ನಾಳೆಯಿಂದ ಮಂತ್ರವಾಡಿ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jan 17, 2026, 03:15 AM IST
16ಎಸ್‌ವಿಆರ್‌01 | Kannada Prabha

ಸಾರಾಂಶ

ಸವಣೂರು ತಾಲೂಕಿನ ಮಂತ್ರವಾಡಿ ಗ್ರಾಮದ ಕೆಂಜಡೇಶ್ವರ ಶಿವಾಚಾರ್ಯ ಸ್ವಾಮಿಗಳವರ ಪುಣ್ಯಾರಾಧನೆ ಹಾಗೂ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಜ.18ರಿಂದ 20ರ ವರೆಗೆ ಜರುಗಲಿದೆ. ಕಾರ್ಯಕ್ರಮದ ನೇತೃತ್ವವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಸವಣೂರು: ತಾಲೂಕಿನ ಮಂತ್ರವಾಡಿ ಗ್ರಾಮದ ಕೆಂಜಡೇಶ್ವರ ಶಿವಾಚಾರ್ಯ ಸ್ವಾಮಿಗಳವರ ಪುಣ್ಯಾರಾಧನೆ ಹಾಗೂ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಜ.18ರಿಂದ 20ರ ವರೆಗೆ ಜರುಗಲಿದೆ. ಕಾರ್ಯಕ್ರಮದ ನೇತೃತ್ವವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.ಐತಿಹಾಸಿಕ ಸುಕ್ಷೇತ್ರವಾದ ಮಂತ್ರವಾಡಿ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ದೇವಸ್ಥಾನ ಪ್ರಖ್ಯಾತಿಯಾಗಿದೆ. ಕಳೆದ ಒಂದು ಶತಮಾನದ ಹಿಂದೆ ಸಾವಮ್ಮ ಇವರ ಉದರದಿಂದ ಜನಿಸಿದ ಶ್ರೀ ಕೆಂಜಡೇಶ್ವರರು ಮುಂದೆ ತಮ್ಮ ಬಾಲ್ಯಾವಸ್ಥೆಯನ್ನು ಮುಕ್ತಾಯಗೊಳಿಸಿ ಗ್ರಾಮದಲ್ಲಿದ್ದ ಅಂದಿನ ಪ್ರಮುಖರ ಸಹಾಯದೊಂದಿಗೆ ಮುಂದುವರೆದು ಸ್ವಶಿಕ್ಷಣ ಪಡೆದುಕೊಳ್ಳುವ ಮೂಲಕ ಬೆಟ್ಟದ ದೇವಸ್ಥಾನದಲ್ಲಿ ಮಠವನ್ನು ನಿರ್ಮಿಸಬೇಕೆಂದು ಸಂಕಲ್ಪ ಕೈಗೊಂಡು ತಮ್ಮ ಕಾರ್ಯ ಯೋಜನೆಗಳನ್ನು ಮುಂದುವರೆಸಿರುವುದು ಇತಿಹಾಸದಲ್ಲಿ ದಾಖಲೆ ಇದೆ. ಬೆಟ್ಟಕ್ಕೆ ಬರುವ ಭಕ್ತರ ಆಶೋತ್ತರಗಳನ್ನು ಸಮನ್ವಯ ಭಾವನೆಯಿಂದ ಸ್ವೀಕರಿಸಿ ತಕ್ಷಣ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿರುವುದು ಪವಾಡ ಸದೃಶವಾಗಿದೆ. ಇವರ ಮಹಿಮೆಗಳಿಗೆ ಮೊರೆ ಹೋದ ಅಸಂಖ್ಯಾತ ಭಕ್ತರು ಸೇರಿಕೊಂಡು ಶ್ರೀ ರೇವಣಸಿದ್ಧೇಶ್ವರ ಮಹಾಸಂಸ್ಥಾನ ಮಠ ಎಂದು ಸ್ಥಾಪನೆ ಮಾಡಿ ಕೆಂಜಡೇಶ್ವರ ಶಿವಾಚಾರ್ಯ ಸ್ವಾಮಿಗಳೆಂದು ಘೋಷಣೆ ಮಾಡುವ ಮೂಲಕ ಸ್ವಾಮಿಗಳವರ ಕಾರ್ಯಗಳಿಗೆ ಚಾಲನೆ ಕೊಟ್ಟಿರುವದು ಇತಿಹಾಸ ಪುಟಗಳಿಂದ ಕಂಡು ಬರುತ್ತದೆ. ಕೆಂಜಡೇಶ್ವರ ಸ್ವಾಮಿಗಳು ತಮ್ಮ ಜೀವಿತ ಅವಧಿಯಲ್ಲಿ ಮಂತ್ರವಾಡಿಯ ಬೆಟ್ಟದಲ್ಲಿ ಪ್ರತಿ ವರ್ಷ ಪುಷ್ಯ ಮಾಸದ ಅಮಾವಾಸ್ಯೆ ಸಂದರ್ಭದಲ್ಲಿ ಮೂರು ದಿನಗಳ ಕಾಲ ಜಾತ್ರೆಯನ್ನು ವೈಭವದಿಂದ ಜರುಗಿಸಲು ಚಾಲನೆ ನೀಡಿದರು. ಮಹಿಳೆಯರಿಗೆ ಪುರುಷ ಸಮಾನ ಸ್ಥಾನವನ್ನು ನೀಡಬೇಕೆಂದು ಈಗಿನ ಸಂದರ್ಭದಲ್ಲಿ ಮಹಿಳೆಯರು ಹೋರಾಟ ಮಾಡುತ್ತಿದ್ದಾರೆ. ಆದರೆ ಒಂದು ಶತಮಾನದ ಹಿಂದೆ ಕೆಂಜಡೇಶ್ವರರು ಮಹಿಳೆಯರಿಗೂ ಸಮಾನ ಸ್ಥಾನವನ್ನು ನೀಡಬೇಕೆಂದು ಪ್ರತಿಪಾದಿಸುವ ಮೂಲಕ ಜಾತ್ರೆಯ ಎರಡನೆಯ ದಿನ ಪಾರ್ವತಿ ರಥೋತ್ಸವ ಎನ್ನುವ ಘೋಷಣೆ ಮಾಡಿ ಮಹಿಳೆಯರೇ ರಥವನ್ನು ಬೆಟ್ಟದಿಂದ ಕೆಳ ಹಂತದವರಗೆ ತೆಗೆದುಕೊಂಡು ಹೋಗಿ ಪುನಃ ಬೆಟ್ಟಕ್ಕೆ ರಥವನ್ನು ತೆಗೆದುಕೊಂಡು ಬರುವ ಪರಿಪಾಠವನ್ನು ರೂಪಿಸಿಕೊಟ್ಟಿರುವದು ವಿಶೇಷ. ಈ ಸಂಪ್ರದಾಯ ಪ್ರತಿವರ್ಷವೂ ಮಂತ್ರವಾಡಿ ಬೆಟ್ಟದಲ್ಲಿ ನಡೆಯುತ್ತಿರುವುದು ಆಕರ್ಷಣೀಯವಾಗಿದೆ. ಇದನ್ನು ನೋಡಲು ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯ ಜನರು ಬೆಟ್ಟಕ್ಕೆ ಧಾವಿಸುತ್ತಾರೆ.

ಮಂತ್ರವಾಡಿ ರೇವಣಸಿದ್ದೇಶ್ವರ ಮಠದ ಪ್ರಸ್ತುತ ಪೀಠಾಧಿಕಾರಿ ಸಿದ್ದರಾಮೇಶ್ವರ ಸ್ವಾಮಿಗಳು ಕೆಂಜಡೇಶ್ವರ ಮಹಾಸ್ವಾಮಿಗಳ ಎಲ್ಲ ಸಂಪ್ರದಾಯಗಳನ್ನು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ. ಶ್ರೀ ಮಠ ಹಾಗೂ ಬೆಟ್ಟಕ್ಕೆ ಬರುವ ಭಕ್ತಾಧಿಗಳಿಗೆ ನಿರಂತರ ಅನ್ನಪ್ರಸಾದ ವ್ಯವಸ್ಥೆ ಹಾಗೂ ಆಶೀರ್ವಾದ ನೀಡುವ ಕೈಂಕರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ