂದಿನ ಸವಾಲನ್ನು ಎದುರಿಸಬಹುದು. ತಮ್ಮ ಎಲ್ಲ ಸಲಹೆ, ಸೂಚನೆಗಳನ್ನು ಜಾರಿಗೆ ತರಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

ತಾಲೂಕಿನ ರೈತರ ಹಿತ ಗಮನಿಸಿ ನಮ್ಮ ಈ ಸಂಘವನ್ನು ಸ್ಥಾಪಿಸಲಾಗಿದೆ. ಅದಕ್ಕೆ ಪೂರಕವಾಗಿ ರೈತರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆ ಹಿನ್ನೆಲೆಯಲ್ಲೇ ನಮ್ಮ ಸಂಘ ಇನ್ನೂ ಎತ್ತರಕ್ಕೆ ಬೆಳೆಯಲು ಅವಕಾಶವಾಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿದ ವಿ.ಎನ್. ಭಟ್ಟ ಏಕಾನ ಮಾತನಾಡಿ, ರೈತ ತನ್ನ ಕೃಷಿ ಕ್ಷೇತ್ರದಲ್ಲಿ ದಿನಕ್ಕೆ ೧೩ ಗಂಟೆಯಾದರೂ ಕೆಲಸ ಮಾಡಿದಾಗ ಮಾತ್ರ ಉತ್ತಮ ಆದಾಯ ಗಳಿಸಬಹುದು. ಜತೆಯಲ್ಲಿ ತಮ್ಮ ಮಕ್ಕಳನ್ನು ಕೂಡಾ ಕೃಷಿಯಲ್ಲಿ ತೊಡಗಿಸಿಕೊಂಡು, ಕೃಷಿಯ ಮಹತ್ವ ತಿಳಿಸಬೇಕು. ಜತೆಗೆ ಸಾವಯವ ಕೃಷಿಗೆ ಪ್ರಾಧಾನ್ಯ ನೀಡಿ, ರಾಸಾಯನಿಕ ಕೃಷಿಯಿಂದ ದೂರವಾಗಬೇಕು ಎಂದರು.

ಇನ್ನೊಬ್ಬ ಸನ್ಮಾನಿತ ಸದಾಶಿವ ಕಮಲಾಕರ ದೇಸಾಯಿ ಸಾಂದರ್ಭಿಕ ಮಾತನಾಡಿದರು. ನಿರ್ದೇಶಕ ದತ್ತಾತ್ರೇಯ ಬೋಳಗುಡ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಣ್ಣಪ್ಪ ಭಾಗ್ವತ ನಿರ್ವಹಿಸಿದರು. ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೇಪಾಲ ವಂದಿಸಿದರು. ಲೆಕ್ಕ ಪರಿಶೋಧಕ ಎಸ್.ಜಿ. ಹೆಗಡೆ ಬೆದೆಹಕ್ಕಲು, ಪ್ರಧಾನ ವ್ಯವಸ್ಥಾಪಕ ವಿನಾಯಕ ಹೆಗಡೆ ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.ರೈತ ಸಾಧಕ, ಉತ್ತಮ ಗ್ರಾಹಕರಿಗೆ ಸನ್ಮಾನ: ಪಟ್ಟಣದ ಅಡಿಕೆ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯ ೨೪ನೆಯ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ವಿವಿಧ ಕ್ಷೇತ್ರದ ರೈತ ಸಾಧಕ ಮತ್ತು ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ವಿಶ್ವೇಶ್ವರ ಎನ್. ಭಟ್ಟ ಏಕಾನ, ವೆಂಕಟರಮಣ ಎಸ್. ಭಟ್ಟ ಕಾಶಿಮನೆ, ಶಾಂತಾರಾಮ ಎಸ್. ಹೆಗಡೆ ಬಾಳೆಹಳ್ಳಿ, ರವೀಂದ್ರ ಜಿ. ಭಟ್ಟ ಕಾನಗೋಡು, ಅಕ್ಷಯ ಗಾಂವ್ಕರ ನೆಲೆಪಾಲ, ಮಹೇಶ ವಿ. ಹೆಗಡೆ ಹೆಮ್ಮಾಡಿ (ಬಾಳೆಕೊಪ್ಪ), ಸದಾಶಿವ ಕೆ. ದೇಸಾಯಿ ಗುಂದ, ಗಂಗಾ ಎನ್. ಭಟ್ಟ ತಟಗಾರ, ರಾಮಚಂದ್ರ ಎನ್. ಹೆಗಡೆ ಕಂಚನಳ್ಳಿ, ಛಾಯಪ್ಪ ಎಂ. ಕೆಂಚನ್ನವರ ಇಂದೂರು, ವೆಂಕಟರಮಣ ಎಸ್. ಮರಾಠಿ, ಗಜಾನನ ವಿ. ಭಟ್ಟ ಕುಟ್ರೇಬೈಲ್ ಮುಂತಾದ ೧೨ ಸಾಧಕರನ್ನು ಸಭೆಯಲ್ಲಿ ಸಂಸ್ಥೆಯ ಪರವಾಗಿ ಗೌರವಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ