ರಾಜ್ಯಾದ್ಯಂತ ದೇಗುಲಗಳಲ್ಲಿ ಇಂದು ರಾಮೋತ್ಸವಕ್ಕೆ ಸಿದ್ಧತೆ

KannadaprabhaNewsNetwork |  
Published : Jan 22, 2024, 02:15 AM ISTUpdated : Jan 22, 2024, 11:34 AM IST
Rammandir

ಸಾರಾಂಶ

ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ಶ್ರೀರಾಮನ ಪ್ರತಿಷ್ಠಾಪನೆ, ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸಂಭ್ರಮದ ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ಶ್ರೀರಾಮನ ಪ್ರತಿಷ್ಠಾಪನೆ, ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸಂಭ್ರಮದ ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. 

ರಾಜ್ಯದೆಲ್ಲೆಡೆ ಶ್ರೀರಾಮ, ಆಂಜನೇಯನ ದೇವಸ್ಥಾನಗಳಲ್ಲಿ ರಾಮತಾರಕ ಹವನ, ಸುಂದರ ಕಾಂಡ ಪಾರಾಯಣ, ಭಜನೆ, ದೀಪೋತ್ಸವ, ರಾಮನಾಮ ಜಪ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಭಕ್ತರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸಿದ್ದು, ರಾಮಜಪ, ಭಜನೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಜ್ಯದ ಪ್ರಮುಖ ಬೀದಿಗಳನ್ನು ಕೇಸರಿ ಧ್ವಜ ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. 

ಅಲ್ಲಲ್ಲಿ ಶ್ರೀರಾಮನ ಕಟೌಟ್‌, ಶುಭ ಕೋರುವ ಬ್ಯಾನರ್‌ಗಳು, ಪ್ರವೇಶ ದ್ವಾರಗಳು, ಪತಾಕೆಗಳು ರಾರಾಜಿಸುತ್ತಿವೆ. ಬಸ್‌, ಆಟೋ, ಟ್ಯಾಕ್ಸಿ ನಿಲ್ದಾಣಗಳೂ ಕೇಸರಿಮಯವಾಗಿದೆ.

ಹಲವು ಜಿಲ್ಲೆಗಳಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಮದ್ಯ, ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಬೆಳಗ್ಗೆ 11 ಗಂಟೆಯಿಂದ 12.45ರವರೆಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಬಿಜೆಪಿ ನಾಯಕರು ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ನಡೆಯಲಿರುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ಆಯೋಜಿಸಿರುವ ರಾಮತಾರಕ ಮಹಾಯಾಗದಲ್ಲಿ ಭಾಗವಹಿಸಿದರೆ, ಮಾಜಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಯೋಧ್ಯೆಯ ಬಾಲರಾಮ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಮನೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. 

ಅಲ್ಲದೆ, ಬಾಲರಾಮ ವಿಗ್ರಹದ ಕೃಷ್ಣಶಿಲೆ ಸಿಕ್ಕ ಮೈಸೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿರುವ ಯಾದಗಿರಿ ಜಿಲ್ಲೆಯ ರಾಮಲಿಂಗೇಶ್ವರ ಬೆಟ್ಟದಲ್ಲಿ ಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. 

ಕೊಪ್ಪಳದ ಅಂಜನಾದ್ರಿಯಲ್ಲಿ 20 ಲಕ್ಷ ರು. ವೆಚ್ಚದಲ್ಲಿ 500 ಕೆಜಿ ತೂಕದ, 9 ಅಡಿ ಎತ್ತರದ ಪಂಚಲೋಹದ ಶ್ರೀರಾಮನ ಮೂರ್ತಿಯನ್ನು ಸೋಮವಾರ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಬಾಗಲಕೋಟೆಯ ಮುಚಖಂಡಿ ಕ್ರಾಸ್‌ನಲ್ಲಿ ಪಂಚಮುಖಿ ಆಂಜನೇಯನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಮೈಸೂರಿನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಬೆಳಗ್ಗೆ 9.30ಕ್ಕೆ 2 ತಾಸು ಊದುಬತ್ತಿ ಹಚ್ಚಿ ಸಂಭ್ರಮಿಸಲಾಗುತ್ತಿದೆ. 10 ಬಗೆಯ ಮೂಲ ವಸ್ತುಗಳನ್ನು ಬಳಸಿ ತಯಾರಿಸಿರುವ 111 ಅಡಿ ಉದ್ದ ಊದುಬತ್ತಿ ಇದಾಗಿದೆ. ಉಡುಪಿಯ ಶ್ರೀಕೃಷ್ಣಮಠದಲ್ಲಿ ಸಂಜೆ 5 ರಥಗಳ ವಿಶೇಷ ರಥೋತ್ಸವ ಆಯೋಜಿಸಲಾಗಿದೆ.

ಈ ಮಧ್ಯೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವು ಖಾಸಗಿ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿದೆ. ರಾಜ್ಯದ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ವೇಷಭೂಷಣ ಸ್ಪರ್ಧೆ, ರಾಮಾಯಣಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 

ಕರಾವಳಿಯಲ್ಲಿ ಯಕ್ಷಗಾನ ಮೇಳಗಳ‍ು ಶ್ರೀರಾಮನ ಕಥಾನಕ ಪ್ರದರ್ಶನ ಏರ್ಪಡಿಸಿವೆ. ಉಡುಪಿ - ಹೆಬ್ರಿ ನಡುವೆ ಸಂಚರಿಸುವ ಕೆಲ ಖಾಸಗಿ ಬಸ್‌ಗಳಲ್ಲಿ ಇಡೀ ದಿನ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದೇ ವೇಳೆ, ಶಿವಮೊಗ್ಗ ಜಿಲ್ಲೆ ಹೊಸನಗರ ಸೇರಿ ರಾಜ್ಯದ ಹಲವೆಡೆ ಬೃಹತ್ ಶೋಭಾಯಾತ್ರೆ ಏರ್ಪಡಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!