ಚನ್ನಪಟ್ಟಣ : ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಯ ನಂತರ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮೃಧು ಧೋರಣೆ ಅನುಸರಿಸುತ್ತಿರುವುದರ ಹಿಂದೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ಅಡಗಿದೆ.
ಚನ್ನಪಟ್ಟಣದ ಉಪಚುನಾವಣೆಯ ಟಿಕೆಟ್ ತಮಗೇ ಬೇಕು, ಟಿಕೆಟ್ ದೊರಕದಿದ್ದರೆ ತಮ್ಮ ದಾರಿ ತಮಗೆ ಎಂಬ ಸಂದೇಶ ನೀಡಿದ್ದ ಯೋಗೇಶ್ವರ್, ದೆಹಲಿ ಭೇಟಿ ನಂತರ ಆಡಿದ ಮಾತುಗಳು ಈಗ ರಾಜಕೀಯ ಜಗಲಿಕಟ್ಟೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಹಠದ ಧೋರಣೆ ಅನುಸರಿಸುತ್ತಿದ್ದ ಯೋಗೇಶ್ವರ್ ಇದೀಗ ಏಕಾಏಕಿ ತಣ್ಣಗಾಗಿದ್ದಾರೆ. ಟಿಕೆಟ್ ವಿಚಾರದಲ್ಲಿ ಎನ್‌ಡಿಎ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂಬುದಾಗಿ ಘೋಷಿಸಿದ್ದಾರೆ. ಇದರ ಹಿಂದೆ ಒಂದು ಕಡೆ ಬಿಜೆಪಿ ವರಿಷ್ಠರ ಸೂಚನೆಯನ್ನು ಪಾಲಿಸಿದಂತೆಯೂ ಆಗಬೇಕು, ಅದೇ ವೇಳೆ ಕಾಂಗ್ರೆಸ್‌ಗೂ ಚೆಕ್‌ಮೇಟ್ ಇಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ಇದೆ.
ಕಾದುನೋಡುವ ತಂತ್ರ: ಚನ್ನಪಟ್ಟಣ ಉಪಚುನಾವಣೆಯ ಮೈತ್ರಿ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ಯೋಗೇಶ್ವರ್ ಸಾಕಷ್ಟು ಕಸರತ್ತು ನಡೆಸಿದ್ದರು. ಟಿಕೆಟ್ ವಿಚಾರದಲ್ಲಿ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಂಡಾಯದ ಸೂಚನೆಯನ್ನು ನೀಡಿದ್ದರು. ಚನ್ನಪಟ್ಟಣದಲ್ಲಿ ಸಮಾನ ಮನಸ್ಕರ ವೇದಿಕೆ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಲು ತಯಾರಿ ನಡೆಸಿದ್ದರು. ಆದರೆ, ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಸಮಾವೇಶವನ್ನು ರದ್ದುಗೊಳಿಸಿದ್ದರು.
ಆ ನಂತರ ಯೋಗೇಶ್ವರ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ವರಿಷ್ಠರು ಆತುರದ ನಿರ್ಧಾರ ಕೈಗೊಳ್ಳದಂತೆ ತಾಕೀತು ಮಾಡಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಲು ಸಿದ್ಧ ಎನ್ನುತ್ತಿದ್ದ ಯೋಗೇಶ್ವರ್ ಹೈಕಮಾಂಡ್ ಭೇಟಿಯ ಬಳಿಕ ಇದೀಗ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಇವರ ಈ ನಡೆಯ ಹಿಂದೆ ಒಂದು ಕಡೆ ಟಿಕೆಟ್ ವಿಚಾರದಲ್ಲಿ ಮುಂದೆ ಆಗುವ ರಾಜಕೀಯ ಬೆಳವಣಿಗೆಗಳನ್ನು ಕಾದುನೋಡುವ ತಂತ್ರಗಾರಿಕೆ ಇದ್ದು, ಇದೇ ವೇಳೆ ವರಿಷ್ಠ ಸೂಚನೆ ಪಾಲಿಸುವ ಮೂಲಕ ವರಿಷ್ಠರ ಮನಗೆಲ್ಲುವ ಇರಾದೆ ಎನ್ನಲಾಗಿದೆ.
ಜೆಡಿಎಸ್‌ನಿಂದ ಸ್ಪರ್ಧೆಗೂ ಸೈ!: ಇನ್ನು ಈ ಹಿಂದೆ ಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಷ್ಟಾಗಿ ಆಸಕ್ತಿ ತೋರದ ಸೈನಿಕ, ಇದೀಗ ಅಂಥ ವಾತಾವರಣ ನಿರ್ಮಾಣವಾದರೆ ವರಿಷ್ಠರ ಸೂಚನೆಯಂತೆ ನಡೆಯುವುದಾಗಿ ತಿಳಿಸುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ತಮ್ಮ ಸ್ಪರ್ಧೆಯ ವಿಚಾರವನ್ನು ವರಿಷ್ಠರ ಹೆಗಲಿಗೆ ಏರಿಸುವ ಮೂಲಕ ತಾವು ತಮ್ಮ ನಿರ್ಧಾರವನ್ನು ನಿಗೂಢವಾಗಿಡುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಚೆಕ್‌ಮೇಟ್: ಉಪಚುನಾವಣೆಯ ವಿಚಾರದಲ್ಲಿ ಮೈತ್ರಿ ಪಕ್ಷಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಮೈತ್ರಿಯಲ್ಲಿ ಗೊಂದಲ ಏರ್ಪಟ್ಟು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಲ್ಲಿ ಲಾಭ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದೆ. ಇದೇ ಲೆಕ್ಕಾಚಾರದಲ್ಲಿ ಇರುವ ಕಾಂಗ್ರೆಸ್ ಒಂದು ಕಡೆ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿದ್ದರೂ ಸಹ ಇನ್ನು ಅಭ್ಯರ್ಥಿ ವಿಚಾರವನ್ನು ಅಂತಿಮಗೊಳಿಸಿಲ್ಲ. ಚನ್ನಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮರ್ ವಿಶೇಷ ಆಸಕ್ತಿ ತೋರುತ್ತಿದ್ದಾರೆ. ಆದರೆ, ಅಭ್ಯರ್ಥಿ ಯಾರೆಂದು ಘೋಷಿಸುತ್ತಿಲ್ಲ. ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಕಾಂಗ್ರೆಸ್‌ನಿಂದ ಸಾಕಷ್ಟು ಹೆಸರುಗಳು ಮುನ್ನೆಲೆಗೆ ಬಂದವರಾದರೂ ಯಾವ ಹೆಸರೂ ಅಂತಿಮಗೊಂಡಿಲ್ಲ.
ಎನ್‌ಡಿಎ ಅಭ್ಯರ್ಥಿಯನ್ನು ನೋಡಿಕೊಂಡು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವ ಇರಾದೆಯಲ್ಲಿರುವಂತೆ ಇದೆ. ಇದೇ ವೇಳೆ ಎನ್‌ಡಿಎನಿಂದ ಒಮ್ಮತದ ಅಭ್ಯರ್ಥಿ ಕಣಕ್ಕೆ ಇಳಿದು ಎರಡು ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿದಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರ ಸುಲಭದ ತುತ್ತಲ್ಲ ಎಂಬ ಅರಿವಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಯೋಗೇಶ್ವರ್ ಟಿಕೆಟ್ ವಿಚಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿದ್ದು, ಟಿಕೆಟ್ ಸಿಗಲಿ ಸಿಗದಿರಲಿ ಪಕ್ಷದಲ್ಲೇ ಇರುತ್ತೇನೆ ಎನ್ನುವ ಮೂಲಕ ಕಾಂಗ್ರೆಸ್‌ಗೆ ಚೆಕ್‌ಮೇಟ್ ಇಡುವ ತಂತ್ರಗಾರಿಕೆ ನಡೆಸಿದ್ದಾರೆ ಎನ್ನುವ ವ್ಯಾಖ್ಯಾನಗಳು ರಾಜಕೀಯ ಅಂಗಳದಲ್ಲಿ ಕೇಳಿಬರುತ್ತಿದೆ.