ಹಸ್ತಪ್ರತಿಗಳು ನಮ್ಮ ಇತಿಹಾಸದ ಕನ್ನಡಿ: ಸುರೇಶಕುಮಾರ್

KannadaprabhaNewsNetwork |  
Published : Oct 03, 2026, 02:45 AM IST
ಫೋಟೋವಿವರ- (1ಎಚ್‌ಪಿಟಿ6)  ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಗುರುವಾರ ನಡೆದ ಹಸ್ತಪ್ರತಿಗಳು ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಸಂರಕ್ಷಣೆ ಕುರಿತ ವಿಶೇಷ ಉಪನ್ಯಾಸ ಮಾಲೆಯ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾದೆಮಿ, ಬೆಂಗಳೂರಿನ ಕಾರ್ಯಕ್ರಮ ಅಧಿಕಾರಿ ಎಲ್. ಸುರೇಶ್ ಕುಮಾರ್ ಮಾತನಾಡಿದರು | Kannada Prabha

ಸಾರಾಂಶ

ತಾಳೆಗರಿ, ಕಾಗದ ಸೇರಿದಂತೆ ವಿವಿಧ ವಸ್ತುಗಳ ಮೇಲೆ ಕೈಬರಹದಲ್ಲಿ ರಚಿಸಲಾದ ಹಸ್ತಪ್ರತಿಗಳು ಕೇವಲ ಹಳೆಯ ಬರಹಗಳಲ್ಲ, ಅವು ನಮ್ಮ ಪೂರ್ವಜರ ಜ್ಞಾನ ಮತ್ತು ಬದುಕಿನ ಅಮೂಲ್ಯ ಸಾಕ್ಷ್ಯಗಳಾಗಿವೆ.

ಹೊಸಪೇಟೆ: ನಮ್ಮ ಹಸ್ತಪ್ರತಿ ನಮ್ಮ ಇತಿಹಾಸದ ಕನ್ನಡಿ. ಅವುಗಳ ಸಂರಕ್ಷಣೆ ನಮ್ಮ ಭವಿಷ್ಯದ ಜವಾಬ್ದಾರಿ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಹಿತ್ಯ ಅಕಾಡಮಿ ಅಧಿಕಾರಿ ಎಲ್.ಸುರೇಶ್ ಕುಮಾರ್ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಗುರುವಾರ ಸಾಹಿತ್ಯ ಅಕಾದೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಹಸ್ತಪ್ರತಿಗಳು ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಸಂರಕ್ಷಣೆ ಕುರಿತ ವಿಶೇಷ ಉಪನ್ಯಾಸ ಮಾಲೆಯ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಸಾಹಿತ್ಯ ಪರಂಪರೆ ಹೊಂದಿದ್ದು, ನಾಡಿನ ಜ್ಞಾನ, ಸಂಸ್ಕೃತಿ, ಧರ್ಮ, ವಿಜ್ಞಾನ, ಕಲೆ, ಜನಜೀವನ ಹಾಗೂ ಚಿಂತನೆ ತಲೆಮಾರುಗಳಿಂದ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಹಸ್ತಪ್ರತಿಗಳು ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.

ತಾಳೆಗರಿ, ಕಾಗದ ಸೇರಿದಂತೆ ವಿವಿಧ ವಸ್ತುಗಳ ಮೇಲೆ ಕೈಬರಹದಲ್ಲಿ ರಚಿಸಲಾದ ಹಸ್ತಪ್ರತಿಗಳು ಕೇವಲ ಹಳೆಯ ಬರಹಗಳಲ್ಲ, ಅವು ನಮ್ಮ ಪೂರ್ವಜರ ಜ್ಞಾನ ಮತ್ತು ಬದುಕಿನ ಅಮೂಲ್ಯ ಸಾಕ್ಷ್ಯಗಳಾಗಿವೆ. ಕಾವ್ಯ, ವ್ಯಾಕರಣ, ತತ್ವಶಾಸ್ತ್ರ, ವೈದ್ಯಶಾಸ್ತ್ರ, ಜ್ಯೋತಿಷ್ಯ,ಇತಿಹಾಸ ಹಾಗೂ ಸಂಗೀತ ಸೇರಿದಂತೆ ಹಲವು ಕ್ಷೇತ್ರಗಳ ಅಪರೂಪದ ಮಾಹಿತಿ ಒಳಗೊಂಡಿವೆ ಎಂದರು.

ಪಂಪ, ರನ್ನ, ಪೊನ್ನ, ವಚನಕಾರರು, ಹರಿದಾಸರು ಸೇರಿದಂತೆ ಅನೇಕ ಸಾಹಿತಿಗಳ ಕಾಲದ ಸಾಹಿತ್ಯ ಅರ್ಥಮಾಡಿಕೊಳ್ಳಲು ಹಸ್ತಪ್ರತಿ ಪ್ರಮುಖ ಆಧಾರಗಳಾಗಿವೆ. ಒಂದು ಹಸ್ತಪ್ರತಿ ನಾಶವಾದರೆ ಅದರೊಂದಿಗೆ ಒಂದು ಕಾಲಘಟ್ಟದ ಜ್ಞಾನ ಮತ್ತು ಸಂಸ್ಕೃತಿಯ ಭಾಗವೂ ಕಳೆದುಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಸಾಹತುಶಾಹಿ ಕಾಲದ ವಿದ್ವಾಂಸರು ಹಸ್ತಪ್ರತಿಗಳು, ಶಾಸನಗಳು, ಕಡತ ಹಾಗೂ ವಿವಿಧ ಬರಹದ ದಾಖಲೆ ಸಂರಕ್ಷಿಸಿ, ಮುಂದಿನ ಪೀಳಿಗೆ ಅವುಗಳನ್ನು ಓದಿ ತಿಳಿಯುವಂತೆ ಮಾಡಬೇಕು ಎಂದರು.

ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾರ್ಥಿ ಲಿಂಗರಾಜು ನಿರೂಪಿಸಿದರು. ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಆರ್. ಚನ್ನವೀರಪ್ಪ ವಂದಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ಭಾಷಾ ನಿಕಾಯದ ಡೀನ ಡಾ. ಮಾಧವ ಪೆರಾಜೆ, ಜಾಜಿ ದೇವೇಂದ್ರಪ್ಪ, ಡಾ. ಎಫ್.ಟಿ.ಹಳ್ಳಿಕೇರಿ, ಡಾ. ಸಣ್ಣಪಾಪಯ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ಪಾದರಕ್ಷೆಗಳಿಗೆ ಹೊಸ ರೂಪ ‘ದಾನ’
ಉಡುಪಿ: ನ. 27ರಿಂದ ರಾಜ್ಯ ಮಟ್ಟದ ಆಹಾರ ಮೇಳ