ಕುಷ್ಟಗಿ: ಮಾಜಿ ದೇವದಾಸಿಯರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಂಡು ಎಲ್ಲ ಮಹಿಳೆಯರಂತೆ ಮುಖ್ಯವಾಹಿನಿಗೆ ಬರಬೇಕು ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಪೂರ್ಣಿಮಾ ಸಲಹೆ ನೀಡಿದರು.
ಪಟ್ಟಣದ ವೀರಮಹೇಶ್ವರಿ ಸಮುದಾಯ ಭವನದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳು (ಯೋಜನೆ 2010) ಮಾಜಿ ದೇವದಾಸಿಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಾಜಿ ದೇವದಾಸಿಯರಿಗೆ ಸರ್ಕಾರ ಮಾಸಿಕ ₹1500 ಕೊಡುತ್ತದೆ ಹಾಗೂ ವಸತಿ ಸೌಲಭ್ಯ, ಸಾಲ ಸೌಲಭ್ಯ ನೀಡುತ್ತದೆ. ದೇವದಾಸಿಯಂತಹ ಅನಿಷ್ಟ ಪದ್ಧತಿ ಎಲ್ಲಾದರೂ ಕಂಡು ಬಂದಲ್ಲಿ ತಕ್ಷಣವೇ ನಮ್ಮ ಇಲಾಖೆಯ ಸಿಬ್ಬಂದಿಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಮಾತನಾಡಿ, ಯಾವುದೇ ಕಾಯಿಲೆ ಇದ್ದರೂ ಸಂಕೋಚ ಪಡದೆ ವೈದ್ಯರನ್ನು ಸಂಪರ್ಕಿಸಬೇಕು ಎಂದರು.ಸುಮಾರು 250 ಮಾಜಿ ದೇವದಾಸಿಯರಿಗೆ ಆರೋಗ್ಯ ತಪಾಸಣಾ ಮಾಡಲಾಯಿತು. ಐಸಿಟಿಸಿ, ಬಿಪಿ, ಮಧುಮೇಹ ಸಾಮಾನ್ಯ ತಪಾಸಣೆ ಮಾಡಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಎಲ್. ಪೂಜೇರಿ ಕಾರ್ಯಕ್ರಮ ಉದ್ಘಾಟಿಸದಿರು. ಕಾನೂನು ಸೇವೆಗಳ ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಚೌಳಗಿ ಮಾತನಾಡಿದರು,ಸಿಡಿಪಿಒ ಯಲ್ಲಮ್ಮ ಹಂಡಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸತೀಶ ಶಿರಸ್ತೇದಾರರು, ವಕೀಲ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ, ಕ್ರೈಂ ಪಿಎಸ್‌ಐ ಮಾನಪ್ಪ ವಾಲ್ಮೀಕಿ, ಸರ್ಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ, ಶಿವಕುಮಾರ್ ದೊಡ್ಮನಿ ಬಸವರಾಜ್ ಲಿಂಗಸೂರು, ಮೈನುದ್ದೀನ್, ಚಂದಾಲಿಂಗ ಕಲಾಲಬಂಡಿ, ನಾಗರಾಜ ಕೆ., ಬಸವರಾಜ ಸಾರಥಿ, ವೆಂಕಟೇಶ ಹೊಸಮನಿ, ದಾದೇಸಾಹೇಬ ಹಿರೇಮನಿ, ಮರಿಯಪ್ಪ ಮುಳ್ಳೂರು, ರೇಣುಕಾ ಮಠದ, ಸಕ್ಕುಬಾಯಿ ಭಾಗವಹಿಸಿದ್ದರು.