ಶಿವಮೊಗ್ಗ: ಕುಲ ಕಸುಬನ್ನು ಗೌರವಿಸಿದ ಸ್ಥಿತಿಯಿಂದಾಗಿ ಬಹುತೇಕ ಸಮಾಜದ ಜನರಲ್ಲಿ ಆತ್ಮವಿಶ್ವಾಸವೇ ಇಲ್ಲದಂತಾಗಿದ್ದು, ವ್ಯವಸ್ಥೆಯ ದುರಂತವಾಗಿದೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ವಿಷಾದಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ಎಲ್.ಜಿ.ಹಾವನೂರು ವರದಿ ಕೂಡ ಸುಲಭವಾಗಿ ಬರಲಿಲ್ಲ. ಅದೇ ರೀತಿ ಪರಿಸ್ಥಿತಿ ಕಾಂತರಾಜ್ ವರದಿ ಬಿಡುಗಡೆಯಲ್ಲಿಯೂ ಇದೆ. ಈಗ ಗೊಂದಲಕ್ಕೆ ಒಳಗಾಗಿರುವುದು ಸಮೀಕ್ಷೆಯೋ ಅಥವಾ ಗಣತಿಯೋ ಎಂಬುದು ಚರ್ಚೆಯ ವಿಷಯವಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡುವ ಬಗ್ಗೆ ಸಂವಿಧಾನದಲ್ಲಿಯೇ ಸ್ಪಷ್ಟವಾಗಿಯೇ ಇದೆ ಎಂದರು.ಇದು ಜಾತಿ ಗಣತಿಯಲ್ಲ, ಸಮೀಕ್ಷೆ. ಇದು ಸಾಂದರ್ಭಿಕ ಸಮೀಕ್ಷೆಯೇ ಹೊರತು ಇದೇ ಅಂತಿಮವಲ್ಲ. ಗಣತಿ ಮಾಡಲು ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಸಾಮಾಜಿಕ ನ್ಯಾಯ ಕಟ್ಟಕಡೆಯ ಸಮುದಾಯಗಳಿಗೆ ಸಿಕ್ಕಿಲ್ಲ. ಅದನ್ನು ಕೊಡುವ ಸಲುವಾಗಿ ವರದಿ ಜಾರಿಯಾಗಬೇಕಿದೆ. ಆದರೆ ಏಳು ವರ್ಷ ಕಳೆದರೂ ವರದಿ ಬಿಡುಗಡೆಯಾಗಲಿಲ್ಲ. ಸುಲಭವಾಗಿ ಈ ವರದಿ ಸ್ವೀಕಾರ ಕೂಡ ಆಗಿಲ್ಲ. ಈ ಸಂಬಂಧ ಸಾಕಷ್ಟು ಹೋರಾಟ ಕೂಡ ನಡೆಸಲಾಯಿತು. ಅಧ್ಯಕ್ಷರ ಮೇಲೆ ಒತ್ತಡ ಹೇಗೆ ಇರುತ್ತದೆ ಎಂದರೆ ಮೂರು ವರ್ಷ ಅಧ್ಯಯನ ಮಾಡಿದ ಬಳಿಕವೂ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂದು ಹೇಳಲಾಗಿತ್ತು. ಇದೆಲ್ಲವೂ ಒತ್ತಡದ ತಂತ್ರದ ಭಾಗವೇ ಆಗಿತ್ತು. ಅದೇನೆ ಇದ್ದರೂ ರಾಜ್ಯ ಸರ್ಕಾರ ಈ ವರದಿ ಜಾರಿಗೆ ತರಲೇಬೇಕಿದೆ ಎಂದು ಹೇಳಿದರು.ಪ್ರಸ್ತುತ ಹಿಂದುಳಿದವರ್ಗದವನೊಬ್ಬ ಶಾಸಕನಾಗುತ್ತೇನೆಂದು ಧೈರ್ಯವಾಗಿ ಹೇಳುವ ಯಾವುದೇ ವಾತಾವರಣವಿಲ್ಲ. ಸೋಷಿಯಲ್ ಎಂಜಿನಿಯರಿಂಗ್‌ನಿಂದ ಸೋಷಿಯಲ್ ಜಸ್ಟೀಸ್ ಸಿಕ್ಕುತ್ತಿದೆಯಾ ಎನ್ನುವುದನ್ನು ಚಿಂತಿಸಬೇಕಿದೆ ಎಂದರು.ಎಚ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ನಾಯಕರಾದ ವಿ.ರಾಜು, ತೀ.ನಾ.ಶ್ರೀನಿವಾಸ್, ವರಲಕ್ಷ್ಮೀ, ಆರ್.ಮೋಹನ್, ಅಣ್ಣಪ್ಪ ಕೋಟೆ, ಅಬೀಬುಲ್ಲಾ, ನಗರ ಮಹಾದೇವಪ್ಪ, ಆರ್.ಟಿ.ನಟರಾಜ ಮತ್ತಿತರರು ಇದ್ದರು.