ಮಂತ್ರಾಲಯ: ರಾಯರಿಗೆ ಶ್ರೀರಂಗಂನ ಶೇಷವಸ್ತ್ರ

KannadaprabhaNewsNetwork |  
Published : Aug 11, 2025, 12:31 AM IST
10ಕೆಪಿಆರ್ಸಿಆರ್02 | Kannada Prabha

ಸಾರಾಂಶ

ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಪ್ರಯುಕ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮ, ಸಡಗರದಿಂದ ನಡೆದವು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಪ್ರಯುಕ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮ, ಸಡಗರದಿಂದ ನಡೆದವು.

ಸಪ್ತರಾತ್ರೋತ್ಸವದ ಮೂರನೇ ದಿನವಾದ ಭಾನುವಾರ, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಪ್ರಾತಃಕಾಲದಲ್ಲಿ ನೈರ್ಮಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕವನ್ನು ನಡೆಸಲಾಯಿತು. ಬೆಳಗ್ಗೆ ವೇದ-ಮಂತ್ರಗಳ ಪಾರಾಯಣ, ಬಳಿಕ ಬೆಂಗಳೂರಿನ ವಿದ್ವಾನ್ ಮದನೂರ ಪವಮನಾಚಾರ್ಯ ಅವರಿಂದ ಪ್ರವಚನಗಳು ನಡೆದವು.ಶ್ರೀರಂಗಂನಿಂದ ಬಂದ ಶೇಷವಸ್ತ್ರ:

ಪ್ರತಿವರ್ಷದಂತೆ ಗುರುರಾಯರ ಪೂರ್ವಾರಾಧನೆ ಅಂಗವಾಗಿ ತಮಿಳುನಾಡು ರಾಜ್ಯದ ತಿರಚಿಯ ಶ್ರೀರಂಗಂನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ವಸ್ತ್ರರೂಪದಲ್ಲಿ ತರಲಾಗಿದ್ದ ಶೇಷವಸ್ತ್ರ ಪ್ರಸಾದವನ್ನು ಶ್ರೀಗಳು ಸ್ವಾಗತಿಸಿದರು. ಶೇಷವಸ್ತ್ರ ಪ್ರಸಾದವನ್ನು ಮೆರವಣಿಗೆಯಲ್ಲಿ ತಂದು, ಮೂಲಬೃಂದಾವನದ ಮುಂದಿರಿಸಿ, ಮಂಗಳಾರತಿ ಮಾಡಿ, ರಾಯರಿಗೆ ಸಮರ್ಪಿಸಿದರು. ನಂತರ, ಪ್ರಾಧಿಕಾರದ ವೇದಿಕೆಯಲ್ಲಿ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.

ಪ್ರತಿ ವರ್ಷ ರಾಯರ ಆರಾಧನಾ ಸಮಯದಲ್ಲಿ ಟಿಟಿಡಿ, ಶ್ರೀರಂಗ, ಅಹೋಬಿಲಂ ಹಾಗೂ ಕಾಂಚಿಪುರಂ ಕ್ಷೇತ್ರಗಳಿಂದ ಮಠಕ್ಕೆ ಬರುವ ವಸ್ತ್ರಪ್ರಸಾದವನ್ನು ಗುರುರಾಯರಿಗೆ ಸಮರ್ಪಿಸುವ ಸಂಪ್ರದಾಯ ಹಾಕಿಕೊಳ್ಳಲಾಗಿದೆ. ಈ ಮುಖಾಂತರ ಗುರುಗಳ ಹಾಗೂ ಭಗವಂತನ ಅನುಗ್ರಹ ಎಲ್ಲ ಭಕ್ತರಿಗೂ ದೊರೆಯಲಿ ಎಂದು ಶುಭಕೋರಿದರು.

ಈ ವೇಳೆ ಶ್ರೀರಂಗಂ ಕ್ಷೇತ್ರದಿಂದ ಆಗಮಿಸಿದ್ದ ಪ್ರಧಾನ ಅರ್ಚಕ ಸುಂದರ ಭಟ್ಟಾಚಾರ್ಯ ಪಂಡಿತರು, ಅಧಿಕಾರಿ ವರ್ಗದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಶ್ರೀಗಳಿಂದ ಸಂಸ್ಥಾನ ಪೂಜೆ:

ನಂತರ, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಶ್ರೀಮೂಲ ರಘುಪತಿ ವೇದವ್ಯಾಸದೇವರಿಗೆ ಸಂಸ್ಥಾನ ಪೂಜೆ, ಅಲಂಕಾರ ಸಮರ್ಪಣ ಹಾಗೂ ಹಸ್ತೋದಕ, ಮಹಾಮಂಗಳಾರತಿ ನೆರವೇರಿಸಿದರು. ಪೂರ್ವಾರಾಧನೆ ನಿಮಿತ್ತ ವಿಶೇಷವಾಗಿ ಅಲಂಕಾರಗೊಂಡಿದ್ದ ರಾಯರ ಮೂಲಬೃಂದಾವನಕ್ಕೆ ಮಹಾಮಂಗಳಾರತಿ ಸೇವೆಗೈದರು. ಸಂಜೆ ಹಗಲು ದೀವಟಿಗೆ, ಮಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಾಚನ ಮತ್ತು ಪ್ರಾಕಾರದಲ್ಲಿ ರಜತಸಿಂಹ ವಾಹನೋತ್ಸವಗಳು ಅದ್ದೂರಿಯಾಗಿ ಜರುಗಿದವು.

ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದಾಚಾರ್, ರಾಜ್ಯ ಸರ್ಕಾರದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ
ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ