ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌

| N/A | Published : Aug 18 2025, 11:36 AM IST

SSLC PuC
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ 2023-24ರಲ್ಲಿ ಜಾರಿಗೆ ತಂದ ವರ್ಷಕ್ಕೆ ಮೂರೂ ಪರೀಕ್ಷೆ ನಡೆಸುವ ಪ್ರಯೋಗ ಸತತ 2ನೇ ವರ್ಷವೂ ಫಲಿತಾಂಶ ಕುಸಿತದೊಂದಿಗೆ ವಿಫಲವಾಗಿದೆ. ಇದರಿಂದ ಈ ಮೂರು ಪರೀಕ್ಷೆ ಅಗತ್ಯ ಬಗ್ಗೆಯೇ ಪ್ರಶ್ನೆ ಹುಟ್ಟುವಂತೆ ಮಾಡಿದೆ.

 ಲಿಂಗರಾಜು ಕೋರಾ

 ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ 2023-24ರಲ್ಲಿ ಜಾರಿಗೆ ತಂದ ವರ್ಷಕ್ಕೆ ಮೂರೂ ಪರೀಕ್ಷೆ ನಡೆಸುವ ಪ್ರಯೋಗ ಸತತ 2ನೇ ವರ್ಷವೂ ಫಲಿತಾಂಶ ಕುಸಿತದೊಂದಿಗೆ ವಿಫಲವಾಗಿದೆ. ಇದರಿಂದ ಈ ಮೂರು ಪರೀಕ್ಷೆ ಅಗತ್ಯ ಬಗ್ಗೆಯೇ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಪ್ರಸಕ್ತ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1, 2 ಮತ್ತು 3ರ ಕ್ರೋಢೀಕೃತ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ.7ರಷ್ಟು ಕುಸಿತಗೊಂಡು ‘ಬಿ’ ಗ್ರೇಡ್‌ಗೆ ಇಳಿದಿದೆ. ಅದೇ ರೀತಿ ದ್ವಿತೀಯ ಪಿಯುಸಿ ಕ್ರೋಢೀಕೃತ ಫಲಿತಾಂಶ ಶೇ.4.78ರಷ್ಟು ಇಳಿಕೆಯಾಗಿದೆ. ವಿಪರ್ಯಾಸವೆಂದರೆ ಫಲಿತಾಂಶ ಕುಸಿತಕ್ಕೆ ಸರ್ಕಾರ ಮಕ್ಕಳನ್ನೇ ಹೊಣೆಯಾಗಿಸಿದೆ. 1ರಿಂದ 9ನೇ ತರಗತಿ ವರೆಗೆ ಮಕ್ಕಳಲ್ಲಿ ಕಲಿಕಾ ಸಾಧನೆ ಕಡಿಮೆಯಾಗಿರುವುದು 10ನೇ ತರಗತಿ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ದ್ವಿತೀಯ ಪಿಯುಸಿಯಲ್ಲಿ ಫಲಿತಾಂಶ ಏರಿಳಿತ ಸಾಮಾನ್ಯ ಎಂದು ಕೆಲ ಸಮೀಕ್ಷೆಗಳನ್ನು ಆಧರಿಸಿ ಸದನಕ್ಕೆ ನೀಡಿರುವ ಉತ್ತರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿರುವ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪರೀಕ್ಷೆ 1, 2 ಮತ್ತು 3 ಪರೀಕ್ಷೆಗಳ ಕ್ರೋಢೀಕೃತ ಫಲಿತಾಂಶ ಅವಲೋಕಿಸಿದಾಗ ಈ ಬಾರಿ ಎರಡೂ ಪರೀಕ್ಷಾ ಫಲಿತಾಂಶ ಕಳೆದ ಬಾರಿಗಿಂತ ಕಡಿಮೆಯಾಗಿರುವುದು ಕಂಡುಬರುತ್ತದೆ. ಕಳೆದ ವರ್ಷ (2023-24) ಎಸ್ಸೆಸ್ಸೆಲ್ಸಿಯಲ್ಲಿ ಮೂರು ಪರೀಕ್ಷೆಗಳ ಪ್ರಯೋಗ ವಿಫಲವಾದರೂ ದ್ವಿತೀಯ ಪಿಯುಸಿಯಲ್ಲಿ ಅಲ್ಪಪ್ರಮಾಣದ ಫಲಿತಾಂಶ ಹೆಚ್ಚಳವಾಗಿ ಸಮಾಧಾನ ತಂದಿತ್ತು. ಆದರೆ, ಈ ಬಾರಿ ಎರಡೂ ಪರೀಕ್ಷೆಗಳಲ್ಲೂ ಫಲಿತಾಂಶ ಇಳಿಕೆಯಾಗಿದೆ.

2022-23ನೇ ಸಾಲಿನ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯ ಕ್ರೋಢೀಕೃತ ಫಲಿತಾಂಶಕ್ಕೆ(ಶೇ.87) ಹೋಲಿಸಿದರೆ 2023-24ನೇ ಎಸ್ಸೆಸ್ಸೆಲ್ಸಿಯ ಮೂರೂ ಪರೀಕ್ಷೆಗಳ ಒಟ್ಟಾರೆ ಫಲಿತಾಂಶ, ಏಕಾಏಕಿ ಶೇ.20ರಷ್ಟು ಗ್ರೇಸ್ ಅಂಕ ನೀಡಿ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಪಾಸು ಮಾಡಿದಾಗ್ಯೂ ಶೇ.81.6ರಷ್ಟು ದಾಖಲಾಗಿ ಸುಮಾರು ಶೇ.6ರಷ್ಟು ಕಡಿಮೆಯಾಗಿತ್ತು. ಆದರೆ, ಈ ಬಾರಿ 2024-25ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದ 8,68,385 ವಿದ್ಯಾರ್ಥಿಗಳಲ್ಲಿ 6,45,273 ಮಂದಿ ಉತ್ತೀರ್ಣರಾಗಿದ್ದು ಶೇ.74.31 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಶೇ.7.3ರಷ್ಟು ಇಳಿಕೆಯಾಗಿದೆ. ಈ ಬಾರಿ ಗ್ರೇಸ್‌ ಅಂಕ ಪ್ರಮಾಣ ಶೇ.10ಕ್ಕೆ ಇಳಿಸಿದ್ದು ಗಮನಾರ್ಹ.

ಇನ್ನು, ದ್ವಿತೀಯ ಪಿಯುಸಿಯಲ್ಲಿ ಕಳೆದ ಬಾರಿ ಶೇ.4ರಷ್ಟು ಏರಿಕೆಯಾಗಿದ್ದ ಕ್ರೋಢೀಕೃತ ಫಲಿತಾಂಶ ಈ ಬಾರಿ 4.78ರಷ್ಟು ಕಡಿಮೆಯಾಗಿದೆ. ಮೂರೂ ಪರೀಕ್ಷೆಗಳಿಗೆ ಒಟ್ಟು 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 5,45,032 ಮಂದಿ ಉತ್ತೀರ್ಣರಾಗುವ ಮೂಲಕ ಶೇ.85.19ರಷ್ಟು ಫಲಿತಾಂಶ ಬಂದಂತಾಗಿದೆ. 2023-24ನೇ ಸಾಲಿನ ಶೇ.89.97ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ 4.78ರಷ್ಟು ಕಡಿಮೆಯಾಗಿದೆ. ಇದರಿಂದ ಮೂರು ಪರೀಕ್ಷೆಗಳ ಪ್ರಯೋಗ ಯಶಸ್ವಿಯಾಗಿಲ್ಲ. ಇದನ್ನು ಮುಂದುವರೆಸಬೇಕಾ? ಬೇಡವಾ? ಎನ್ನುವ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ ಎನ್ನುವ ಅಭಿಪ್ರಾಯ ಶಿಕ್ಷಣ ಕ್ಷೇತ್ರದಲ್ಲಿ ಈಗ ಕೇಳಿಬರುತ್ತಿದೆ.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಕುಸಿತಕ್ಕೆ ಕಾರಣ ಏನು ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಅವರು ಸದನದಲ್ಲಿ ಕೇಳಿರುವ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದ್ದು, ಫಲಿತಾಂಶ ಕುಸಿತಕ್ಕೆ ಮಕ್ಕಳನ್ನೇ ಹೋಣೆ ಮಾಡಲಾಗಿದೆ. ಅಲ್ಲದೆ, ಹಿಂದಿನ ತರಗತಿಗಳಲ್ಲಿ ಅರ್ಥಾತ್‌ 1ರಿಂದ 9ನೇ ತರಗತಿಗಳ ವರೆಗೆ ಮಕ್ಕಳ ಕಲಿಕಾ ಸಾಧನೆ ಕಡಿಮೆಯಾಗಿದೆ ಎಂದು ಸಮೀಕ್ಷೆಗಳನ್ನು ಆಧರಿಸಿ ಉತ್ತರ ನೀಡಿದ್ದಾರೆ. ಇದರಿಂದ ಪರೋಕ್ಷವಾಗಿ ಸರ್ಕಾರ ಫಲಿತಾಂಶ ವೈಫಲ್ಯಕ್ಕೆ ತನ್ನನ್ನು ತಾನೇ ಹೊಣೆ ಎಂದು ಹೇಳಿಕೊಂಡಂತಾಗಿದೆ ಎಂದು ವಿಶ್ಲೇಷಿಸುತ್ತಾರೆ ತಜ್ಞರು.

ಅಸರ್ ವರದಿ 2024 ಹಾಗೂ ಪರಾಕ್‌ ರಾಷ್ಟ್ರೀಯ ಸರ್ವೇಕ್ಷಣ್‌ 2024ರ ಸಮೀಕ್ಷೆಗಳಲ್ಲಿ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಎರಡರಲ್ಲೂ 1ನೇ ತರಗತಿಯಿಂದ ಮುಂದುವರೆದ ತರಗತಿಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಧನೆ ಕಡಿಮೆಯಾಗಿರುವುದರಿಂದ 10ನೇ ತರಗತಿ ಫಲಿತಾಂಶ ಮೇಲೆ ಪರಿಣಾಮ ಬೀರಿದೆ. ಇನ್ನು ದ್ವಿತೀಯ ಪಿಯುಸಿಯಲ್ಲಿ ಫಲಿತಾಂಶ ಏರಿಳಿತ ಸಾಮಾನ್ಯ. ಈ ಬಾರಿ ಫಲಿತಾಂಶ ಕುಸಿತವಾಗಿರುವುದರಿಂದ ಸುಧಾರಣೆಗೆ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಉತ್ತರದಲ್ಲಿ ಸಚಿವರು ಸಮಜಾಯಿಷಿ ನೀಡಿದ್ದಾರೆ.

Read more Articles on