ಕನ್ನಡಪ್ರಭ ವಾರ್ತೆ ಶಹಾಪುರ.
ಪ್ರತಿಭಾವಂತ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಹಿರಿಯ ಪತ್ರಕರ್ತ ಮಾನು ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಎಂದು ಹಿರಿಯ ಸಾಹಿತಿ, ಸಂಶೋಧಕ ಡಿ.ಎನ್.ಅಕ್ಕಿ ಕಂಬನಿ ಮಿಡಿದರು. ದಿ. ವೆಂಕಟೇಶ ಮಾನು ಅವರ ಪಾರ್ಥಿವ ಶರೀರದ ದರ್ಶನ ನಂತರ ಅವರ ಗೆಳೆಯರ ಬಳಗದಿಂದ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ನುಡಿ ನಮನಗಳನ್ನು ಸಲ್ಲಿಸಿದರು.ಹಿರಿಯ ಪತ್ರಕರ್ತ ವೆಂಕಟೇಶ ಮಾನು ಸ್ವಾಭಿಮಾನಿ ಮತ್ತು ವಸ್ತುನಿಷ್ಠ ಬರಹಗಾರರಾಗಿದ್ದರು. ಆದರೆ ಹಲವು ರಹಸ್ಯಗಳು ಇಂದಿಗೂ ಅವರೊಡನೆ ಸಾಗಿರುವುದು ದುರಂತ. ಅವರ ಅತೀವ ಸ್ವಾಭಿಮಾನದ ಬದುಕೇ ಇಂದು ಇಹಲೋಕ ತ್ಯಜಿಸುವ ಸ್ಥಿತಿ ಬಂದಿದೆ ಎಂಬ ಕೊರಗು ಇಂದು ನಮಗೆಲ್ಲರಿಗೂ ಕಾಡುತ್ತಿದೆ. ಇವರ ಬದುಕು ಇತರರಿಗೆ ಪಾಠವಾಗಲಿ. ಯಾವುದೇ ಸಮಸ್ಯೆ ಇರಲಿ ಆತ್ಮೀಯತೆ ಇರುವ ಒಂದಿಬ್ಬರು ಗೆಳೆಯರೊಡನೆ ಕಷ್ಟ, ಸುಖ ಸಮಸ್ಯೆ ಹಂಚಿಕೊಳ್ಳಬೇಕು. ಆಗ ಅದಕ್ಕೊಂದು ಮಾರ್ಗ ದೊರೆಯಲಿದೆ ಎಂದರು.
ಸಂಯುಕ್ತ ಕರ್ನಾಟಕ ಕಲ್ಬುರ್ಗಿ ವೃತ್ತದ ಸಂಪಾದಕರಾದ ಸುಭಾಷ ಬಣಗಾರ ಮಾತನಾಡಿ, ಹಲವು ವರ್ಷಗಳಿಂದ ಮಾನು ಅವರು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡಿದ್ದಾರೆ. ಅವರೊಬ್ಬ ಉತ್ತಮ ಬರಹಗಾರರು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಂಡವರು ಎಂದು ಶ್ಲಾಘಿಸಿದರು.ಹಿರಿಯ ಪತ್ರಕರ್ತ ದೇವು ಪತ್ತಾರ ಮಾತನಾಡಿ, ಚಿಕ್ಕಂದಿನಿಂದಲೂ ನನ್ನ ಒಡನಾಡಿಯಾಗಿದ್ದ, ಮಾನು, ಅಪ್ರತಿಭಾವಂತ ಬರಹಗಾರರಾಗಿದ್ದರು. ಸೈಕಲಾಜಿ ಬಗ್ಗೆ ವಿದ್ಯಾಭ್ಯಾಸ ಮಾಡಿದ್ದ ಅವರು ಹೊರ ದೇಶಗಳಿಗೆ ಸೈಕಲಾಜಿ ಬಗ್ಗೆ ಮಹಾ ಪ್ರಬಂಧಗಳನ್ನು ಬರೆದು ಕಳುಹಿಸುತ್ತಿದ್ದರು ಎಂದು ಅವರ ಸಾಧನೆಗಳನ್ನು ನೆನಪಿಸಿಕೊಂಡರು.
ಈ ವೇಳೆ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಶಿವಣ್ಣ ಇಜೇರಿ ಮತ್ತು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ನುಡಿ ನಮನ ಸಲ್ಲಿಸಿದರು. ಕಾನಿಪ ಮಾಜಿ ಜಿಲ್ಲಾಧ್ಯಕ್ಷ ಇಂದೂಧರ ಸಿನ್ನೂರ, ನಾರಾಯಣಾಚಾರ್ಯ ಸಗರ, ಗುರು ಕಾಮಾ, ನರಸಿಂಗ್, ರಾಘವೇಂದ್ರ ಹಾರಣಗೇರಾ ಇತರರು ಉಪಸ್ಥಿತರಿದ್ದರು.